ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಭಾರತ್ ಬಂದ್’ಗೆ ಬೆಂಬಲ : ಕಾಯ್ದೆ ಪ್ರತಿಗಳನ್ನು ಸುಟ್ಟು ಪ್ರತಿಭಟನೆ

0
396

ಶಿವಮೊಗ್ಗ: ಜಿಲ್ಲಾಧಿಕಾರಿಗಳ ಕಚೇರಿ ಎದುರು ಇರುವ ರಸ್ತೆಯಲ್ಲಿ ಇಂದು ರೈತ ವಿರೋಧಿ ಕೃಷಿ ಕಾಯ್ದೆಗಳ ಪ್ರತಿಯನ್ನು ಸುಡುವ ಮೂಲಕ ಸಂಯುಕ್ತ ಕಿಸಾನ್ ಮೋರ್ಚಾ ಐಕ್ಯ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ವಿವಿಧ ಪ್ರಗತಿ‌ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು.

ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಮುಂಭಾಗದಲ್ಲಿಯೇ ಪ್ರತಿಭಟನಾ ಸಭೆ ನಡೆಸಿದ ರೈತ ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಇಂದು ಭಾರತ್ ಬಂದ್ ಇದ್ದರು ಕೂಡ ನಾವು ಕೇವಲ ಪ್ರತಿಭಟನೆಗೆ ಮಾತ್ರ ಸೀಮಿತಗೊಳಿಸಿದ್ದೇವೆ. ಕೃಷಿ ಕಾಯ್ದೆಗಳ ಪ್ರತಿಗಳನ್ನು ನಾವೇ ಸುಡುವ ಮೂಲಕ ಇದನ್ನು ರದ್ದುಗೊಳಿಸಿದ್ದೇವೆ. ರೈತ ಹೋರಾಟ ಮತ್ತಷ್ಟು ಮುಂದುವರೆಯುತ್ತದೆ ಎಂಬುದಕ್ಕೆ ಇದೇ ಸಾಕ್ಷಿ ಎಂದರು.

ರೈತ ಮುಖಂಡ ಹೆಚ್.ಆರ್.ಬಸವರಾಜಪ್ಪ ಮಾತನಾಡಿ, ದಕ್ಷಿಣ ಭಾರತದಲ್ಲಿ ರೈತ ಚಳವಳಿ ತಲೆಯೆತ್ತಿ ನಿಂತಿದೆ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ. ಸರ್ಕಾರ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ. ಯಾವುದೇ ಕಾರಣಕ್ಕೂ ರೈತ ವಿರೋಧಿ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳುವವರೆಗೂ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದರು.

ಮಾ.20 ರಂದು ಶಿವಮೊಗ್ಗದಲ್ಲಿ ನಡೆದ ರೈತ ಮಹಾ ಪಂಚಾಯತ್‌ನಲ್ಲಿ ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ವಿರುದ್ದ ಶಿವಮೊಗ್ಗದ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಯಾಕಾಗಿ ಎಂದು ಗೊತ್ತಿಲ್ಲ. ಅವರು ಕೊಲೆ ಮಾಡಿ ಎಂದು ಕರೆ ನೀಡಿಲ್ಲ. ಕೈಕಾಲು ಕಡಿಯಿರಿ ಎಂದಿಲ್ಲ. ಬೆಂಕಿ ಹಚ್ಚಿ ಎಂದಿಲ್ಲ. ಯಾವ ಉದ್ರೇಕಕಾರಿ ಭಾಷಣವನ್ನು ಮಾಡಿಲ್ಲ ಆದರೂ ಕೂಡ ಬಿಜೆಪಿ ಏಜೆಂಟರಂತೆ ವರ್ತಿಸಿರುವ ಪೊಲೀಸರು ಕೇಸು ದಾಖಲಿಸಿಕೊಂಡು ಮತ್ತಷ್ಟು ಗೊಂದಲವನ್ನು ಅವರೆ ಸೃಷ್ಟಿ ಮಾಡಿಕೊಂಡಿದ್ದಾರೆ ಎಂದರು.

ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ಯಾರಿಗೆ ಕೇಸು ಹಾಕಬೇಕು ಅವರಿಗೆ ಕೇಸು ಹಾಕುವುದಿಲ್ಲ. ಹಾಗೆ ಹಾಕಿದ್ದರೆ ಭವಿಷ್ಯ ಅವರೆಲ್ಲರೂ ಇಂದು ಜೈಲಿನಲ್ಲಿ ಇರಬೇಕಾಗುತ್ತಿತ್ತು. ಕೈ ಕಾಲು ಕಡಿಯಿರಿ ಎಂದ ರಾಜಕಾರಣಿಗಳನ್ನು ಬಿಟ್ಟಿದ್ದಾರೆ. ಪ್ರತಾಪಸಿಂಹ, ಈಶ್ವರಪ್ಪ, ಅನಂತ್ ಕುಮಾರ್ ಹೆಗ್ಡೆ ಮುಂತಾದವರು ಪ್ರಚೋದನಕಾರಿ ಹೇಳಿಕೆ ನೀಡಿ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡಿದ್ದಾರೆ. ಅವರೆಲ್ಲರನ್ನು ಬಿಟ್ಟು ರೈತರ ಸಮಸ್ಯೆಗಳನ್ನು ಹೇಳಲು ಬಂದವರ ಮೇಲೆ ಇವರು ಕೇಸು ದಾಖಲಿಸಿಕೊಂಡಿದ್ದಾರೆ. ಇದು ನಾಚಿಗೇಡಿನ ವಿಷಯ ಎಂದರು.

ನೆಹರೂ ಕ್ರೀಡಾಂಗಣದಲ್ಲಿ ರೈತ ಮಹಾ ಪಂಚಾಯತ್ ಸಭೆ ನಡೆಸಲು ಅನುಮತಿಯನ್ನು ನಾವು ಕೇಳಿದ್ದೆವು. ಆದರೆ ಇಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಿಟ್ಟು ಬೇರೆ ಯಾವುದಕ್ಕೂ ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ನಾಳೆ ನಡೆಯಲಿರುವ ಚಕ್ರವರ್ತಿಸೂಲಿಬೆಲೆಯ ಉಪನ್ಯಾಸಕ್ಕೆ ಹೇಗೆ ಅನುಮತಿ ಕೊಟ್ಟರು ಎನ್ನುವುದನ್ನು ನಾವು ಪ್ರಶ್ನೆ ಮಾಡಬೇಕಾಗುತ್ತದೆ. ಅಲ್ಲಿ ಕಾರ್ಯಕ್ರಮವಾಗಬಾರದು ಒಂದು ಪಕ್ಷ ಆದರೆ ಜಿಲ್ಲಾಧಿಕಾರಿಗಳನ್ನು ಸೇರಿಸಿಕೊಂಡು ಪಿಸಿಆರ್ ಕೇಸ್‌ನ್ನು ನಾವೇ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕೆ.ಎಲ್.ಅಶೋಕ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿದ್ದರೆ ಬಿಜೆಪಿ ಸರ್ಕಾರ ರೈತ ಮುಖಂಡನ ಮೇಲೆ ಹಾಕಿರುವ ಕೇಸನ್ನು ವಾಪಸ್ಸು ಪಡೆಯಬೇಕು. ಹೀಗೆ ಹೆದರಿಸುವ ಮೂಲಕ ಹೋರಾಟವನ್ನು ಬಗ್ಗು ಬಡಿಯುತ್ತೇವೆ ಎಂಬ ಭ್ರಮೆ ಬೇಡ ರಾಕೇಶ್ ಟಿಕಾಯತ್ ಇಡೀ ಭಾರತದ ರೈತರ ಕಣ್ಮಣಿ ಅವರ ಕಣ್ಣಿನಿಂದ ಒಂದು ತೊಟ್ಟು ಹನಿ ಹೊರ ಬಂದರು ಕೂಡ ಇಡೀ ಭಾರತದ ರೈತರು ಅವರ ಪರವಾಗಿರುತ್ತಾರೆ. ಕಾಡ್ಗಿಚ್ಚಿನಂತೆ ಹೋರಾಟ ಹಬ್ಬುತ್ತದೆ. ಹಾಗಾಗಿ ಸರ್ಕಾರ ಎಚ್ಚರಿಕೆಯಿಂದ ಇರಬೇಕು ಎಂದರು.

ನಾವು ಯಾವ ಕೇಸಿಗೂ ಹೆದರುವುದಿಲ್ಲ. 21 ನೇ ಶತಮಾನ ಒಂದು ಜನಾಕ್ರೋಶದ ಆಸ್ಪೋಟಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮವನ್ನು ಮೋದಿ ಮತ್ತು ಆತನ ಪಟಾಲಂ ತಿಳಿಯಬೇಕಾಗಿದೆ. ಇನ್ನಾದರು ಬಂಡವಾಳ ಶಾಹಿಗಳ ಪಕ್ಕಕ್ಕೆ ಕುಳಿತುಕೊಳ್ಳುವುದನ್ನು ನಿಲ್ಲಿಸಲಿ ಎಂದರು.

ವಿವಿಧ ಪಕ್ಷಗಳ ಮುಖಂಡರಾದ ಎಂ.ಶ್ರೀಕಾಂತ್, ಎನ್.ರಮೇಶ್, ಜಿ.ಪಲ್ಲವಿ,ಹೆಚ್.ಸಿ.ಯೋಗೀಶ್, ಆರ್. ಎಂ.ಮಂಜುನಾಥ ಗೌಡ, ಬಿ.ಎ.ರಮೇಶ್ ಹೆಗ್ಡೆ, ನಾಗರಾಜ್ ಕಂಕಾರಿ, ಟಿ.ಹೆಚ್.ಹಾಲೇಶಪ್ಪ ಮುಂತಾದವರು ಮಾತನಾಡಿ, ರೈತರ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಇದು ಆರಂಭ ರೈತ ವಿರೋಧಿ ಕಾಯ್ದೆಗಳನ್ನು ಮತ್ತು ರೈತ ನಾಯಕನ ಮೇಲೆ ಹಾಕಿದ ಕೇಸನ್ನು ವಾಪಸ್ಸು ತೆಗೆದುಕೊಳ್ಳದಿದ್ದರೆ ಶಿಕಾರಿಪುರದಿಂದಲೇ ಬೆಂಗಳೂರಿಗೆ ಪಾದಯಾತ್ರೆ ಮಾಡುತ್ತೇವೆ. ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಇದು ರಾಜಕೀಯ ಕೊನೆಯ ದಿನಗಳಾಗಲಿವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಕಾಶಿ ವಿಶ್ವನಾಥ್, ಜಾರ್ಜ್, ವಸಂತ್‌ಕುಮಾರ್, ಯಶವಂತರಾವ್ ಘರ‍್ಪಡೆ, ಪಾಲಾಕ್ಷಿ, ಮಂಜುನಾಥ್, ನಾರಾಯಣ ಸೇರಿದಂತೆ ಹಲವರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here