ಹೊಸನಗರ: ಬೇಸಿಗೆ ಸಮೀಪಿಸುತ್ತಿರುವ ಹಿನ್ನಲೆ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ಆಗದಂತೆ ಟ್ಯಾಂಕರ್ ಮೂಲಕ ಪ್ರತಿ ವಾರ್ಡ್ಗೂ ನೀರು ಪುರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಂದ್ರ ಕೊಟ್ಯಾನ್ರವರು ಸಭೆಗೆ ತಿಳಿಸಿದರು.
ಶುಕ್ರವಾರ ಪಪಂ ಸಭಾಂಗಣದಲ್ಲಿ ನಡೆದ ಸ್ಥಾಯಿ ಸಮಿತಿ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಈಗಷ್ಟೆ ಪಟ್ಟಣದಲ್ಲಿ ಮಾರಿಕಾಂಬ ದೇವಿ ಜಾತ್ರೆ ಸಂಪನ್ನಗೊಂಡಿದೆ. ಜಾತ್ರೆ ವೇಳೆಯಲ್ಲಿನ ತ್ಯಾಜ್ಯ ವಿಲೇವಾರಿ, ಸ್ವಚ್ಚತೆಗೆ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಸ್ವಚ್ಚತೆಗಾಗಿ ಬ್ಲೀಚಿಂಗ್, ಮೆಲಾಥಿನ್, ಫಿನಾಯಲ್ ಖರೀದಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸರ್ಕಾರಿ ಹಿ.ಪ್ರಾ.ಬಾ. ಶಾಲೆಗೆ ಕುಡಿಯುವ ನೀರು ಸರಬರಾಜು ಮಾಡುವುದು, ಘನತ್ಯಾಜ್ಯ ಘಟಕದಲ್ಲಿ ವಿದ್ಯುತ್ ಕಂಬ ಅಳವಡಿಸಿ ಲೈಟ್, ವ್ಶೆರಿಂಗ್ ಹಾಗೂ ವಾಚ್ ಮೆನ್ ಕಟ್ಟಡಕ್ಕೆ ಪೇಂಟಿಂಗ್ ಮಾಡಿಸಲು ಸಭೆ ಅನುಮೋದಿಸಿತು. ಅಲ್ಲದೇ ಜಾಕ್ವೆಲ್ನಲ್ಲಿ ಶರಾವತಿ ನದಿ ಹಿನ್ನೀರಿಗೆ ಮರಳು ಚೀಲದ ತಡೆಗೋಡೆ ತಾತ್ಕಾಲಿಕ ನಿರ್ಮಾಣಕ್ಕೆ ಸಭೆ ತೀರ್ಮಾನಿಸಿತು.
ಸಭೆಯಲ್ಲಿ ಪ.ಪಂ ಅಧ್ಯಕ್ಷೆ ಗುಲಾಬಿ ಸ್ಥಾಯಿ ಸಮಿತಿ ಸದಸ್ಯರಾದ ಗಾಯತ್ರಿ ನಾಗರಾಜ್, ಸಿಂಥಿಯಾ ಶೆರಾವೋ, ಗುರುರಾಜ್, ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಸಿಬ್ಬಂದಿಗಳಾದ ಪರಶುರಾಮ್, ಗಣೇಶ್ ಹೆಗ್ಡೆ, ಉಮಾಶಂಕರ್, ಮಂಜುನಾಥ್, ನೇತ್ರಾವತಿ, ಆಸ್ಮಾ, ಬಸವರಾಜ, ಲಕ್ಷ್ಮಣ, ಪ್ರಶಾಂತ್ ಗಿರೀಶ್, ಚಂದ್ರಪ್ಪ ಮೊದಲಾದವರು ಇದ್ದರು.
Related