ಕೊರೊನಾ ಹಿನ್ನಲೆ: ಕೋಣಂದೂರು ಬೃಹನ್ಮಠದ ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಮುಂದೂಡಿಕೆ

0
488

ರಿಪ್ಪನ್‌ಪೇಟೆ: ಬರುವ ಮೇ 16 ರಿಂದ 18 ರವರೆಗೆ ಕೋಣಂದೂರು ಬೃಹನ್ಮಠದ ಗದ್ದುಗೆ ಉದ್ಘಾಟನೆ ಮತ್ತು ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮಸಭೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ಧಾರ್ಮಿಕ ಕಾರ್ಯಕ್ರಮವನ್ನು ಕೊರೊನಾ ಮಹಾಮಾರಿಯಿಂದಾಗಿ ಭಕ್ತ ಸಮೂಹದವರ ತುರ್ತು ಸಭೆಯಲ್ಲಿ ಚರ್ಚಿಸಿ ಮುಂದೂಡಲಾಗಿದೆ ಎಂದು ಮಠದ ಪೀಠಾಧ್ಯಕ್ಷರು ಹಾಗೂ ಗೌರವಾಧ್ಯಕ್ಷರಾದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು ಮತ್ತು ಇಷ್ಟಲಿಂಗ ಪೂಜಾ ಸೇವಾಸಮಿತಿಯ ಅಧ್ಯಕ್ಷ ಕೆ.ಆರ್.ಪ್ರಕಾಶ್ ಜಂಟಿ ಹೇಳಿಕೆಯಲ್ಲಿ ತಿಳಿಸಿದರು.

ಭಾನುವಾರ ಸಂಜೆ ಕೋಣಂದೂರು ಬೃಹನ್ಮಠದಲ್ಲಿ ಕರೆಯಲಾಗಿದ್ದ ಜಗದ್ಗುರುಗಳ ದಿವ್ಯಸಾನಿಧ್ಯದಲ್ಲಿ ನಡೆಯಬೇಕಾಗಿದ್ದ ಲಿಂಗೈಕ್ಯ ಹಿಂದಿನ ಶಿವಾಚಾರ್ಯರ ಗದ್ದುಗೆ ಉದ್ಘಾಟನೆ ಮತ್ತು ಇಷ್ಟಲಿಂಗ ಶಿವಪೂಜಾನುಷ್ಠಾನ ಪೂಜಾ ಕಾರ್ಯಕ್ರಮ ಮತ್ತು ಧರ್ಮಸಭೆಯ ಪೂರ್ವಭಾವಿ ಸಭೆಯ ಸಾನಿಧ್ಯವಹಿಸಿದ ಮಠದ ಪೀಠಾಧ್ಯಕ್ಷರು ಹಾಗೂ ಗೌರವಾಧ್ಯಕ್ಷರಾದ ಶ್ರೀಪತಿ ಪಂಡಿತಾರಾದ್ಯ ಶಿವಾಚಾರ್ಯರು ಮತ್ತು ಇಷ್ಟಲಿಂಗ ಪೂಜಾ ಸೇವಾಸಮಿತಿಯ ಅಧ್ಯಕ್ಷ ಕೆ.ಆರ್.ಪ್ರಕಾಶ್‌ರವರು ದೂರವಾಣಿಯಲ್ಲಿ ಶ್ರೀಶೈಲ ಜಗದ್ಗುರುಗಳನ್ನು ಸಂಪರ್ಕಿಸಿ ಕಾರ್ಯಕ್ರಮ ಕುರಿತು ಚರ್ಚಿಸಿದಾಗ ಶ್ರೀಗಳು ದೇಶವ್ಯಾಪಿ ಉಲ್ಬಣಗೊಳ್ಳುತ್ತಿರುವ ಕೊರೊನಾ ಹೆಮ್ಮಾರಿಯಿಂದಾಗಿ ಸರ್ಕಾರದ ನಿಯಮದಂತೆ ಎಲ್ಲಾ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿರುವುದಾಗಿ ತಿಳಿಸಿ ಮುಂದಿನ ದಿನಾಂಕವನ್ನು ತಿಳಿಸುವುದಾಗಿ ಹೇಳಿ ತಾವು ಕೈಗೊಂಡಿರುವ ಈ ಧಾರ್ಮಿಕ ಕಾರ್ಯಕ್ರಮವನ್ನು ಮುಂದೂಡುವುದು ಸೂಕ್ತ ಎಂಬ ಸಲಹೆ ನೀಡಿದ ಪರಿಣಾಮ ಸಭೆಯು ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳುವುದರೊಂದಿಗೆ ಮುಂಬರುವ ಸೆಪ್ಟಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಏರ್ಪಡಿಸುವ ನಿರ್ಧಾರವನ್ನು ಪ್ರಕಟಿಸಿದರು.

ಅಲ್ಲದೆ ಅಷ್ಟರೊಳಗೆ ಕೊರೊನಾ ಹೆಮ್ಮಾರಿ ಕಡಿಮೆಯಾಗುವುದು ಮತ್ತು ಈಗಾಗಲೆ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಮಠದ ಸಭಾಭವನದ ಕಾಮಗಾರಿ ಪೂರ್ಣಗೊಳಿಸಿ ಆ ಸಂದರ್ಭದಲ್ಲಿ ಜಗದ್ಗುರುಗಳವರ ಹಾಗೂ ರಾಜ್ಯದ ಮುಖ್ಯಮಂತ್ರಿ ಇನ್ನಿತರ ರಾಜಕೀಯ ಮುಖಂಡರುಗಳ ಸಮ್ಮುಖದಲ್ಲಿ ಸಮುದಾಯ ಭವನ ಉದ್ಘಾಟನೆಯನ್ನು ನಡೆಸಲು ಸಹಕಾರಿಯಾಗುವುದೆಂದು ಸಭೆಯಲ್ಲಿ ಸಾಕಷ್ಟು ಜನರ ಸಲಹೆ ಸೂಚನೆಗಳನ್ನು ಮುಕ್ತವಾಗಿ ಹಂಚಿಕೊಂಡರು.

ಪೂರ್ವಭಾವಿ ಸಭೆಯಲ್ಲಿ ಹುಗುಡಿ ವರ್ತೇಶ್‌ಗೌಡ, ವಿಶ್ವನಾಥಗೌಡ ಕಲ್ಲಳ್ಳಿ, ಚಿತ್ರಟೆ ಮಠದ ಲಿಂಗಾರ್ಜುನಸ್ವಾಮಿ, ಸೋಮಶೇಖರ್‌ ದೂನ, ಬಸವನಕೊಪ್ಪ ನಿಜಲಿಂಗಪ್ಪ, ನಟರಾಜ್, ಚನ್ನಮಲ್ಲಪ್ಪ, ತಂಗಳವಾಡಿ ಸಂಗಪ್ಪ, ಚನ್ನಕೊಪ್ಪ ಶಿವಕುಮಾರ್, ಹಿಲ್ಕಂಜಿ ನಂಜುಂಡಪ್ಪ, ವೀರೇಶ್ ಬೆಳಕೋಡು, ಗಂಗಾಧರಗೌಡ ಶಿವಪುರ, ದೊರೆಸ್ವಾಮಿ ಶಿವಪುರ, ಸದಾನಂದ ಮಸರೂರು ಹಾಗೂ ಸಾಗರ-ಹೊಸನಗರ-ತೀರ್ಥಹಳ್ಳಿ ತಾಲ್ಲೂಕಿನ ಹಲವು ಭಕ್ತರು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here