ಕುವೆಂಪು ವಿವಿ 31, 32ನೇ ಘಟಿಕೋತ್ಸವ | ನೈತಿಕ ಶಿಕ್ಷಣದಿಂದ ದೇಶದ ಅಭಿವೃದ್ಧಿ‌ ಸಾಧ್ಯ ; ರಾಜ್ಯಪಾಲ ಗೆಹ್ಲೋಟ್

0
182

ಶಿವಮೊಗ್ಗ: ನೈತಿಕ ಶಿಕ್ಷಣದಿಂದ ದೇಶದ ಅಭಿವೃದ್ಧಿ‌ ಸಾಧ್ಯ ಸರ್ಕಾರ ಜಾರಿಗೆ ತರುವ ಯೋಜನೆಗಳಲ್ಲಿ‌ ಯುವ ವಿದ್ಯಾರ್ಥಿಗಳ ಪಾತ್ರ ಇರಬೇಕು ಎಂದು ರಾಜ್ಯಪಾಲ ಹಾಗೂ ಕುವೆಂಪು ವಿವಿ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ಅವರು ಇಂದು ಕುವೆಂಪು ವಿವಿ ಆವರಣದಲ್ಲಿ ಆಯೋಜಿಸಿದ್ದ 31, 32 ನೇ ವಾರ್ಷಿಕ‌ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ನೀವೆಲ್ಲರೂ ಪದವಿ ಪಡೆಯುತ್ತಿರುವುದು‌ ನನಗೆ ಹರ್ಷ ತಂದಿದೆ. ಪದವಿ ಪಡೆದ ವಿದ್ಯಾರ್ಥಿಗಳು ದೇಶದ ಹಿತಕ್ಕಾಗಿ ಕೆಲಸ ಮಾಡಬೇಕು. ಪದವಿ ಮುಗಿದ ಮೇಲೆ ಕೇವಲ ಕೆಲಸಕ್ಕಾಗಿ ಹುಡುಕಾಟ ನಡೆಸದೇ ಅಧ್ಯಯನಶೀಲರಾಗಿ ಆ‌ ಮೂಲಕ ದೇಶದ ಅಭಿವೃದ್ಧಿಯಲ್ಲಿ ತೊಡಗಿ ಇದೆಲ್ಲಕ್ಕೂ ಗುಣಮಟ್ಟದ ನೈತಿಕ ಶಿಕ್ಷಣ ಬೇಕಾಗಿದೆ ಎಂದರು.

ರಾಷ್ಟ್ರಕವಿ ಕುವೆಂಪು ಹೆಸರೇ ವಿಶ್ವವಿದ್ಯಾಲಯಕ್ಕೆ ಪ್ರೇರಣಾ ಶಕ್ತಿಯಾಗಿದೆ. ಕುವೆಂಪು ವಿವಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ನಾನು ಕುವೆಂಪು ವಿವಿ ವಿದ್ಯಾರ್ಥಿ ಎಂದು ಹೇಳಿಕೊಳ್ಳುವುದೇ ಹೆಮ್ಮೆಯ ವಿಷಯ ಎಂದರು.

ಹೊಸ ಶಿಕ್ಷಣ ನೀತಿ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಕ್ರಿಯಾಶೀಲತೆ, ಅಧ್ಯಯನ ಮನೋಭಾವಕ್ಕೆ ಹತ್ತಿರವಾಗುತ್ತದೆ. ಜೊತೆಗೆ ಭಾರತ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಇದು ಪ್ರೇರಕ ಮತ್ತು ಪೂರಕವಾಗುತ್ತದೆ ಎಂದರು.

ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಲಿಸಿದರೆ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಸಾಧನೆ ಅಷ್ಟೊಂದು ತೃಪ್ತಿಕರವಾಗಿಲ್ಲ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕಗಳು ಕೂಡ ಸಿಗುತ್ತಿಲ್ಲ. ಆದರೆ, ದಿವ್ಯಾಂಗ ಒಲಿಂಪಿಕ್ಸ್ ನಲ್ಲಿ ಹೆಚ್ಚಿನ ಪದಕಗಳು ಬರುತ್ತಿರುವುದು ಸ್ವಾಗತದ ವಿಷಯವಾಗಿದೆ. ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಗೌರವ ಡಾಕ್ಟರೇಟ್ ಪದವಿ ಪಡೆದವರು ಆಯಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ಸಾಧನೆ ವ್ಯರ್ಥವಾಗಬಾರದು. ಮುಂದಿನ ದಿನಗಳಲ್ಲಿ ಅವರು ಮತ್ತಷ್ಟು ಸಾಧನೆ ಮಾಡಬೇಕು. ಅವರ ತಿಳಿವಳಿಕೆ ಜ್ಞಾನ ಯುವ ಪೀಳಿಗೆಗೆ ಪ್ರೇರಣೆಯಾಗಿರಬೇಕು. ಪದವಿ ಪಡೆದ ರ‍್ಯಾಂಕ್ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳು ಎಂದರು.

ಬದ್ಧತೆಯ ವಿದ್ಯಾವಂತರ ಅವಶ್ಯಕತೆ ಇದೆ:

ಇಂದು ಜಗತ್ತು ಅನೇಕ ಸಮಸ್ಯೆಗಳನ್ನು ಸವಾಲುಗಳನ್ನು ಎದುರಿಸುತ್ತಿದ್ದು, ಅವುಗಳಿಗೆಲ್ಲಾ ವಸ್ತುನಿಷ್ಠ ಪರಿಹಾರ ಪಡೆಯಲು ಬದ್ಧತೆಯ ವಿದ್ಯಾವಂತರ ಅವಶ್ಯಕತೆ ಇದೆ. ಇಂತಹ ಬದ್ಧತೆ ಇಂದು ಪದವಿ ಪಡೆಯುತ್ತಿರುವ ನಿಮ್ಮಲ್ಲಿ ಇದೆ ಎಂಬ ವಿಶ್ವಾಸವಿದೆ ಎಂದು ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ನಿರ್ದೇಶಕಿ ಡಾ. ಶ್ರೀದೇವಿ ಎ.ಸಿಂಗ್ ತಿಳಿಸಿದರು.

ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಒಬ್ಬರಿಗಿಂತ ಹೆಚ್ಚು ಜನರ ಅವಶ್ಯಕತೆ ಇದೆ. ಇತರರೊಡನೆ ಸಂಪರ್ಕ ಸಾಧಿಸುವುದು, ಹೊಸತನದಿಂದ ವಿಚಾರ ಮಾಡುವುದು, ಸ್ವಯಂ ನಂಬಿಕೆ ಮತ್ತು ಶ್ರಮ ಪಡುವುದು ಮುಖ್ಯ. ಇಂತಹ ಸಾಮರ್ಥ್ಯ ನಿಮ್ಮಲ್ಲಿದೆ ಎಂಬ ವಿಶ್ವಾಸ ನಮ್ಮದು ಎಂದರು.

ನಾವಿಂದು ಸವಾಲಿನ ಯುಗದಲ್ಲಿ ಜೀವಿಸುತ್ತಿದ್ದೇವೆ. ನಮ್ಮ ಜಗತ್ತು ಅಶಾಂತಿ ಮತ್ತು ಸಂಘರ್ಷಗಳಿಂದ ಕೂಡಿದೆ. ಹಸಿವು, ಬಡತನ, ಆಹಾರ ಸುರಕ್ಷತೆ, ಸುಸ್ಥಿರ ಕೈಗಾರಿಕರಣ ಮುಂತಾದ ವಿಷಯಗಳತ್ತ ನಾವು ಯೋಚಿಸಬೇಕಿದೆ. ಜೊತೆಗೆ ಸಮಾಜ ನಿರ್ಮಾಣ ಮತ್ತು ಲಿಂಗ ಸಮಾನತೆಗೆ ಸಂಬಂಧಿಸಿದಂತೆ ಸರ್ವರನ್ನೊಳಗೊಂಡ ಸಮಾಜ ಸೃಷ್ಟಿಯಾಗಬೇಕಾಗಿದೆ. ಲಿಂಗ ಸಮಾನತೆ ಮತ್ತು ಸಮಾನ ಅವಕಾಶಗಳು ದೇಶದ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ವಿಶೇಷವಾಗಿ ಯುವತಿಯರು ಎಂದೂ ಸೋಲನ್ನು ಒಪ್ಪಿಕೊಳ್ಳಬೇಡಿ. ನಿಮ್ಮ ನಿರ್ಧಾರ ಗಟ್ಟಿಯಾಗಿರಲಿ. ಸೋತರು ಕೂಡ ಮರು ಪ್ರಯತ್ನ ಮಾಡಿ ಎಂದು ಸಲಹೆ ನೀಡಿದರು.

ದೇಶದ ಬೆನ್ನೆಲುಬಾದ ಕೃಷಿಯನ್ನೇ ಶೇ.60ರಷ್ಟು ಜನ ಅವಲಂಬಿಸಿದ್ದಾರೆ. ಕೃಷಿಯೊಂದಿಗೆ ಉಪ ಉತ್ಪನ್ನಗಳ ಉತ್ಪಾದನೆ ಹೆಚ್ಚಾಗಬೇಕಿದೆ. ಕೃಷಿಯೊಂದಿಗೆ ಉಪಕಸುಬುಗಳನ್ನು ಅಳವಡಿಸಿಕೊಂಡಾಗ ಕೃಷಿಕರ ಜೀವನ ಮಟ್ಟದ ಜೊತೆಗೆ ದೇಶದ ಆರ್ಥಿಕತೆಯೂ ಅಭಿವೃದ್ಧಿ ಹೊಂದಲಿದೆ. ನಾವು ಪೌಷ್ಠಿಕ ಸುರಕ್ಷತೆ ಮತ್ತು ಜನರ ಆರೋಗ್ಯದ ಕಡೆ ಗಮನ ಹರಿಸಬೇಕಾಗಿದೆ. ಜಾಗತಿಕ ಆಹಾರಕ್ಕೆ ಸಂಬಂಧಪಟ್ಟ ಸವಾಲುಗಳನ್ನು ಅರಿತುಕೊಳ್ಳಬೇಕು. ವ್ಯವಸಾಯದ ಹೆಜ್ಜೆಗಳು ಪರಿಸರ ನಾಶಕ್ಕೆ ಕಾರಣವಾಗಬಾರದು ಎಂದರು.

ಕೋವಿಡ್ ಸಾಂಕ್ರಮಿಕ ಸಂದರ್ಭದಲ್ಲೂ ನಿಮ್ಮ ಪರಿಶ್ರಮ, ಸಾಧನೆ ಗಣನೀಯವಾದದ್ದು. ಇದಕ್ಕೆ ಕಾರಣರಾದ ನಿಮ್ಮ ಪೋಷಕರು, ಅಧ್ಯಾಪಕರ ಬದ್ಧತೆ ಶ್ಲಾಘನೀಯ. ನಿಮ್ಮ ಕನಸುಗಳು ಸಾಕಾರವಾಗಲಿ. ಯುವ ಪದವೀಧರರಾಗಿ ವಾಸ್ತವ ಜಗತ್ತಿಗೆ ಕಾಲಿಟ್ಟಿದ್ದೀರಿ. ಜಗತ್ತಿನ ಸಮಸ್ಯೆಗಳಿಗೆ ನಿಮ್ಮಲ್ಲಿ ಹಲವರು ಪರಿಹಾರವನ್ನೂ ನೀಡಬಹುದು. ಆ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿಮ್ಮಿಂದಾಗಿ ದೇಶ ಹೆಮ್ಮೆ ಪಡುವಂತಾಗಲಿ. ನಿಮ್ಮ ಕುಟುಂಬ, ಗುರುಗಳು ನಿಮ್ಮನ್ನು ಮೆಚ್ಚಿಕೊಳ್ಳಲಿ. ನಿಮಗೆ ಎಲ್ಲವನ್ನೂ ಕೊಟ್ಟಿರುವ ದೇಶಕ್ಕೆ ನಿಮ್ಮ ಕೊಡುಗೆಯನ್ನು ಕೊಡುವ ಸಮಯ ಬಂದಿದೆ. ಆ ಸಾಮರ್ಥ್ಯವೂ ಕೂಡ ನಿಮ್ಮಲ್ಲಿದೆ. ನಿಮ್ಮ ಬೇರುಗಳನ್ನು ಪರಂಪರೆಗಳನ್ನು ಮತ್ತು ನಿಮ್ಮ ಸಂಸ್ಕೃತಿಯನ್ನು ಮರೆಯಬೇಡಿ. ನಿಮ್ಮ ಜನ್ಮಭೂಮಿಗೆ ಕೊಡುಗೆ ನೀಡಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ, ಕುಲಸಚಿವರುಗಳಾದ ಜಿ. ಅನುರಾಧ, ಪ್ರೊ. ನವೀನ್ ಕುಮಾರ್ ಇದ್ದರು.

31 ನೇ ಘಟಿಕೋತ್ಸವದ ರ‍್ಯಾಂಕ್, ಪದವಿ ಪಡೆದವರು :

2019 -20 ಸಾಲಿನ ಘಟಿಕೋತ್ಸವದಲ್ಲಿ 61 ಪುರುಷರು ಹಾಗೂ 30 ಮಹಿಳೆಯರು ಸೇರಿ ಒಟ್ಟು 91 ಅಭ್ಯರ್ಥಿಗಳು ಪಿ.ಹೆಚ್.ಡಿ. ಪದವಿ ಪಡೆಯಲು ಅರ್ಹರಾಗಿರುತ್ತಾರೆ.

10214 ಪುರುಷರು ಹಾಗೂ 15221 ಮಹಿಳೆಯರು ಸೇರಿ ಒಟ್ಟು 25435 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಘಟಿಕೋತ್ಸವದಲ್ಲಿ 127 ಸ್ವರ್ಣಪದಕಗಳು ಇದ್ದು, ಅವುಗಳನ್ನು 20 ಪುರುಷರು ಹಾಗೂ 51 ಮಹಿಳೆಯರು ಸೇರಿ ಒಟ್ಟು 71 ವಿದ್ಯಾರ್ಥಿಗಳು ಹಂಚಿಕೊಂಡಿರುತ್ತಾರೆ. 17 ನಗದು ಬಹುಮಾನಗಳು ಇದ್ದು, ಎಲ್ಲವುಗಳನ್ನು 13 ಮಹಿಳಾ ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.

32 ನೇ ಘಟಿಕೋತ್ಸವದ ರ‍್ಯಾಂಕ್, ಪದವಿ ಪಡೆದವರು :

2020 -21 ನೇ ಸಾಲಿನ ಘಟಿಕೋತ್ಸವದಲ್ಲಿ 82 ಪುರುಷರು ಹಾಗೂ 47 ಮಹಿಳೆಯರು ಸೇರಿ ಒಟ್ಟು 129 ಅಭ್ಯರ್ಥಿಗಳು ಪಿ.ಹೆಚ್.ಡಿ. ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಈ ಘಟಿಕೋತ್ಸವದಲ್ಲಿ 8324 ಪುರುಷರು ಹಾಗೂ 12314 ಮಹಿಳೆಯರು ಸೇರಿ ಒಟ್ಟು 20638 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದರು.

ಘಟಿಕೋತ್ಸವದಲ್ಲಿ 132 ಸ್ವರ್ಣಪದಕಗಳಿದ್ದು, 14 ಪುರುಷರು ಹಾಗೂ 52 ಮಹಿಳೆಯರು ಸೇರಿ ಒಟ್ಟು 66 ವಿದ್ಯಾರ್ಥಿಗಳು ಹಂಚಿಕೊಂಡಿರುತ್ತಾರೆ. 17 ನಗದು ಬಹುಮಾನಗಳು ಇದ್ದು, 13 ಮಹಿಳಾ ವಿದ್ಯಾರ್ಥಿಗಳು ಹಾಗೂ ಇಬ್ಬರು ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 15 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.

ಎರಡು ವರ್ಷಗಳ ಘಟಿಕೋತ್ಸವದಲ್ಲಿ ಕನ್ನಡ ಭಾರತಿ ವಿಭಾಗದ ದಿವ್ಯಾ ಹೆಚ್. ಎನ್. ಅತಿ ಹೆಚ್ಚು ಒಟ್ಟು 11 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆದಿರುತ್ತಾರೆ.

ಗೌರವ ಡಾಕ್ಟರೇಟ್ ಪಡೆದ ಸಾಧಕರು :

31ನೇ ಘಟಿಕೋತ್ಸವದ ಭಾಗವಾಗಿ ಸಾರ್ವಜನಿಕ ಆಡಳಿತದಲ್ಲಿ ಅಪಾರ ಸೇವೆ ಸಲ್ಲಿಸಿರುವ ಸಾರ್ವಜನಿಕ ಆಡಳಿತದಲ್ಲಿ ಅಪಾರ ಸೇವೆ ಸಲ್ಲಿಸಿರುವ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ. ಹೆಚ್. ಶಂಕರಮೂರ್ತಿ, ಶಿಕ್ಷಣತಜ್ಞೆ ಗೀತಾ ನಾರಾಯಣನ್ ಹಾಗೂ ಯೋಗ ಗುರು ಭ. ಮ. ಶ್ರೀಕಂಠ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

32ನೇ ಘಟಿಕೋತ್ಸವದ ಭಾಗವಾಗಿ ಶಿಕ್ಷಣತಜ್ಞ, ವಿಶ್ರಾಂತ ಕುಲಪತಿ ಪೊ| ರ. ಟಿ.ವಿ. ಕಟ್ಟಿಮನಿ, ಅಂಧ ಕ್ರಿಕೆಟಿಗ ಮಹಾಂತೇಶ್ ಜಿ. ಕಿವಡಸಣ್ಣವರ್, ಯೋಗಗುರು ಬಾ. ಸು. ಅರವಿಂದ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here