ಕಾಫಿನಾಡಿನ 68 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚು ಪತ್ತೆ !

0
206

ಚಿಕ್ಕಮಗಳೂರು: ‘ಜಿಲ್ಲೆಯಲ್ಲಿ 68ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚು ಪತ್ತೆಯಾಗಿವೆ. ಈ ಪಂಚಾಯಿತಿಗಳ ವ್ಯಾಪ್ತಿಯಲ್ಲಿ, ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಿ ಅರಿವು ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಸೂಚನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾಮಟ್ಟದ ಸಮಿತಿಗಳ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು. ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ವರ್ಷ ದೂರುಗಳ ಸಂಖ್ಯೆ ಹೆಚ್ಚು ಇದೆ. ಬಾಲ್ಯ ವಿವಾಹ ತಡೆಗೆ ಆದ್ಯ ಗಮನಹರಿಸಬೇಕು ಎಂದು ಹೇಳಿದರು.

ಈ ವರ್ಷ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ 26 ದೂರುಗಳು ದಾಖಲಾಗಿದ್ದು ಈ ಪೈಕಿ 25 ತಡೆಗಟ್ಟಿ ಮಕ್ಕಳನ್ನು ಪೋಷಕರ ವಶಕ್ಕೆ ನೀಡಲಾಗಿದೆ. ಒಬ್ಬ ಬಾಲಕಿಯನ್ನು ಸ್ವಯಂ ಸೇವಾ ಸಂಸ್ಥೆಯು ನೋಡಿಕೊಳ್ಳುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾ ನಾಯ್ಕ್ ತಿಳಿಸಿದರು.

ಈ ಹಿಂದೆ ಬಾಲ್ಯ ವಿವಾಹದ 17 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 12 ಪ್ರಕರಣಗಳ ಬಾಲಕಿಯರು ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

2022ರ ಮೊದಲ ತ್ರೈಮಾಸಿಕದಲ್ಲಿ 28 ಕೌಟುಂಬಿಕ ಹಿಂಸೆ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 21 ಇತ್ಯರ್ಥವಾಗಿಲ್ಲ. ಸಂರಕ್ಷಣಾಧಿಕಾರಿ ಹಂತದಲ್ಲಿಯೇ 14 ಪ್ರಕರಣಗಳು ಬಾಕಿ ಉಳಿದಿವೆ. ಪ್ರಕರಣಗಳು ದಾಖಲಾದ 90 ದಿನಗಳ ಅವಧಿಯಲ್ಲಿ ಇತ್ಯರ್ಥಗೊಳಿಸಬೇಕು ಎಂದು ಜಿಲ್ಲಾಧಿಕಾರಿ ರಮೇಶ್‌ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲ್ಲೂಕುಮಟ್ಟದ ಅಧಿಕಾರಿಗಳು ಅಂಗನವಾಡಿಗಳಿಗೆ, ಇಲಾಖೆ ಅನುದಾನ ಪಡೆಯುತ್ತಿರುವ ಸಂಸ್ಥೆಗಳಿಗೆ ನಿರಂತರವಾಗಿ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದು ಅವರು ಸೂಚನೆ ನೀಡಿದರು.

ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ, 2022ರ ಮೊದಲ ತ್ರೈಮಾಸಿಕದಲ್ಲಿ 1369ಫಲಾನುಭವಿಗಳಿಗೆ 1.34 ಕೋಟಿ ರೂ. ಸಹಾಯಧನ ನೇರವಾಗಿ ಖಾತೆಗೆ ಪಾವತಿಸಲಾಗಿದೆ. ಯೋಜನೆಯಲ್ಲಿ ಗುರಿ ಮೀರಿ ಸಾಧನೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಸ್ತೂರಿ ಬಾ ಸದನ ಸ್ವಯಂ ಸೇವಾ ಸಂಸ್ಥೆಯು ಸ್ವಾಧಾರ ಗೃಹವನ್ನು ನಿರ್ವಹಿಸುತ್ತಿದೆ. ಈ ಗೃಹಕ್ಕೆ ನೀಡುವ ಅನುದಾನ ವಿಳಂಬವಾಗಿದೆ. ಅನುದಾನ ಸಕಾಲದಲ್ಲಿ ಬಿಡುಗಡೆಗೊಳಿಸಬೇಕು ಎಂದು ಜಿಲ್ಲಾಧಿಕಾರಿಗೆ ಕಸ್ತೂರಿಬಾ ಸದನದ ಕಾರ್ಯದರ್ಶಿ ಮೋಹಿನಿ ಸಿದ್ದೇಗೌಡ ಮನವಿ ಮಾಡಿದರು.

ಜಾಹಿರಾತು

LEAVE A REPLY

Please enter your comment!
Please enter your name here