ಕೆಸರುಗದ್ದೆಯಂತಾದ ರಸ್ತೆ ಮಧ್ಯೆ ಭತ್ತದ ನಾಟಿ ಮಾಡಿ ವಿನೂತನವಾಗಿ ಪ್ರತಿಭಟಿಸಿದ ಮಕ್ಕಳು, ಗ್ರಾಮಸ್ಥರು!

0
1566

ಹೊಸನಗರ : ಸುತ್ತಲೂ ಶರಾವತಿ ಹಿನ್ನೀರು, ನಡುಗಡ್ಡೆಯಂತಿರುವ ನಮ್ಮೂರಿಗೆ ಇರುವುದು ಒಂದೇ ಸಂಪರ್ಕ ರಸ್ತೆ. ಆದರೆ ಅದು ಸಂಪೂರ್ಣ ಹದಗೆಟ್ಟು ಹೋಗಿದ್ದು ರಿಪೇರಿ ಮಾಡಿಕೊಡಿ ಎಂದು ತಾಲ್ಲೂಕಿನ ಪೂಜಾರಿಜಡ್ಡಿನ ಮಕ್ಕಳು ಇಂದು ರಸ್ತೆಯಲ್ಲೇ ನಾಟಿ ಮಾಡಿ ಸ್ಥಳೀಯ ಆಡಳಿತದ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದರು.

ಹರಿದ್ರಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬಾಣಿಗ ಗ್ರಾಮದ ಪೂಜಾರಿಜಡ್ಡು, ಮೊಗೇರರ ಕ್ಯಾಂಪ್ ಹಾಗೂ ಗ್ರಾಮದ ದೇವರ ಕಾಡಿನ ರಸ್ತೆಗಳೆಲ್ಲವೂ ಸಂಪೂರ್ಣ ಹದಗೆಟ್ಟು ಹೋಗಿವೆ. ಹೀಗಾಗಿ ಈ ಭಾಗದ ವಿದ್ಯಾರ್ಥಿಗಳು ಇಂದು ಶಾಲೆಗೆ ಹೋಗದೆ ತಮ್ಮ ಪೋಷಕರೊಂದಿಗೆ ಸೇರಿ ಬೆಳ್ಳಂಬೆಳಿಗ್ಗೆ ರಸ್ತೆ ನಾಟಿ ಮಾಡುವ ಮೂಲಕ ಪ್ರತಿಭಟನೆಗೆ ಇಳಿದರು.

ಈಗಾಗಲೇ ಈ ಸಂಬಂಧ ಗ್ರಾಮ ಪಂಚಾಯಿತಿ ಆಡಳಿತದ ಗಮನಕ್ಕೆ ಹಲವು ಬಾರಿ ತಂದಿದ್ದರೂ ಏನೂ ಪ್ರಯೋಜನವಾಗಿಲ್ಲ. ಹೀಗಾಗಿ ಸ್ಥಳೀಯ ಆಡಳಿತ ಗಮನ ಹರಿಸುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನೆ ನಿರತರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ್ ಬ್ಯಾಣದ, ಪ್ರತಿಭಟನೆ ನಿರತರನ್ನು ಸಮಾಧಾನಿಸಿ, ತಾಲ್ಲೂಕು ಪಂಚಾಯಿತಿ ಇ.ಓ ಪ್ರವೀಣ್ ಕುಮಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ತುರ್ತು ರಿಪೇರಿ ಮಾಡುವಂತೆ ವಿನಂತಿಸಿದರು.

ಬಾಣಿಗ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಜೋಡು ದೇವಸ್ಥಾನ ಹಾಗೂ ಶನೇಶ್ವರ ದೇವಾಲಯಗಳಿದ್ದು, ಪ್ರತಿವಾರ ನೂರಾರು ಭಕ್ತರು ಇಲ್ಲಿ ಸಂಚಾರಿಸುತ್ತಾರೆ. ಅಲ್ಲದೆ ಈ ಭಾಗದಲ್ಲಿ 50ಕ್ಕಿಂತ ಹೆಚ್ಚಿನ ಕುಟುಂಬಗಳು ವಾಸಿಸುತ್ತಿವೆ. ಇಲ್ಲಿನ ಜನರು ಅಂಗಡಿ, ಆಸ್ಪತ್ರೆ, ಶಾಲೆ, ಅಂಗನವಾಡಿ ಸೇರಿದಂತೆ ಎಲ್ಲಾ ಅಗತ್ಯತೆಗಳಿಗೂ ಇದೇ ದಾರಿಯಲ್ಲಿ ಸಂಚರಿಸಬೇಕಾದ ಕಾರಣ ತುರ್ತಾಗಿ ರಸ್ತೆ ಸರಿ ಪಡಿಸಿಕೊಡುವಂತೆ ಮಂಜುನಾಥ್ ಬ್ಯಾಣದ ಕೋರಿದರು.

ಮನವಿಗೆ ಸ್ಪಂದಿಸಿದ ಇಒ ರವರು ಸದ್ಯಕ್ಕೆ ಕೆಸರನ್ನು ತೆರವುಗೊಳಿಸಿ, ಮಳೆಗಾಲದ ನಂತರ ರಸ್ತೆ ಸರಿಪಡಿಸುವ ಭರವಸೆ ನೀಡಿದರು. ಹಾಗೂ ಈ ಸಂಬಂಧ ಸ್ಥಳೀಯ ಶಾಸಕರ ಗಮನಕ್ಕೂ ತಂದು ಪೂರ್ಣ ಪ್ರಮಾಣದ ಕಾಮಗಾರಿ ನಡೆಸುವ ಭರವಸೆ ನೀಡಿದರು.

ಪ್ರತಿಭಟನೆಯ ನೇತೃತ್ವವನ್ನು ಧರ್ಮರಾಜ್, ನೇಮರಾಜ್, ನಾಗರಾಜ್, ರಾಘು, ಶಿವು, ತಿಮ್ಮಪ್ಪ, ಪುಟ್ಟಪ್ಪ, ರವಿ, ಲವ, ಅಭಿಲಾಷ್, ಪ್ರಶಾಂತ್, ಉಮಾಪತಿ, ಗಣಪತಿ, ಬಂಗಾರಪ್ಪ ಹಾಗೂ ಸ್ಥಳೀಯ ವಿನಾಯಕ ಯುವಕ ಸಂಘದ ಸದಸ್ಯರು ಸೇರಿದಂತೆ ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here