ಕೃಷಿ ಪರಿಕರಗಳ ವಿತರಣೆ ಮತ್ತು ಮಾರಾಟ ಸಭೆ

0
243

ಶಿಕಾರಿಪುರ: ತಾಲ್ಲೂಕಿನಲ್ಲಿ ಮುಂಗಾರು ಆರಂಭವಾಗುವ ಪೂರ್ವದಲ್ಲಿಯೇ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ರಸಗೊಬ್ಬರ ಕೀಟನಾಶಕ ಮತ್ತು ಬಿತ್ತನೆ ಬೀಜಗಳ ಮಾರಾಟಗಾರರಿಗೆ, ವಿವಿಧ ರೀತಿಯ ಮಾಹಿತಿ ನೀಡುವ ಸದುದ್ದೇಶದಿಂದ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳಿಂದ 2022ನೇ ಮುಂಗಾರು ಹಂಗಾಮು ರೈತರಿಗೆ ಕೃಷಿ ಪರಿಕರಗಳ ಪೂರೈಕೆ ಸಂಬಂಧಿಸಿದಂತೆ ಕೃಷಿ ಪರಿಕರಗಳ ವಿತರಣೆ ಮತ್ತು ಮಾರಾಟ ಸಭೆ ನಡೆಸುವುದರ ಮೂಲಕ ರಸಗೊಬ್ಬರ ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ತರಬೇತಿ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ಜಿಲ್ಲಾ ಕೃಷಿ ಉಪ ನಿರ್ದೇಶಕರಾದ ಬಸವರಾಜ್ ಡಿ ಎಂ ಭಾಗವಹಿಸಿ ಮಾತನಾಡಿ, ಯಾವುದೇ ವ್ಯಕ್ತಿಯು ತಾನು ಮಾಡುವ ಕೆಲಸದಲ್ಲಿ ಭಯ ಭಕ್ತಿ ಇರಬೇಕು. ತಾನು ಮಾಡುವ ಸೇವೆ ಅಥವಾ ಕೆಲಸದಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಒಳ್ಳೆಯದಾದರೆ ಆ ವ್ಯಕ್ತಿಗೆ ಸಮಾಜದಲ್ಲಿ ಬೆಲೆ ಮತ್ತು ಗೌರವ ಸಿಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಮುಂಗಾರು ಹಂಗಾಮು ಆರಂಭವಾಗಲಿದ್ದು, ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ರಸಗೊಬ್ಬರ ಕೀಟನಾಶಕ ಮತ್ತು ಬಿತ್ತನೆ ಬೀಜಗಳನ್ನು ಕಡ್ಡಾಯವಾಗಿ ರಸಗೊಬ್ಬರ ಅಂಗಡಿ ಮುಂಗಟ್ಟುಗಳ ಮಾಲೀಕರು ಸಕಾಲದಲ್ಲಿ ನಿಗದಿತ ದರಗಳಲ್ಲಿ ವಿತರಣೆ ಮಾಡುವುದು ಅಗತ್ಯವಾಗಿದೆ. ಯಾವುದೇ ಕಾರಣಕ್ಕೂ ಯಾವುದೇ ರೀತಿಯ ರಸಗೊಬ್ಬರದ, ಕೀಟನಾಶಕ ಮತ್ತು ಬಿತ್ತನೆ ಬೀಜಗಳನ್ನು ಗೋಡೌನ್ ಗಳಲ್ಲಿ ದಾಸ್ತಾನು ಮಾಡುವ ಹಾಗಿಲ್ಲ ಹಾಗೇನಾದರೂ ಮಾಡಿದರೆ ಅಗತ್ಯವಾಗಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಭಾಗವಹಿಸಿದ್ದ ಮಾಲೀಕರಿಗೆ ಎಚ್ಚರಿಕೆಯ ಸಂದೇಶ ನೀಡಿದರು.

ದೇಶದಲ್ಲಿ ರಸಗೊಬ್ಬರಕ್ಕಾಗಿ ಕೇಂದ್ರ ಸರ್ಕಾರವು 2020-21 ನೇ ಸಾಲಿನಲ್ಲಿ 127 ಲಕ್ಷ ಕೋಟಿ, 2021-22 ರಲ್ಲಿ 160 ಲಕ್ಷ ಕೋಟಿ, ಹಾಗೂ ಪ್ರಸಕ್ತ ಸಾಲಿನಲ್ಲಿ 200 ಲಕ್ಷ ಕೋಟಿ ರೂಪಾಯಿಯಷ್ಟು ಸಹಾಯ ಧನವನ್ನು ನೀಡಲಾಗುತ್ತಿದೆ. ತಾಲ್ಲೂಕಿನಲ್ಲಿ ಒಟ್ಟು 144 ಕೃಷಿ ಪರಿಕರಗಳ ಮಾರಾಟಗಾರರು ಪರವಾನಿಗೆ ಪಡೆದಿದ್ದಾರೆ. ಅದರಲ್ಲಿ 100 ಮತ್ತು 44 ಪಿಎಸಿಎಸ್( ಸೊಸೈಟಿ) ಗಳಿವೆ.‌ ಒಟ್ಟು 31623 ಹೆಕ್ಟೇರ್ ಕೃಷಿ ಮತ್ತು 21830 ತೋಟಗಾರಿಕೆ ಬೆಳೆಗಳು ಸೇರಿದಂತೆ ಒಟ್ಟಾರೆಯಾಗಿ 53423 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಆವರಿಸಿದೆ.

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಡಿಎಪಿ, ಯೂರಿಯಾ, ಪೊಟ್ಯಾಷ್, ಕಾಂಪ್ಲೆಕ್ಸ್ ವಿವಿಧ ರೀತಿಯ ರಸಗೊಬ್ಬರಗಳು ಸೇರಿದಂತೆ ಒಟ್ಟು 70 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಅಗತ್ಯತೆ ಇದ್ದು, ಶಿಕಾರಿಪುರ ತಾಲ್ಲೂಕಿಗೆ ಒಟ್ಟು 21000 ಟನ್ ರಸಗೊಬ್ಬರ ಪೂರೈಕೆಯಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರವು, ಪ್ರತಿ ಒಂದು ಚೀಲ ಡಿಎಪಿಗೆ ಒಟ್ಟು ದರ 3850 ರೂಪಾಯಿ ಮೌಲ್ಯವಿದ್ದರೆ, ಕೇಂದ್ರ ಸರ್ಕಾರದಿಂದ 2500 ರೂಪಾಯಿ ಸಹಾಯಧನವನ್ನು ನೀಡಲಾಗುವುದು ರೈತರಿಂದ 1350 ರೂಪಾಯಿ, ಪೊಟ್ಯಾಷ್ ಗೆ ಒಟ್ಟು ದರ 2460 ರೂಪಾಯಿಯಾದರೆ, ಕೇಂದ್ರ ಸರ್ಕಾರದ ಸಹಾಯ ಧನ 760 ರೂಪಾಯಿ ನೀಡಲಾಗುವುದು, ರೈತರಿಂದ 1700 ರೂಪಾಯಿ, ಯೂರಿಯಾ ಒಟ್ಟು ದರ 1666 ರೂಪಾಯಿಯಾದರೆ, ಕೇಂದ್ರ ಸರ್ಕಾರದ ಸಹಾಯ ಧನ 1400 ನೀಡಲಾಗುವುದು ರೈತರಿಂದ 266 ರೂಪಾಯಿ, ಕಾಂಪ್ಲೆಕ್ಸ್ ಗೆ ಒಟ್ಟು 3204 ರೂಪಾಯಿಯಾದರೆ, ಕೇಂದ್ರ ಸರ್ಕಾರದ ಸಹಾಯ ಧನ 1734 ರೂಪಾಯಿ, ರೈತರಿಂದ 1470 ರೂಪಾಯಿ ಮಾತ್ರ ಪಡೆಯಬೇಕು. ಹೀಗೆ ಕೇಂದ್ರ ಸರ್ಕಾರದಿಂದ ಒಟ್ಟು 42 ಕೋಟಿಯಷ್ಟು ಸಹಾಯ ಧನವನ್ನು ನೀಡಲಾಗುತ್ತಿದೆ ಎಂದರು.

ಇತ್ತೀಚೆಗೆ ಯೂರಿಯಾ ಗೊಬ್ಬರವನ್ನು ಬೇರೆ ಬೇರೆ ರೀತಿಯಲ್ಲಿ ಬಳಕೆ ಮಾಡಲಾಗುತ್ತಿದ್ದು, ಯೂರಿಯಾ ಗೊಬ್ಬರವನ್ನು ರಸಗೊಬ್ಬರ ಮಾರಾಟದ ಪರವಾನಗಿ ಹೊಂದಿರುವ ಬೇರೆ ಕಡೆಗೆ ದಾಸ್ತಾನು ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ತಿಳಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಜರುಗಿಸಬಹುದಲ್ಲದೇ 7 ವರ್ಷಗಳ ಕಾಲ ಜೈಲು ವಾಸ ನೀಡಲಾಗುವುದಲ್ಲದೇ ಅಂಥವರ ಪರವಾನಗಿಯನ್ನು ರದ್ದು ಪಡಿಸಲಾಗುವುದು. ಅದೇ ರೀತಿಯಲ್ಲಿ ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳನ್ನು, ಅವಧಿ ಮುಗಿದ ಕೀಟನಾಶಕಗಳನ್ನು ಮಾರಾಟ ಮಾಡುವವರ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅನೇಕ ಪರವಾನಗಿ ಹೊಂದಿರುವ ಮಾಲೀಕರು ಸಕಾಲದಲ್ಲಿ ತಮ್ಮ ತಮ್ಮ ಪರವಾನಗಿಯನ್ನು ನವೀಕರಣ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಕಿರಣ್ ಹತ್ರಿ, ಸಹಕಾರ ಇಲಾಖೆಯ ಸಿಡಿಒ ಅರವಿಂದ್, ಶಿವಣ್ಣ, ವೆಂಕಟೇಶ್, ನವೀದ್ ಪಾಟೀಲ್, ಪ್ರದೀಪ್ ಸೇರಿದಂತೆ ತಾಲ್ಲೂಕಿನ ಅನೇಕ ರಸಗೊಬ್ಬರ ಮಾರಾಟಗಾರರು ಹಾಜರಿದ್ದರು

ಜಾಹಿರಾತು

LEAVE A REPLY

Please enter your comment!
Please enter your name here