ಕಾಳಿಂಗ ಮತ್ತು ನಾವು

0
1244

ಹಾವುಗಳನ್ನು ಹಿಡಿದು ಸ್ಥಳಾಂತರ ಮಾಡುವುದೇ ಸಂರಕ್ಷಣೆ ಎಂದು ಬಹುತೇಕರ ಅಭಿಪ್ರಾಯವಾಗಿದೆ, ಹಾವಿನ ಸ್ಥಳಾಂತರವು ಮಾನವ ಹಾಗು ಹಾವುಗಳ ಸಂಘರ್ಷವನ್ನೇನೊ ಕಡಿಮೆ ಮಾಡುತ್ತದೆ, ಇಲ್ಲಿ ಮನುಷ್ಯನೂ ಬದುಕಬೇಕು ಕಾಳಿಂಗಗಳು ಉಳಿಯಬೇಕು, ನಮ್ಮ ಸಂರಕ್ಷಣೆ ಅವುಗಳ ಸಂತಾನ ಬೆಳೆಯಲು ಅಡ್ಡಿಪಡಿಸದಂತಿರಬೇಕು.

ಪ್ರಕೃತಿಯಲ್ಲಿ ಕೆಲವು ನಿರ್ದಿಷ್ಟ ಕರಾರುವಕ್ಕಾದ ಕ್ರಿಯೆಗಳು ವರ್ಷದ ಕೆಲವು ತಿಂಗಳಲ್ಲಿ ಜರುಗುತ್ತಿರುತ್ತದೆ, ಈ ಕ್ರಿಯೆ ಕೆಲವು ವನ್ಯಜೀವಿಗಳ ಉಳಿವಿಗೆ ಬಹುಮುಖ್ಯವಾದ ಘಟ್ಟವಾಗಿರುತ್ತದೆ.

ಈಗ ಕಾಳಿಂಗ ಸರ್ಪಗಳು ಹೆಣೆಯಾಡುವ ಸಮಯ, ಬೆದೆಗೆ ಬಂದ ಹೆಣ್ಣು ತನ್ನ ಜನನಾಂಗದಿಂದ ವಿಶೇಷವಾದ ರಸಾಯನಿಕ (ಫೆರೋಮೊನು) ಹೊರಹಾಕಿ ತಾನು ಗಂಡಿನೊಂದಿಗೆ ಹೆಣೆಯಾಡಲು ಸಿದ್ದ ಎಂಬ ಸೂಚನೆ ನೀಡುತ್ತಾಳೆ. ತಾನು ಸಂಚರಿಸಿದ ದಾರಿಯುದ್ದಕ್ಕೂ ಕಣ್ಣಿಗೆ ಕಾಣದ ರಸಾಯನಿಕ (ವಾಸನೆ) ಹೊರ ಹಾಕಿ ಗಂಡು ಕಾಳಿಂಗ ತನ್ನನ್ನು ಹುಡುಕಿ ಬರಲು ರಹಸ್ಯ ದಾರಿ ಮಾಡಿರುತ್ತಾಳೆ. ಇಂತಹ ಸಂದರ್ಭದಲ್ಲಿ ಹೆಣ್ಣನ್ನು ಹಿಡಿದು ಸಾಗಿಸಿದರೆ ಗಂಡು ಕಾಳಿಂಗಗಳು ಗೊಂದಲಕ್ಕೀಡಾಗುತ್ತವೆ, ಹೆಣ್ಣು ಸಂಚರಿಸಿದ ದಾರಿಯ ಕೊನೆವರೆಗೂ ಬಂದು ಮುಂದೆ ಯಾವ ಕಡೆ ಹೋಗಬೇಕು ಎಂದು ತಿಳಿಯದೇ ಅಲ್ಲಲ್ಲೇ ಸುತ್ತುತ್ತಿರುತ್ತವೆ.

ಇತ್ತ ಹೆಣ್ಣು ಕಾಳಿಂಗನ ವಾಸನೆ ಹಿಡಿದು ಹೆಣೆಯಾಡಲು ಬರುವ (ಸರಳವಾಗಿ ಹೇಳುವುದಾದರೆ ಹೆಣ್ಣು ನಾಯಿ ಬೆದೆಗೆ ಬಂದಾಗ ಸುತ್ತಲಿನ ಗಂಡು ನಾಯಿಗಳು ಒಟ್ಟಾದಂತೆ)ಆ ಏರಿಯಾದ ಗಂಡುಗಳ ಮಧ್ಯೆ ಭೀಕರ ಕದನವಾಗಿ ಸೋತವನು ತನ್ನ ಮೂಲ ಜಾಗದ ಕಡೆಗೆ ವಾಪಾಸು ಹೋದರೆ ಗೆದ್ದವನು ಹೆಣ್ಣನ್ನು ಕೂಡಲು ಅವಳನ್ನು ಹುಡುಕತೊಡಗುತ್ತಾನೆ. ಕೆಲವು ಸಲ ಒಂದು ಗಂಡು, ಎರಡು ಮೂರು ಗಂಡುಗಳನ್ನು ಎದುರಿಸಿ ಕೊನೆಗೆ ಹೆಣ್ಣಿನ ಮಿಲನಕ್ಕೆ ಹೋಗುವುದಿದೆ, ಸೋತ ಎಲ್ಲಾ ಗಂಡುಗಳು ತಮ್ಮ ಮೂಲ ನೆಲೆಗೆ ವಾಪಾಸು ಹೋಗುತ್ತವೆ, ಕೊನೆಗೆ ಗೆದ್ದ ಗಂಡನ್ನು ಸೆರೆ ಹಿಡಿದರೂ ಇಲ್ಲಿ ಸಮಸ್ಯೆ ಎದುರಾಗುತ್ತದೆ ಏಕೆಂದರೆ ಹೆಣ್ಣಿನ ಮಿಲನಕ್ಕೆ ಆ ಏರಿಯಾದಲ್ಲಿ ಗಂಡುಗಳೆ ಇಲ್ಲದಂತಾಗುತ್ತದೆ.

ಬಹಳಷ್ಟು ಊರುಗಳಲ್ಲಿ ಈಗ ದೊಡ್ಡ ಗಾತ್ರದ ಕಾಳಿಂಗಗಳು ತೋಟ ಗದ್ದೆ, ಕಾಡುಗಳಲ್ಲಿ ಸುತ್ತುತ್ತಿರುವುದನ್ನು ನೋಡಬಹುದು, ಇದರರ್ಥ ಅಲ್ಲೆಲ್ಲೋ ಹೆಣ್ಣು ಹಾವು ಇದೆ ಎಂದು ನಿಖರವಾಗಿ ಹೇಳಬಹುದು.

ಹಾವುಗಳೆಂದರೆ ಭಯ ಯಾರಿಗಿಲ್ಲ ಹೇಳಿ? ಹರನೇ ನಡುಗಿದನಂತೆ!! ಅಷ್ಟಕ್ಕೂ ಕಾಳಿಂಗ ಸರ್ಪಗಳು ಜನ ಸಾಮಾನ್ಯರಿಗೆ ರೈತರಿಗೆ ತೊಂದರೆ ಮಾಡಿದ ಉದಾಹರಣೆಗಳು ಇಲ್ಲ, ಹಾಗಾಗಿ ಅವುಗಳ ಬಗ್ಗೆ ಅನಗತ್ಯ ಭಯ ಪಡೆದೆ ಜಾಗೃತರಾಗಿ ಇರೋಣ. ಬೇರೆ ಹಾವುಗಳಂತೆ ಕಾಳಿಂಗಗಳು ಜನವಸತಿ ಅಕ್ಕ ಪಕ್ಕ ಇರಲು ಇಷ್ಟಪಡುವುದಿಲ್ಲ ಒಂದು ವೇಳೆ ಬೇಟೆ ಉದ್ದೇಶಕ್ಕೆ ಮನೆ ಅಕ್ಕಪಕ್ಕ ಬಂದರೂ ಬೇಟೆ ಸಿಗುತ್ತಿದ್ದಂತೆ ಸುರಕ್ಷಿತ ಜಾಗದತ್ತ ತೆರಳುತ್ತವೆ.

ಕೆಲವು ಸಲ ನಾಯಿ ಅಥವಾ ಸಾಕುಪ್ರಾಣಿ ಇಲ್ಲವೆ ಮನುಷ್ಯರಿಂದ ತೊಂದರೆ ಅನಿಸಿದರೆ ಸುರಕ್ಷಿತ ಜಾಗ ಹುಡುಕಲು ಮನೆ ಅಥವಾ ಕೊಟ್ಟಿಗೆಗೆ ನುಗ್ಗಬಹುದು, ಆಗ ಅರಣ್ಯ ಇಲಾಖೆಗೆ ತಿಳಿಸಿ.

ವರ್ಷದ ಕೆಲವು ತಿಂಗಳು ಮಾತ್ರ ಅಂದರೆ ಸಾಮಾನ್ಯವಾಗಿ ಮಾರ್ಚ್ ಏಪ್ರಿಲ್ ಮೇ ತಿಂಗಳಲ್ಲಿ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗುವ ಕಾಳಿಂಗಗಳಿಗೆ ನಮ್ಮಿಂದ ತೊಂದರೆ ಬೇಡ. ಅವುಗಳನ್ನು ಅವುಗಳ ಪಾಡಿಗೆ ಹೋಗಲು ಬಿಡೋಣ.

ಲೇಖನ : ನಾಗರಾಜ್ ಬೆಳ್ಳೂರು
ಜಾಹಿರಾತು

LEAVE A REPLY

Please enter your comment!
Please enter your name here