ಕಾಫಿ ಬೆಳೆಗಾರರ ಸಮಸ್ಯೆ: ಪ್ರಧಾನಿ ಭೇಟಿಗೆ ಬೆಳೆಗಾರರ ನಿಯೋಗ ನಿರ್ಧಾರ

0
204

ಚಿಕ್ಕಮಗಳೂರು: ಕಾಫಿ ಉದ್ಯಮ ಎದುರಿಸುತ್ತಿರುವ ಸಂಕಷ್ಟ ಮತ್ತು ಕಾಫಿ ಬೆಳೆಗಾರರ ಸಮಸ್ಯೆ ಹೇಳಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಅವಕಾಶ ಮಾಡಿಕೊಡುವಂತೆ ಬೆಳೆಗಾರರ ನಿಯೋಗ ಮನವಿ ಮಾಡಿದೆ.

ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿದ ಆಲ್ದೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ. ಸುರೇಶ್, ಕೇಂದ್ರ ಸರ್ಕಾರದ ಫಸಲ್‌ಭೀಮಾ ಯೋಜನೆಯಿಂದ ಯಾವುದೇ ಕಾಫಿ ಬೆಳೆಗಾರರಿಗೆ ಪ್ರಯೋಜನವಾಗಿಲ್ಲವೆಂದು ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಡಲು ನಿಯೋಗ ಮುಂದಾಗಿದೆ ಎಂದು ತಿಳಿಸಿದರು.

ಕಳೆದ 8 ವರ್ಷಗಳಿಂದ ಕಾಫಿ ಉದ್ಯಮ ಸಂಕಷ್ಟದಲ್ಲಿದ್ದು, ಕಾಫಿಗೆ ಬೆಲೆ ಇಲ್ಲದೆ ಉತ್ಪಾದನಾ ವೆಚ್ಚದಿಂದ ಬೆಳೆಗಾರರು ತತ್ತರಿಸಿಹೋಗಿದ್ದಾರೆ. ಹವಾಮಾನ ವೈಪರಿತ್ಯದಿಂದ ನಿರೀಕ್ಷಿತ ಮಟ್ಟದಲ್ಲಿ ಕಾಫಿ ಬೆಳೆಯಲು ಸಾಧ್ಯವಾಗುತ್ತಿಲ್ಲ 2014 ರಿಂದಲೂ ಕಾಫಿ ಕೊಯ್ಲು ಸಮಯದಲ್ಲಿ ಮಳೆಯನ್ನು ಎದುರಿಸಬೇಕಾಗಿದೆ ಎಂದು ಹೇಳಿದರು.

ಬೆಳೆಗಾರರು ಸಾಲದ ಸುಳಿಯಲ್ಲಿ ಸಿಲುಕಿದ್ದು, ಅಲ್ಪಸ್ವಲ್ಪ ಜಮೀನು ಮಾರಾಟಮಾಡಿ ಸಾಲ ತೀರಿಸುವಂತಾಗಿದೆ. ಕೆಲವು ಬ್ಯಾಂಕುಗಳು ಬೆಳೆಗಾರರ ಸಾಲಕ್ಕೆ ಬಡ್ಡಿ, ಚಕ್ರಬಡ್ಡಿಹಾಕಿ ಎನ್‌ಪಿಎ ಹಂತಕ್ಕೆ ತಂದು ನಿಲ್ಲಿಸಿವೆ. ಸಿಬಿಲ್ ಎಂಬ ಮಾನದಂಡ ಪ್ರಯೋಗಿಸಲಾಗುತ್ತಿದೆ. ಕಾಫಿ ಉದ್ಯಮದಿಂದ ಸಾವಿರಾರು ಕೋಟಿ ತೆರಿಗೆ ಮತ್ತು ಜಿಎಸ್‌ಟಿ ಸಂಗ್ರಹಿಸಲಾಗಿದೆ ಎಂದರು.

ಈ ಎಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳಲು ಪ್ರಧಾನಿ ಭೇಟಿಗೆ ಅವಕಾಶ ಸಿಗುತ್ತಿಲ್ಲ, ಕೇಂದ್ರ ಹಣಕಾಸು ಸಚಿವರ ಭೇಟಿಯೂ ಸಾಧ್ಯವಾಗುತ್ತಿಲ್ಲ, 2014ಕ್ಕೆ ಹಿಂದೆ ಕಾಫಿ ಮಂಡಳಿಯಿಂದ ಅನೇಕ ಸವಲತ್ತುಗಳು ಸಿಗುತ್ತಿದ್ದು, ಬಳಿಕ ಯಾವುದೇ ಸಹಾಯಧನ ಸಿಗದಂತಾಗಿದೆ. ಕಾಫಿಗಿಡಗಳ ಮರು ನಾಟಿ ಯೋಜನೆ ಜಾರಿಯಾಗಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕಾಫಿ ಉದ್ಯಮಕ್ಕೆ ಬಿಡಿಗಾಸು ಸಿಕ್ಕಿಲ್ಲವೆಂದು ತಿಳಿಸಿದರು.

ಕಾಫಿ ಮಂಡಳಿ ಮಾಜಿ ಸದಸ್ಯ ಡಿ. ಎಂ. ವಿಜಯ್ ಮಾತನಾಡಿ, ಕಾಫಿ ಮಂಡಳಿ ನಿಷ್ಕ್ರೀಯಗೊಂಡಿದೆ. ಉಪಯೋಗಕ್ಕೆ ಬಾರದ ಸರ್ಕಾರದ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರ ಕಾಫಿ ಉದ್ಯಮ ರಕ್ಷಣೆ ಮತ್ತು ಬೆಳೆಗಾರರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ದಿಢೀರನೆ ಹೆಚ್ಚಳಗೊಂಡಿದ್ದು, ಬೆಳೆ ಅಲ್ಪ ಪ್ರಮಾಣದಲ್ಲಿದೆ. ಇದಕ್ಕೆಲ್ಲ ಹವಾಮಾನ ವೈಪರಿತ್ಯ ಕಾರಣವಾಗಿದೆ. ಕಾಫಿ ಬೆಳೆಗಾರ ಅನೇಕ ಉದ್ಯಮಗಳಿಗೆ ಉದ್ಯೋಗಾವಕಾಶ ಕಲ್ಪಿಸಿದ್ದು, ಈ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ ಎಂದು ತಿಳಿಸಿದರು.

ಗೊಬ್ಬರ, ಕೀಟನಾಶಕ, ತೋಟದಲ್ಲಿ ಕೆಲಸ ನಿರ್ವಹಿಸುವ ಉಪಕರಣಗಳ ಬೆಲೆ ಹೆಚ್ಚಳಗೊಂಡಿದ್ದು, ತೋಟದ ನಿರ್ವಹಣೆ ಕಷ್ಟಕರವಾಗಿದೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ಸ್ಪೈ ಮಾಡಲು ಸಾಧ್ಯವಾಗಿಲ್ಲ, ವನ್ಯಜೀವಿಗಳ ಹಾವಳಿಯಿಂದ ಕಾಫಿ ನಷ್ಟವುಂಟಾಗಿದೆ ಎಂದು ಜಾಕಿರ್‌ಹುಸೇನ್ ತಿಳಿಸಿದರು.

ಗುಲ್ಲನ್‌ಪೇಟೆಯ ಪುಟ್ಟೇಗೌಡ ಮಾತನಾಡಿ, ರಸಯೊಬ್ಬರ, ಹಾಮ್ಲ, ಲಿಂಡನ್, ಕಾಪರ್ ಸಲ್ಫೇಟ್, ಪೈಪ್‌ಗಳ ಬೆಲೆ 2017 ರಿಂದ ಈ ವರ್ಷದವರೆಗೆ ಎಷ್ಟೆಷ್ಟು ಏರಿಕೆಯಾಗಿದೆ ಎಂಬ ಮಾಹಿತಿಯನ್ನು ಹೇಳಿದರು. ಬೆಳೆಗಾರ ಜಿ. ರಘು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here