ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ದಿನದ ಅಂತರದಲ್ಲಿ ಪತಿ-ಪತ್ನಿ ಸಾವನ್ನಪ್ಪಿದ್ದಾರೆ. ಮಾರ್ಚ್ 30ರ ಮಂಗಳವಾರದಂದು ಚಿಕ್ಕಮಗಳೂರು ನಗರದ ನೆಹರೂ ನಗರ ನಿವಾಸಿ 69 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದರು. ಮಾರ್ಚ್ 31 ರ ಬುಧವಾರದಂದು 69 ವರ್ಷದ ವೃದ್ಧನ 58 ವರ್ಷದ ಪತ್ನಿ ಕೂಡ ಕೊರೊನಾಗೆ ಸಾವನ್ನಪ್ಪಿದ್ದಾರೆ. ಮೃತ ದಂಪತಿ ಇಬ್ಬರೂ ಕೂಡ ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು.
ದಿನಂ ಪ್ರತಿ 10-15 ಪಾಸಿಟಿವ್ ಪ್ರಕರಣಗಳು ಬರುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊನ್ನೆ ಒಂದೇ ದಿನ 40 ಕೇಸ್ ದಾಖಲಾಗಿದ್ದು, ಜಿಲ್ಲೆಯ ಕೊರೊನಾ ಎರಡನೇ ಅಲೆಯ ಆರ್ಭಟಕ್ಕೆ ಕಾಫಿನಾಡಿನ ಜನರ ಆತಂಕಕ್ಕೂ ಕಾರಣವಾಗಿದೆ. ಹಾಗಾಗಿ, ಜಿಲ್ಲಾಡಳಿತ ಕೂಡ ಅಲರ್ಟ್ ಆಗಿದ್ದು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರಿಗೆ ಕೊರೊನಾ ಟೆಸ್ಟ್ ರಿಪೋರ್ಟ್ ಇಲ್ಲದಿದ್ದರೆ ವಾಪಸ್ ಕಳಿಸುತ್ತಿದ್ದಾರೆ. ಕೆಲವೆಡೆ ಸ್ಥಳದಲ್ಲೇ ಪರೀಕ್ಷೆ ನಡೆಸುತ್ತಿದ್ದಾರೆ.
ಇನ್ನು ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್ ಪೋಸ್ಟ್ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಜಿಲ್ಲಾಡಳಿತ ಕೊರೊನಾ ರ್ಯಾಪಿಡ್ ಟೆಸ್ಟ್ ಮಾಡುತ್ತಿದೆ. ಇನ್ನು ಜಿಲ್ಲೆಯಲ್ಲಿ ಒಂದೇ ದಿನದ ಅಂತರದಲ್ಲಿ ಎರಡು ಸಾವು ಸಂಭವಿಸಿರುವುದರಿಂದ ಜನಸಾಮಾನ್ಯರೂ ಕೂಡ ಆತಂಕಕ್ಕೆ ಈಡಾಗಿದ್ದು, ಈ ಕೊರೊನಾ ಸಹವಾಸ ಸಾಕಪ್ಪ ಸಾಕು ಎನ್ನುತ್ತಿದ್ದಾರೆ.
ಈ ಮಧ್ಯೆ ನಗರದ ಹೃದಯ ಭಾಗದಲ್ಲಿರುವ ಬಸವನಹಳ್ಳಿ ಬಾಲಕಿಯರ ಪ್ರೌಢ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಗೂ ಕೊರೊನಾ ಪಾಸಿಟಿವ್ ಬಂದಿರುವುದರಿಂದ ವಿದ್ಯಾರ್ಥಿಗಳು ಕೂಡ ಆತಂಕಕ್ಕೆ ಒಳಗಾಗಿದ್ದಾರೆ.
ಇನ್ನು ವಿದ್ಯಾರ್ಥಿನಿಗೆ ಕೊರೊನಾ ಬಂದ ಹಿನ್ನೆಲೆ ಇಡೀ ಶಾಲೆಗೆ ಸ್ಯಾನಿಟೈಸ್ ಮಾಡಲಾಗಿದೆ. ಇದೇ ಶಾಲೆಯ ಆವರಣದಲ್ಲಿ ಬಾಲಕಿಯರ ಪದವಿ ಪೂರ್ವ ಕಾಲೇಜು ಕೂಡ ಇದ್ದು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರಿಗೂ ಕೊರೊನಾ ಟೆಸ್ಟ್ ಅನ್ನು ಕಾಲೇಜು ಆಡಳಿತ ಮಾಡಿಸಿದೆ. ಶಾಲಾ-ಕಾಲೇಜು ಸೇರಿ 500 ಕ್ಕೂ ಅಧಿಕ ವಿದ್ಯಾರ್ಥಿನಿಯರಿದ್ದು ಬುಧವಾರ 400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದೆ. ಬುಧವಾರ ಶಾಲಾ-ಕಾಲೇಜಿಗೆ ಗೈರಾಗಿದ್ದ ವಿದ್ಯಾರ್ಥಿಗಳಿಗೆ ಗುರುವಾರ ಕೊರೊನಾ ಪರೀಕ್ಷೆ ನಡೆಸಲಾಗುವುದು ಎಂದು ಶಾಲೆ ಆಡಳಿತ ಮಂಡಳಿ ತಿಳಿಸಿದೆ.