ರಿಪ್ಪನ್ಪೇಟೆ : ಕೃಷಿ ಕೂಲಿ ಯಾಳುಗಳ ಸಮಸ್ಯೆಯನ್ನು ಎದುರಿಸುತ್ತಿರುವ ಇಂದಿನ ಕಾಲದಲ್ಲಿ ಭತ್ತ ನಾಟಿ ಯಂತ್ರ, ಭತ್ತ ಬೆಳೆಯುವ ರೈತರಿಗೆ ವರದಾನವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕೃಷಿ ಯಂತ್ರಧಾರೆಯ ಸಿ ಎಚ್ ಎಸ್ ಸಿ ವಿಭಾಗೀಯ ಯೋಜನಾಧಿಕಾರಿ ಶಶಿಕಿರಣ್ ರವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸನಗರ ತಾಲ್ಲೂಕು ಇವರ ಆಶ್ರಯದಲ್ಲಿ ತಾಲ್ಲೂಕಿನ ಕೋಮಲಾಪುರ ಗ್ರಾಮದ ಬೂದಪ್ಪನಾಯ್ಕರ ಭತ್ತದ ಗದ್ದೆಯಲ್ಲಿ ಯಾಂತ್ರಿಕೃತ ಭತ್ತ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾಡಿದ ಅವರು, ಇಂದು ಕೃಷಿ ಕೂಲಿಯಾಳುಗಳ ಕೊರತೆಯಿಂದ ಎಲ್ಲೆಡೆ ಭತ್ತದ ಗದ್ದೆಗಳು ಕಡಿಮೆಯಾಗುತ್ತಿದೆ. ಅದರ ಬದಲು ವಾಣಿಜ್ಯ ಬೆಳೆಗಳತ್ತ ರೈತರು ಮನಸ್ಸು ಮಾಡುತ್ತಿದ್ದಾರೆ. ಆದರೆ ಭತ್ತವು ಪ್ರಮುಖವಾದ ಆಹಾರದ ಬೆಳೆಯಾದ್ದರಿಂದ ಭತ್ತ ಕೃಷಿಯನ್ನು ಉಳಿಸುವ ಅಗತ್ಯವಿದೆ. ಯಂತ್ರ ನಾಟಿಯಿಂದ ಭತ್ತದ ಇಳುವರಿ ಹೆಚ್ಚಾಗುತ್ತದೆ. ಭತ್ತದ ಹುಲ್ಲು ಕೂಡ ಹೆಚ್ಚು ಸಿಗುತ್ತದೆ.
ಕೂಲಿಯಾಳು ಸಮಸ್ಯೆಗೂ ಪರಿಹಾರ ಸಿಗುತ್ತದೆ. ಕಡಿಮೆ ಶ್ರಮದಲ್ಲಿ ಕಡಿಮೆ ಖರ್ಚಿನಲ್ಲಿ ಯಂತ್ರ ನಾಟಿಯಿಂದ ಭತ್ತ ಬೆಳೆದು ಅಧಿಕ ಇಳುವರಿ ಪಡೆಯಲು ಸಾಧ್ಯವಿದೆ. ಇದಕ್ಕೆ ಪೂರಕವಾಗಿ ರೈತರಿಗೆ ಸಕಾಲದಲ್ಲಿ ಯಂತ್ರಗಳು ಸಿಗುವಂತೆ ಮಾಡುವ ನಿಟ್ಟಿನಲ್ಲಿ ರಾಜ್ಯದ 161ಹೋಬಳಿ ಕೇಂದ್ರಗಳಲ್ಲಿ ಕೃಷಿ ಯಂತ್ರಧಾರೆ ಕೇಂದ್ರವನ್ನು ತೆರೆದು, ಕೃಷಿಗೆ ಬೇಕಾದ ನಾನಾ ವಿಧದ ಯಂತ್ರಗಳನ್ನು ರೈತರಿಗೆ ಕಡಿಮೆ ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ. ರೈತರು ಇದರ ಪ್ರಯೋಜನವನ್ನು ಪಡೆದು ಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಶರಣಪ್ಪ, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಅಧಿಕಾರಿ ಶಶಿಧರ್, ಒಕ್ಕೂಟದ ಅಧ್ಯಕ್ಷ ರಾಮು, ಪ್ರಗತಿಪರ ಕೃಷಿಕ ಬೂದಪ್ಪನಾಯ್ಕ, ಸೇವಾಪ್ರತಿನಿಧಿ ಅಶ್ವಿನಿ, ಸಂಘದ ಸದಸ್ಯರು, ರೈತ ಭಾಂದವರು ಉಪಸ್ಥಿತರಿದ್ದರು.