23.2 C
Shimoga
Sunday, November 27, 2022

ಕಾರಾಗೃಹದಲ್ಲಿ ನಡೆದ ಪತ್ರಕರ್ತರ ಸಂಘ, ಪ್ರೆಸ್ ಟ್ರಸ್ಟ್‌ನಿಂದ ಮಾದಕ ವಸ್ತು ವಿರೋಧಿ ಅಭಿಯಾನ

ಶಿವಮೊಗ್ಗ: ಪ್ರತಿನಿತ್ಯ ಧ್ಯಾನ ಮಾಡುವುದು ಮತ್ತು ಸದ್ವಿಚಾರಗಳನ್ನು ಅಳವಡಿಸಿಕೊಳ್ಳುವುದರಿಂದ ಒಂಟಿತನದಿಂದ ಹೊರಬಹುದು. ಒಂಟಿತನವೇ ಮನುಷ್ಯನನ್ನು ನಾನಾ ವಿಧದ ದುಷ್ಚಟಗಳಿಗೆ ದೂಡುತ್ತದೆ ಎಂದು ಸರ್ಜಿ ಫೌಂಡೇಶನ್ ಮುಖ್ಯಸ್ಥ ಡಾ|| ಧನಂಜಯ ಸರ್ಜಿ ಹೇಳಿದರು.

ಶಿವಮೊಗ್ಗ ಕಾರ್‍ಯನಿರತ ಪತ್ರಕರ್ತರ ಸಂಘ, ಪ್ರೆಸ್ ಟ್ರಸ್ಟ್,  ಕೇಂದ್ರ ಕಾರಾಗೃಹ ಶಿವಮೊಗ್ಗ ಮತ್ತು  ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಆಶ್ರಯದಲ್ಲಿ ಇಲ್ಲಿಗೆ ಸಮೀಪದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಏರ್ಪಡಿಸಲಾಗಿದ್ದ ಮಾದಕ ವಸ್ತು ವಿರೋಧಿ ಅಭಿಯಾನದಲ್ಲಿ ಅವರು ಉಪನ್ಯಾಸ ನೀಡಿದರು.

ಮನುಷ್ಯ ಸಂತೋಷವಾಗಿದ್ದಾಗ ಯಾವ ದುಷ್ಚಟವೂ ಬರುವುದಿಲ್ಲ. ನೆಮ್ಮದಿಯಿಂದ ಇರುತ್ತಾನೆ. ಯಾವಾಗ ಒಂಟಿತನ ಕಾಡುತ್ತದೆಯೋ ಅ ದರಿಂದ ಹೊರಬರಲು ವಿವಿಧ ಚಟಗಳಿಗೆ ಅಂಟಿಕೊಳ್ಳುತ್ತಾನೆ. ಒಂಟಿತನವನ್ನು ದೆವ್ವದ ಮನೆ ಎನ್ನುತ್ತಾರೆ. ದುಷ್ಚಟಗಳು ಆತನನ್ನು ಮುತ್ತಿಕೊಳ್ಳುತ್ತವೆ. ಇದರಿಂದ ಅನುಭವಿಸಲಾರದಷ್ಟು ಹಿಂಸೆ ಅನುಭವಿಸುತ್ತಾನೆ. ತನ್ನವರೆಲ್ಲರನ್ನೂ ದೂರ ಮಾಡಿಕೊಳ್ಳುತ್ತಾನೆ. ಜೀವನದಲ್ಲಿನ ಸುಖ- ಸಂತೋಷದಿಂದ ವಂಚಿತನಾಗುತ್ತಾನೆ ಎಂದು ವಿವರಿಸಿದರು.

ಮಾದಕ ವಸ್ತುಗಳು ಸಮಾಜಕ್ಕೆ ಮಾರಕ. ಇದು ಮನುಷ್ಯನನ್ನು ಮಾತ್ರವಲ್ಲ, ಸಮಾಜವನ್ನೂ, ಆತನ ಕುಟುಂಬವನ್ನೂ ಹಾಳುಮಾಡುತ್ತದೆ.  ಮಾದಕ ವ್ಯಸನದಿಂದ ಪ್ರತಿವರ್ಷ ೮೦ ಲಕ್ಷ ಜನ ಸಾಯುತ್ತಿದ್ದಾರೆ.  ಡ್ರಗ್ಸ್ ಸೇವನೆಯಲ್ಲಿ ದೇಶದಲ್ಲಿ ಪಂಜಾಬ್ ಪ್ರಥಮ ಸ್ಥಾನದಲ್ಲಿದೆ. ಇತ್ತೀಚೆಗೆ ಶಿವಮೊಗ್ಗದಲ್ಲೂ ಯುವಜನಾಂಗ ಡ್ರಗ್ಸ್‌ಗೆ ಮಾರುಹೋಗಿದೆ. ಯುವಜನಾಂಗ  ಮಾದಕ ವಸ್ತು ಸೇವನೆಯಲ್ಲಿ ತೊಡಗಿದೆ. ಇದನ್ನು ಹೋಗಲಾಡಿಸಲು ಎಲ್ಲರೂ ಕೈಜೋಡಿಸಬೇಕಾದ ಅನಿವಾರ್‍ಯತೆ ಇದೆ ಎಂದರು. 

ಉದ್ಘಾಟನಾ ಭಾಷಣ ಮಾಡಿದ ಶಿವಮೊಗ್ಗ ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಗೋಪಾಲ್ ಎಸ್. ಯಡಗೆರೆ, ಗಾಂಜಾದಂತಹ ಮಾದಕ ವಸ್ತುಗಳ ಸೇವನೆಯಿಂದ ಯುವಜನಾಂಗ ಹೊರಬಂದು ಒಳ್ಳೆಯ ಗುಣ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಯಾವತ್ತೂ ನಮ್ಮನ್ನು ಒಳ್ಳೆಯತನದಿಂದ ಮಾತ್ರ ಗುರುತಿಸುತ್ತಾರೆ. ನಮ್ಮ ನಡೆ, ಮತ್ತು ಕಾರ್‍ಯದಿಂದ ಒಳ್ಳೆಯವರಾಗಬೇಕು. ಇಂತಹವರನ್ನು ಸಮಾಜ ಸ್ವೀಕರಿಸುತ್ತದೆ ಎಂದರಲ್ಲದೆ ಒಳ್ಳೆಯತನದಿಂದಲೇ ಬಸವಣ್ಣ, ಗಾಂಧೀಜಿ, ಅಬ್ದುಲ್ ಕಲಾಂ ಹೇಗೆ ಹೆಸರಾದರೆನ್ನುವುದನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ|| ಅನಿತಾ,  ನಾವು ಮಾಡಿದ ಸಾಧನೆಗಳು, ಉತ್ತಮ ಕಾರ್ಯಗಳು ನಮ್ಮನ್ನು ಸದಾ ಗುರುತಿಸುವಂತಾಗಬೇಕು.  ಮನುಷ್ಯನಿಗೆ ಸಂಕಲ್ಪ ಇದ್ದರೆ ಯಾವುದೇ ದುಷ್ಚಟದಿಂದ ಹೊರಬರಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಉತ್ತಮ ಮನುಷ್ಯನಾಗಿ ಪರಿವರ್ತನೆಗೊಳ್ಳಲು ನೆರವಾಗುತ್ತದೆ. ಮಾದಕ ವ್ಯಸನವನ್ನು ನಿಗ್ರಹಿಸುವುದು ತುಂಬಾ ಕಷ್ಟದ ಕೆಲಸ. ಇದರಿಂದ ಕುಟುಂಬದವರೂ ಕಷ್ಟ ಅನುಭವಿಸಬೇಕಾಗುತ್ತದೆ. ಶಿವಮೊಗ್ಗದ ಪತ್ರಕರ್ತರು ಈ ದಿಸೆಯಲ್ಲಿ  ಕೈಗೊಂಡಿರುವ ಅಭಿಯಾನ ಅಪರೂಪವಾದುದು ಮತ್ತು ಶ್ಲಾಘನೀಯವಾದುದು. ಮಾದಕ ವಸ್ತುಗಳ ವಿರುದ್ಧದ ಜಾಗೃತಿಯನ್ನು ಸದಾ ಮುಂದುವರೆಸಿ ಅದರಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು. 

ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್ . ಮಂಜುನಾಥ ಮಾತನಾಡಿ, ಮಾದಕ ವಸ್ತುವಿನ ವ್ಯಾಪ್ತಿ ಮಿತಿಮೀರಿದೆ. ಒಮ್ಮೆ ಅದಕ್ಕೆ ಅಂಟಿಕೊಂಡರೆ ಅದರಿಂದ ಹೊರಬರಲು ಸುಲಭದಲ್ಲಿ ಸಾಧ್ಯವಿಲ್ಲ. ಇದಕ್ಕೆ ಯುವಕರು ಮನಸ್ಸನ್ನು ಪರಿವರ್ತಿಸಿಕೊಳ್ಳಬೇಕು. ಇಂದೇ ಸಂಕಲ್ಪ ಮಾಡಬೇಕು. ಸಂಕಲ್ಪ ಸಿದ್ಧಿಯಿಂದ ಮಾತ್ರ ಸಾಧನೆ ಸಾಧ್ಯ. ಸೆರೆಮನೆಯಲ್ಲಿರುವವರೂ ಸಹ ಯಾವುದೋ ಕಾರಣಕ್ಕೆ ಬಂಧಿಗಳಾಗುತ್ತಾರೆ. ಆದರೆ ಸೆರೆಮನೆಗೆ ಬಂದ ಮೇಲೆ ಮನಸ್ಸನ್ನು ಪರಿವರ್ತಿಸಿಕೊಳ್ಳಬೇಕು. ಜೈಲಿನಿಂದ ಬಿಡುಗಡೆಯಾದ ಮೇಲೆ ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಲು ಇದು ಸಹಕಾರಿಯಾಗುತ್ತದೆ ಎಂದರು.

ಕಾರಾಗೃಹದ ಶಿಕ್ಷಕಿ ಲೀಲಾ ಸ್ವಾಗತಿಸಿದರು. ಶಿಕ್ಷಕ ಗೋಪಾಲಕೃಷ್ಣ ಕಾರ್‍ಯಕ್ರಮ ನಿರೂಪಿಸಿದರು, ಪತಕರ್ತರ ಸಂಘದ ಕಾರ್‍ಯದರ್ಶಿ ಸಂತೋಷ್ ಕಾಚಿನಕಟ್ಟೆ ವಂದಿಸಿದರು. ಪತ್ರಕರ್ತ ಹುಲಿಮನೆ ತಿಮ್ಮಪ್ಪ, ಸೆರೆಮನೆಯ ಸಹಾಯಕ ಅಧೀಕ್ಷಕ ಶಿವಾನಂದ ಶಿವಾಪುರ ಹಾಜರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!