ಕಾನೂನು ಬಾಹಿರವಾಗಿ ಆಸ್ತಿ ದಾಖಲೆ ತಿದ್ದುಪಡಿ ಆರೋಪ ; ಮೂಡುಗೊಪ್ಪ – ನಗರ ಗ್ರಾಪಂ ಪಿಡಿಓ ಮೇಲೆ ಕ್ರಮಕ್ಕೆ ಆಗ್ರಹ

0
837

ಹೊಸನಗರ: ಮೂಡುಗೊಪ್ಪ – ನಗರ ಗ್ರಾಮ ಪಂಚಾಯ್ತಿ ಪಿಡಿಓ ವಿಶ್ವನಾಥ್ ಅವರು ಕಾನೂನು ಬಾಹಿರವಾಗಿ ಆಸ್ತಿ ದಾಖಲೆ ತಿದ್ದುಪಡಿ ಮಾಡಿದ್ದು, ಇವರ ವಿರುದ್ಧ ಮೂಲ ಆಸ್ತಿ ಮಾಲೀಕರು ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಓ ಹಾಗೂ ಎಸ್‍ಪಿಯವರಿಗೆ ದೂರು ನೀಡಿದ್ದಾರೆ.

ನಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋಟಯ್ಯನ ಕೆರೆ ಚಿಕ್ಕಪೇಟೆಯ ಡಿಆರ್ ನಂ. 96ರಲ್ಲಿ ಮುತ್ತಮ್ಮ ಕೋಂ ವೆಂಕಟನಾಯ್ಕ್ ಎನ್ನುವವರಿಗೆ ಸೇರಿದ ಆಸ್ತಿಯನ್ನು ಮಾಲೀಕರು ಬದುಕಿರುವಾಗಲೇ ಅವರು ಮೃತಪಟ್ಟಿದ್ದಾರೆಂದು ಹೇಳಿ ಅನಧಿಕೃತ ವ್ಯಕ್ತಿಯೊಬ್ಬರ ಹೆಸರಿಗೆ ಡಿಮ್ಯಾಂಡ್ ಹಾಕಿಕೊಟ್ಟಿದ್ದಾರೆ.

ಆಸ್ತಿಯ ಮೂಲ ಮಾಲೀಕರಾದ ಮುತ್ತಮ್ಮ ಕೋಂ ವೆಂಕಟನಾಯ್ಕ್ ಇವರು ತಮ್ಮ ಪುತ್ರನೊಂದಿಗೆ ಪರ ಊರಿನಲ್ಲಿ ವಾಸವಾಗಿದ್ದರು. ಈ ಸಂದರ್ಭದಲ್ಲಿ ತಮ್ಮ ಆಸ್ತಿ ನೋಡಿಕೊಳ್ಳಲು ತಮ್ಮ ಸಹೋದರಿ ಸಾಕಮ್ಮ ನಾರಾಯಣ್ ಎನ್ನುವವರಿಗೆ ಬಿಟ್ಟಿದ್ದರು. ಈ ಸಂದರ್ಭದಲ್ಲಿ 2020-21ನೇ ಸಾಲಿನವರೆಗೂ ಮುತ್ತಮ್ಮ ಇವರೇ ತಮ್ಮ ಆಸ್ತಿಗೆ ಕಂದಾಯ ವಗೈರೆ ಪಾವತಿಸುತ್ತ ಬಂದಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ತಮ್ಮ ಊರಿಗೆ ಬರಲು ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಸಾಕಮ್ಮ ಇವರು ಹಣದ ಆಮಿಷವೊಡ್ಡಿ ಗ್ರಾ.ಪಂ. ಪಿಡಿಓ ಮೂಲಕ ಆಸ್ತಿಗೆ ಸಾಕಮ್ಮರ ಹೆಸರಿನಲ್ಲಿ ಡಿಮ್ಯಾಂಡ್ ಹಾಕಿಸಲಾಗಿದೆ.

ಮಾರ್ಚ್ 30ರಂದು ಊರಿಗೆ ಆಗಮಿಸಿದ ಮುತ್ತಮ್ಮ ತಮ್ಮ ಆಸ್ತಿಯ ಕಂದಾಯ ಪಾವತಿಸಲು ಹೋದಾಗ ತಮ್ಮ ಆಸ್ತಿಯ ದಾಖಲೆಯಲ್ಲಿ ಸಾಕಮ್ಮ ಅವರ ಹೆಸರಿಗೆ ಡಿಮ್ಯಾಂಡ್ ಹಾಕಿರುವುದು ಗೊತ್ತಾಗಿದೆ. ಇದನ್ನು ಪಿಡಿಓ ಬಳಿ ಪ್ರಶ್ನಿಸಿದಾಗ ಪಿಡಿಓ ವಿಶ್ವನಾಥ್, ‘ನಾನು ಅಧಿಕಾರಿ, ನನಗೆ ಸರಿ ಅನ್ನಿಸಿದ ರೀತಿ ಮಾಡಿದ್ದೇನೆ. ನೀವು ಅದನ್ನೆಲ್ಲಾ ಕೇಳಬಾರದು’ ಎಂದು ದಬಾಯಿಸಿದ್ದಾರೆ. ಈ ಬಗ್ಗೆ ಮುತ್ತಮ್ಮ ಅವರ ಮಗ ಶೇಖರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಲ್ಲದೆ, ಹಣ ಪಡೆದು ಬದುಕಿರುವ ವ್ಯಕ್ತಿಯ ಗಮನಕ್ಕೆ ಬಾರದೇ ಅವರ ಆಸ್ತಿಯನ್ನು ಮತ್ತೊಬ್ಬರಿಗೆ ಬದಲಾಯಿಸಿದ ಪಿಡಿಓ ಅಧಿಕಾರಿ ವಿರುದ್ಧ ಕೇಸು ದಾಖಲಿಸುವಂತೆ ಜಿಲ್ಲಾಧಿಕಾರಿ, ಜಿ.ಪಂ. ಸಿಇಓ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here