23.2 C
Shimoga
Sunday, November 27, 2022

ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇದ್ದೂ ಇಲ್ಲದಂತಾದ 32 ಸಿಸಿ ಕ್ಯಾಮೆರಾಗಳು ! ಮರೀಚಿಕೆಯಾದ ಕಳ್ಳರ ಬೇಟೆ


ಹೊಸನಗರ: ಅಕ್ಟೋಬರ್ 13ರ ಗುರುವಾರ ರಾತ್ರಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕೊಡಚಾದ್ರಿ ಕಾಲೇಜಿನಲ್ಲಿ ಕಳ್ಳತನ ನಡೆದಿದ್ದು ಒಂದು ವಾರ ಕಳೆಯುತ್ತಾ ಬಂದರೂ ಇಲ್ಲಿಯವರೆಗೆ ಕಳ್ಳರ ಸುಳಿವು ಸಿಗದೇ ಇರುವುದು ವಿಪರ್ಯಾಸವಾಗಿದೆ.

ಕೊಡಚಾದ್ರಿ ಕಾಲೇಜಿನಲ್ಲಿ ನೋಡುಗರ ಕಣ್ಣಿಗೆ 32 ಸಿ.ಸಿ ಕ್ಯಾಮೆರಾಗಳಿದ್ದು ಆ ಕ್ಯಾಮೆರಾಗಳನ್ನು ಪರೀಕ್ಷೆ ಸಮಯವಾಗಿರುವುದರಿಂದ ಕಾಲೇಜು ರೂಮ್‌ಗಳಿಗೆ ಅಳವಡಿಸಲಾಗಿದೆ ಎಂದು ಹೇಳಲಾಗಿದ್ದು ಆದರೆ ಅದರಲ್ಲಿ ಲ್ಯಾಬ್‌ನಲ್ಲಿರುವ ಒಂದು ಕ್ಯಾಮೆರಾ ಮಾತ್ರ ತನ್ನ ಕಾರ್ಯ ನಿರ್ವಹಿಸುತ್ತಿದ್ದು 31 ಕ್ಯಾಮೆರಾಗಳಲ್ಲಿ ಒಂದು ಕ್ಯಾಮೆರವು ಪ್ರಾಂಶುಪಾಲರ ಕೊಠಡಿಯಲ್ಲಾಗಲಿ ಅಥವಾ ಆಫೀಸ್ ರೂಂನಲ್ಲಾಗಲಿ ಇಲ್ಲದಿರುವುದು ಕಳ್ಳರು ತಪ್ಪಿಸಿಕೊಳ್ಳಲು ಸಹಾಯವಾಗಿದೆ ಎಂದು ಹೇಳಲಾಗಿದೆ.


ಸಿಸಿ ಕ್ಯಾಮೆರಾ ಇಲ್ಲದೇ ಕಳ್ಳರನ್ನು ಹಿಡಿಯಲು ಹೊಸನಗರ ಪೊಲೀಸ್ ಇಲಾಖೆಗೆ ತುಂಬಾ ಕಷ್ಟಕರವಾಗಿದ್ದು ಆದರೂ ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಗಿರೀಶ್‌ರವರ ಮಾರ್ಗದರ್ಶನದಲ್ಲಿ ಸಬ್ಇನ್ಸ್‌ಪೆಕ್ಟರ್ ನೀಲರಾಜ್ ನರಲಾರ ಹಾಗೂ ಪೋಲೀಸ್ ಸಿಬ್ಬಂದಿಗಳು ಕಳ್ಳರ ಬೇಟೆಗಾಗಿ ಅನೇಕ ರೀತಿಯಲ್ಲಿ ಬಲೆ ಬೀಸಿದ್ದು ಮೊಬೈಲ್ ನೆಟ್‌ವರ್ಕ್ ಪತ್ತೆಗಾಗಿ ಶೋಧ ಕಾರ್ಯಕೈಗೊಂಡಿದ್ದಾರೆ.


ಹೊಸನಗರ ಸರ್ಕಾರಿ ಪ್ರಥಮ ದರ್ಜೆ ಕೊಡಚಾದ್ರಿ ಕಾಲೇಜಿನಲ್ಲಿ ಹೆಸರಿಗೆ 32 ಸಿಸಿ ಕ್ಯಾಮೆರಾಗಳಿದ್ದು ಆದರೆ ಲ್ಯಾಬ್ ಸಿಸಿ ಕ್ಯಾಮೆರಾ ಮಾತ್ರ ಸಾಧಾರಣವಾಗಿ ಕಳ್ಳರ ಕೈಚಳಕ ತೋರುತ್ತಿದ್ದು ಇಬ್ಬರು ಕಳ್ಳರು ಕೋಣೆಯ ಒಳಗೆ ಬರುತ್ತಿರುವ ದೃಶ್ಯ ಕಳ್ಳರು ಮುಖವನ್ನು ಸಂಪೂರ್ಣ ಮಾಸ್ಕ್ ಹಾಕಿಕೊಂಡು ಕೈಗೆ ಹ್ಯಾಂಡ್ ಗ್ಲೋಸ್ ಹಾಕಿಕೊಂಡು ಒಳ ನುಗ್ಗುವ ದೃಶ್ಯ ಮಾತ್ರ ಕಾಣಸಿಗುತ್ತಿದ್ದು ಅದು ಸ್ಪಷ್ಟವಾಗಿಲ್ಲದ ಕಾರಣ ಕಳ್ಳರನ್ನು ಹಿಡಿಯುವುದು ಕಷ್ಟಕರವಾಗಿದೆ ಎಂದು ಹೇಳಲಾಗಿದೆ.


ಕಾವಲುಗಾರರಿಲ್ಲ:

ಹೊಸನಗರ ಕೊಡಚಾದ್ರಿ ಕಾಲೇಜಿನಲ್ಲಿ ಕಾವಲುಗಾರರಿಲ್ಲವಂತೆ ಇಷ್ಟು ದೊಡ್ಡ ಕಾಲೇಜಿನಲ್ಲಿ ಕಾವಲುಗಾರನಿಲ್ಲದಿರುವುದು ಆಶ್ಚರ್ಯಕರವಾಗಿದ್ದು ಮಂಜುನಾಥ ಎಂಬ ಕಾವಲುಗಾರನಾಗಿ ನೇಮಕಗೊಂಡಿದ್ದು ಅವರಿಗೆ 6 ಸಾವಿರ ಸಂಬಳ ನೀಡುತ್ತಾರಂತೆ? ಅವರ ಕೆಲಸ ಸಂಜೆ 7 ಗಂಟೆಯಿಂದ ರಾತ್ರಿ 10ಗಂಟೆ ಮುಗಿಸಿಕೊಂಡು ಮನೆಗೆ ಹೋಗುವುದು ಎಂದು ಹೇಳಲಾಗಿದ್ದು ಈ ವಿಷಯ ಎಲ್ಲ ಉಪನ್ಯಾಸಕರಿಗೂ ಗೊತ್ತಿದ್ದು ಪರೀಕ್ಷೆಯ ಸಮಯದಲ್ಲಿ ಪ್ರಶ್ನೆ ಪತ್ರಿಕೆಯನ್ನು ಕಾಲೇಜಿನಲ್ಲಿ ಇಡುವ ಸಂದರ್ಭದಲ್ಲಿ ಯಾರಾದರೂ ಕಾವಲುಗಾರರನ್ನು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನು ಇಡದಿರುವುದು ಕಾಲೇಜಿನ ಬೇಜವಾಬ್ದಾರಿಯನ್ನು ತೋರಿಸುತ್ತದೆ.

ಕೊಡಚಾದ್ರಿ ಕಾಲೇಜಿನ ನಿರ್ವಹಣೆಯಲ್ಲಿ ಲೋಪಗಳು ಎದ್ದು ಕಾಣುತ್ತಿದ್ದು ನೂತನವಾಗಿ ಆಗಮಿಸಿರುವ ಪ್ರಾಂಶುಪಾಲರಾದ ಡಾ|| ಪ್ರಭಾಕರ್‌ರಾವ್ ಹಾಗೂ ಸಿಬ್ಬಂದಿಗಳು ಉಪನ್ಯಾಸಕ ವರ್ಗ ತಕ್ಷಣ ಎಚ್ಚೆತ್ತುಕೊಂಡು ಕಾಲೇಜಿಗೆ ಅನುಕೂಲಕರವಾದ ಜಾಗದಲ್ಲಿ 31 ಸಿಸಿ ಕ್ಯಾಮೆರಾಗಳನ್ನು ಅಳವಾಡಿಸಿಕೊಳ್ಳಬೇಕಾಗಿದೆ. ಇಲ್ಲವಾದರೇ ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಅನಾಹುತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲವಾಗಿದ್ದು ಈ ಕಾಲೇಜಿನಲ್ಲಿ ಗಾಂಜಾ ಚಟುವಟಿಕೆಗಳು ಬಿರುಸಿನಿಂದ ಕೂಡಿದ್ದು ಈಗಾಗಲೇ ಐದಾರು ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡಿ ಮನೆಗೆ ಕಳುಹಿಸಲಾಗಿದ್ದು ಆಗಾಗ ವಿದ್ಯಾರ್ಥಿ-ವಿದ್ಯಾರ್ಥಿಗಳ ನಡುವೆ ಹಾಗೂ ವಿದ್ಯಾರ್ಥಿ- ಉಪನ್ಯಾಸಕರ ಮಧ್ಯೆ ಗಲಾಟೆ ನಡೆಯುತ್ತಿದೆ ಎಂದು ಹೇಳಲಾಗಿದ್ದು ರಾಜಕೀಯ ನಾಯಕರ ಮಧ್ಯ ಪ್ರವೇಶದಿಂದ ಗಲಾಟೆಗಳು ಅಲಲ್ಲಿಯೇ ಮುಚ್ಚಿ ಹೋಗುತ್ತಿದೆ ಎಂದು ಹೇಳಲಾಗಿದ್ದು ತಕ್ಷಣ ಶಾಸಕರಾದ ಹರತಾಳು ಹಾಲಪ್ಪನವರು ಹಾಗೂ ಗೃಹ ಮಂತ್ರಿ ಆರಗ ಜ್ಞಾನೇಂದ್ರರವರು ಕಾಲೇಜಿನ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ಗಾಂಜಾ ಸೇವಿಸಿ ಬಂದ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಗೆ ತಳ್ಳುವುದಕ್ಕೆ ಸಂಪೂರ್ಣ ಸಹಕಾರ ನೀಡಬೇಕಾಗಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಮತ್ತೆರಡು ವಿದ್ಯಾಸಂಸ್ಥೆಗಳಲ್ಲಿ ಕಳ್ಳತನ !

ಕೊಡಚಾದ್ರಿ ಪದವಿ ಕಾಲೇಜು ಬಳಿಕ ನಗರ ಅಮೃತ ವಿದ್ಯಾಲಯ, ನಗರ ವಿದ್ಯಾಸಂಸ್ಥೆಯ ಹೈಸ್ಕೂಲು ವಿಭಾಗದಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಹೈಸ್ಕೂಲ್ ಆಫೀಸ್ ಛೇಂಬರ್ ಮತ್ತು ವಿಜ್ಞಾನ ರೂಂನ ಬಾಗಿಲಿನ ಬೀಗ ಒಡೆದು ಒಳಗಿನ ಬೀರುಗಳನ್ನು ಜಾಲಾಡಿದ್ದಾರೆ. ನಗರ ಠಾಣೆ ಪಿಎಸ್ಐ ನಾಗರಾಜ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಮೂರು ಕಳ್ಳತನಗಳು ಕೂಡ ಒಂದೇ ಮಾದರಿಯಲ್ಲಿದ್ದು ಒಂದೇ ತಂಡ ಈ ಕೃತ್ಯ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!