ಕೃಷಿ ಪರಿಕರಗಳನ್ನು ಖರೀದಿಸುವಾಗ ಜಾಗ್ರತೆ ವಹಿಸಿ

0
989

ಹೊಸನಗರ: ಕೃಷಿ ಪರಿಕರಗಳನ್ನು ಖರೀದಿಸುವಾಗ ಜಾಗ್ರತೆ ವಹಿಸಿಕೊಳ್ಳುವಂತೆ ಹೊಸನಗರ ಸಹಾಯಕ ನಿರ್ದೇಶಕ ಗಣೇಶ ಜೆ ಕಮ್ಮಾರ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ತಾಲೂಕಿನ ಎಲ್ಲಾ ರೈತರು ಪ್ರತಿ ಬಾರಿ ರಸಗೊಬ್ಬರ ಖರೀದಿಸಲು ಅಧಿಕೃತ ಪರವಾನಿಗೆ ಪಡೆದ ಮಾರಾಟಗಾರರಿಗೆ ಆಧಾರ್‌ ಸಂಖ್ಯೆ, ಮಾಹಿತಿಯನ್ನು ನೀಡಿ POS Machine ನಲ್ಲಿರುವ ಬಯೋಮೆಟ್ರಿಕ್ ನಲ್ಲಿ ದೃಢೀಕರಿಸಿ ರಸಗೊಬ್ಬರ ಖರೀದಿಸಬೇಕು.

ರೈತರೇ ಸ್ವತಃ ಖರೀದಿಸಲು ಹೋಗಲು ಸಾಧ್ಯವಾಗದೇ ಇದ್ದಲ್ಲಿ ರೈತರ ಆಧಾರ್‌ ಸಂಖ್ಯೆಯೊಂದಿಗೆ ರೈತರ ಪರವಾಗಿ ಖರೀದಿಸುವವರ ಆಧಾರ್ ಸಂಖ್ಯೆಯನ್ನು ಮಾರಾಟಗಾರರಿಗೆ ನೀಡಿ ಖರೀದಿಸತಕ್ಕದ್ದು, ಅಗತ್ಯಕ್ಕೆ ಅನುಗುಣವಾಗಿ ಮಾತ್ರ ರಸಗೊಬ್ಬರವನ್ನು ಗರಿಷ್ಠ ಮಾರಾಟ ದರದಲ್ಲಿ (MRP) ಖರೀದಿಸಿ ರಸೀದಿ ಪಡೆಯಬೇಕು. ನಕಲಿ ರಾಸಾಯನಿಕ ಗೊಬ್ಬರ ಮತ್ತು ಜೈವಿಕ ಹಸರಿನ ನಕಲಿ ಪೀಡನಾಶಕ ಹಾಗೂ ಸಸ್ಯವರ್ಧಕಗಳನ್ನು ನೇರವಾಗಿ ರೈತರು ಮನೆ ಮನೆಗೆ ಭೇಟಿ ನೀಡಿ ಪರವಾನಗಿ ಇಲ್ಲದ ಅನಧಿಕೃತ ಮಾರಾಟಗಾರರಿಂದ ಖರೀದಿಸುತ್ತಿದ್ದು, ಇದರಿಂದ ರೈತರಿಗೆ ಯಾವುದೇ ತರಹದ ಉಪಯೋಗವಾಗುವುದಿಲ್ಲ.

ಈ ತರಹದ ನಕಲಿ ರಾಸಾಯನಿಕ ಗೊಬ್ಬರ ಮತ್ತು ಜೈವಿಕ ಹೆಸರಿನ ನಕಲಿ ಪೀಡನಾಶಕ ಸಸ್ಯವರ್ಧಕಗಳಲ್ಲಿ ವಿಷಪೂರಿತ ರಾಸಾಯನಿಕ ಅಂಶಗಳನ್ನು ಒಳಗೊಂಡಿರಬಹುದು, ಇವುಗಳನ್ನು ಬಳಸಿದರೆ ಮಣ್ಣು ಮತ್ತು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾದ್ದರಿಂದ ಯಾವುದೇ ಕಾರಣಕ್ಕೂ ನಕಲಿ, ಕೃಷಿ ಪರಿಕರಗಳನ್ನು ಬಳಸಬಾರದು.

ಅಧಿಕೃತ ಪರವಾನಗಿ ಪಡೆದ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಅಥವಾ ಖಾಸಗಿ ಮಾರಾಟಗಾರರಿಂದಲೇ ಗೊಬ್ಬರ, ಕೀಟನಾಶಕ, ಬಿತ್ತನೆ ಬೀಜವನ್ನು ರೈತರು ಖರೀದಿಸಬೇಕು. ಬಿಲ್ ನಲ್ಲಿನ ದರವು ಚೀಲ, ಪ್ಯಾಕೆಟ್‌ನಲ್ಲಿರುವ ದರದಷ್ಟೇ ಇದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಖರೀದಿ ಮಾಡುವಾಗ ನಗದು ಬಿಲ್ ಪಡೆದು ಲಾಟ್ ಸಂಖ್ಯೆ ಅಥವಾ ಬ್ಯಾಚ್ ಸಂಖ್ಯೆ ನಮೂದಿಸಿದ ಕುರಿತು ಗಮನಿಸಬೇಕು. ಮಾರಾಟಗಾರ ಕುರಿತಂತೆ ಸಂದೇಹ ಕಂಡು ಬಂದರೆ, ನಿಯಮ ಪಾಲಿಸದ ಮಾರಾಟಗಾರರು ಕಂಡುಬಂದರೆ ಖರೀದಿ ಮಾಡಿದ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ದೂರು ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here