ಕಾಫಿ ಉದ್ಯಮ ಉಳಿವಿಗೆ ಜನಪ್ರತಿನಿಧಿಗಳು ಸ್ಪಂದಿಸಲಿ: ಕೆಜಿಎಫ್ ಒತ್ತಾಯ

0
123

ಚಿಕ್ಕಮಗಳೂರು: ಕಾಫಿ ಉದ್ಯಮವನ್ನು ಉಳಿಸುವ ನಿಟ್ಟಿನಲ್ಲಿ ಬೆಳೆಗಾರರ ಸಮಸ್ಯೆಗಳನ್ನು ರಾಜಕಾರಣಿಗಳು, ಜನಪ್ರತಿನಿಧಿಗಳು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹೆಚ್.ಟಿ. ಮೋಹನ್‌ಕುಮಾರ್ ಒತ್ತಾಯಿಸಿದರು.

ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಕಾಫಿ ಬೆಳೆಗಾರರ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ಕಳೆದ 5 ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಭೂಕುಸಿತದಂತಹ ಬೆಳೆಹಾನಿಯ ಕಾರಣದಿಂದಾಗಿ ಬೆಳೆಗಾರರು, ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ, ಇದೀಗ ಬೆಳೆಸಾಲವನ್ನು ತೀರಿಸಲಾಗದೆ ಸ್ಥಿತಿ ನಿರ್ಮಾಣವಾಗಿದ್ದು ಕೇಂದ್ರ ಸರ್ಕಾರ ಇದೆಲ್ಲವನ್ನು ಮನಗಂಡು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಕಾಫಿ ಉದ್ಯಮ ಉಳಿಯಬೇಕಾದಲ್ಲಿ ಬೆಳೆಗಾರರು, ರೈತರ ಸಮಸ್ಯೆಗಳನ್ನು ಕ್ಷೇತ್ರದ ಜನಪ್ರತಿನಿಧಿಗಳು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕಾದ ಕೆಲಸವಾಗಬೇಕು. ಜಿಲ್ಲೆಯಲ್ಲಿ ಸುರಿದ ಇತ್ತೀಚಿನ ಅಕಾಲಿಕ ಮಳೆಯಿಂದಾಗಿ ಕಾಫಿ ಫಸಲು ಉದುರಿ ಹಾನಿಯಾಗಿದ್ದು ಅಪಾರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಕಾಫಿ ಬೆಳೆಗೆ ಪಡೆದ ಬಡ್ಡಿ ಮೊತ್ತ ಹೆಚ್ಚಾಗಿದ್ದು ಆರ್ಥಿಕ ನಷ್ಟದ ನಡುವೆ ತೀರಿಸಲಾದ ಸ್ಥಿತಿ ನಿರ್ಮಾಣವಾಗಿದ್ದು ಸರ್ಕಾರ ಬಡ್ಡಿ ಮನ್ನಾ ಮಾಡುವುದರ ಜತೆಗೆ ಬ್ಯಾಂಕ್‌ಗಳು ಸಾಲ ಪಡೆಯುವುದನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.

ಕೊಡಗು, ಹಾಸನ, ಚಿಕ್ಕಮಗಳೂರು ಭಾಗದಲ್ಲಿ ಕಾಫಿ ಬೆಳೆಗಾರರು ಸಂಖ್ಯೆ ಹೆಚ್ಚಿದ್ದು ಕಾಫಿ ಬೆಳೆಗಾರರ ಸಂಘದ ನಿಯೋಗ ದೆಹಲಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಮನವರಿಕೆ ಮಾಡಲಿದೆ. ಸಮಸ್ಯೆಗಳನ್ನು ಕೇಂದ್ರಕ್ಕೆ ಮನವರಿಕೆ ಮಾಡಲು ಜನಪ್ರತಿನಿಧಿಗಳು ಸದನದಲ್ಲಿ ಧ್ವನಿ ಎತ್ತಬೇಕಿದೆ ಎಂದರು.

ಮೂಡಿಗೆರೆ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ ಕಾಫಿ ಉದ್ಯಮ ನೂರಾರು ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲಿದೆ. ಇದೀಗ ಆ ಉದ್ಯಮವೇ ಸಂಕಷ್ಟಕ್ಕೆ ಸಿಲುಕಿದ್ದು ಇದರಿಂದಾಗಿ ಬೆಳೆಗಾರರ ಜತೆಗೆ ಅನೇಕ ಕುಟುಂಬಗಳು ಬದುಕು ಕಳೆದುಕೊಳ್ಳಲಿವೆ. ಕೇಂದ್ರ ಸರ್ಕಾರ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿ ವಿಶೇಷ ಪ್ಯಾಕೇಜ್ ಘೋಷಿಸಬೇಕು, ಬಡ್ಡಿ ಮನ್ನಾ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾಫಿ ಬೆಳೆಗಾರರ ಸಂಘದ ತಾಲ್ಲೂಕು ಉಪಾಧ್ಯಕ್ಷ ಎ. ಕೆ. ವಸಂತೇಗೌಡ, ಸಂಘಟನಾ ಕಾರ್ಯದರ್ಶಿ ನರೇಂದ್ರ, ಪ್ರಧಾನ ಕಾರ್ಯದರ್ಶಿ ಕೆ. ಬಿ. ಕೃಷ್ಣಪ್ಪ, ಕೆಜಿಎಫ್‌ನ ಮಾಜಿ ಅಧ್ಯಕ್ಷ ಜಯರಾಮ್, ನಾಗರಾಜ್ ಶಿವಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here