ಕೊಡಚಾದ್ರಿ ಕಾಲೇಜಿನಲ್ಲಿ ರಾಷ್ಟ್ರೀಯ ಸಂವಿಧಾನ ದಿನಾಚರಣೆ | ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂರಕ್ಷಿಸಲು, ಬೆಳೆಸಲು ಸಂವಿಧಾನವು ಪೂರಕವಾಗಿದೆ: ಅಂಜನ್ ಕುಮಾರ್

0
422

ಹೊಸನಗರ: ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸನಗರ, ರಾಜ್ಯಶಾಸ್ತ್ರ ವಿಭಾಗ, ಸಾಂಸ್ಕೃತಿಕ ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2, ರೋವರ್ಸ್‌ ಮತ್ತು ರೇಂಜರ್ಸ್‌, ಯುವ ರೆಡ್‌ ಕ್ರಾಸ್‌ ಘಟಕ,ಮಾನವ ಹಕ್ಕುಗಳ ಸಮಿತಿ ಮತ್ತು ಮತದಾರರ ಸಾಕ್ಷರತಾ ಸಂಘ ಇವರ ಸಹಯೋಗದೊಂದಿಗೆ ಭಾರತ ಸ್ವಾತಂತ್ರದ ಅಮೃತ ಮಹೋತ್ಸವ ಆಚರಣೆ ಪ್ರಯುಕ್ತ ಇಂದು ಕುವೆಂಪು ಸಭಾಂಗಣದಲ್ಲಿ ರಾಷ್ಟ್ರೀಯ ಸಂವಿಧಾನ ದಿನ ಆಚರಿಸಲಾಯಿತು.

ಈ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ರಾಜ್ಯಶಾಸ್ತ್ರ ವಿಭಾಗ ಮತ್ತು ಮಾನವ ಹಕ್ಕುಗಳ ಸಮಿತಿಯ ಸಂಚಾಲರಾದ ಪ್ರೊಫೆಸ್ಸರ್‌ ಅಂಜನ್ ಕುಮಾರ್‌ ಎಂ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂರಕ್ಷಿಸಲು, ಬೆಳೆಸಲು ಸಂವಿಧಾನವು ಪೂರಕವಾಗಿದೆ. ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರೀಕನಿಗೂ ಅಮೂಲ್ಯವಾದ ಮೂಲಭೂತ ಹಕ್ಕುಗಳನ್ನು ನೀಡಿದೆ. ಜೊತೆಯಲ್ಲೆ ರಕ್ಷಿಸುವ ಜವಾಬ್ಧಾರಿಯನ್ನು ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ಗಳಿಗೆ ನೀಡಿದೆ, ಸುಖೀ ರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸಲು ನಿರ್ದೇಶಕ ತತ್ವಗಳನ್ನು ಒಳಗೊಂಡಿದೆ. ಇಂಹಹ ಅಮೂಲ್ಯ ಅಂಶಗಳನ್ನು ಹೊಂದಿದ್ದು, ಜಗತ್ತಿನಲ್ಲಿಯೇ ಮಾದರಿಯಾದ ನಮ್ಮ ಸಂವಿಧಾನದ ಬಗ್ಗೆ ಪ್ರತಿಯೊಬ್ಬರೂ ಅರಿಯಬೇಕಾಗಿರುವುದು ಅವಶ್ಯಕವಾಗಿದೆ. ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ಒಳಗೊಂಡಿರುವ ನಮ್ಮ ಸಂವಿಧಾನವು ವ್ಯಕ್ತಿಗೆ ಸ್ವಾತಂತ್ರ್ಯ ಮತ್ತು ಮಾಹಿತಿ ಹಕ್ಕನ್ನು ನೀಡುವುದರೊಂದಿಗೆ ಸಮಾಜದ ಕಟ್ಟ ಕಡೆಯ ಪ್ರತಿಯೊಬ್ಬ ನಾಗರೀಕನೂ ಆಡಳಿತದಲ್ಲಿ ಪಾಲ್ಗೊಳ್ಳುವಂತೆ ಮಾಡಿದೆ. ಆದ್ದರಿಂದ ನಮ್ಮ ಸಂವಿಧಾನವು ಪ್ರಜಾಪ್ರಭುತ್ವದ ಭಗವದ್ಗೀತೆ ಇದ್ದಂತೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಸಿ ಜಯಪ್ಪ, ಸಂವಿಧಾನ ಎಷ್ಟೇ ಉತ್ತಮವಾಗಿ ರಚಿತಗೊಂಡಿದ್ದರೂ ಅದನ್ನು ಜಾರಿಗೆ ತರುವವರು ಕೆಟ್ಟವರಾಗಿದ್ದರೆ ಪ್ರಬಲ ಸಂವಿಧಾನ ದುರ್ಬಲ ಎನಿಸಿಕೊಳ್ಳುತ್ತದೆ. ಆದರೆ ಅದನ್ನು ಜಾರಿಗೆ ತರುವುದು ಒಳ್ಳೆಯವರ ಪಾಲಾದರೆ ದುರ್ಬಲ ಸಂವಿಧಾನವು ಉತ್ತಮ ಎನಿಸಿಕೊಳ್ಳುತ್ತದೆ. ಸಮುದಾಯದ ಪ್ರಗತಿಯನ್ನು ಮಹಿಳೆಯರು ಸಾಧಿಸಿದ ಪ್ರಗತಿಯ ಮೇಲೆ ಅಳೆಯಲಾಗುತ್ತದೆ. ಅಂತಹ ಅವಕಾಶಗಳನ್ನು ಸಂವಿಧಾನವು ನೀಡಿದೆ ಎಂಬ ಅಂಬೇಡ್ಕರ್‌ ರವರ ಮಾತುಗಳನ್ನು ನೆನಪಿಸಿದರು.

ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ಪ್ರಸ್ಥಾಪಿಸಲಾದ ಅಂಶಗಳನ್ನು ಪಾಲಿಸಿ ಗೌರವಿಸುವುದಾಗಿ ಎಲ್ಲಾ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

IQAC ಸಂಚಾಲಕರಾದ ಮಂಜುನಾಥ ಡಿ, ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಸೌಮ್ಯ ಕೆ ಸಿ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಚಾಲಕರಾದ ದೊಡ್ಡಯ್ಯ ಹೆಚ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತೃತೀಯ ಬಿ.ಎ ವಿದ್ಯಾರ್ಥಿನಿ ಬಿಂದು ಎಸ್‌.ಎಂ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ಇಂಪನಾ ಜೆ.ಕೆ ಪ್ರಾರ್ಥಿಸಿದರು, ಕುಮಾರಿ ಅಶ್ವಿತಾ ಎಂ.ಎಲ್‌ ಸ್ವಾಗತಿಸಿದರು. ಕುಮಾರಿ ರಶ್ಮಿತಾ ಸರ್ವರನ್ನು ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here