ಕೋಮು ಸಾಮರಸ್ಯ ಕೆರಳಿಸುವ ಯತ್ನ ಆರೋಪ ; ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಸೇರಿ ನಾಲ್ವರಿಗೆ ಸಮನ್ಸ್ ಜಾರಿ !

0
436

ಶೃಂಗೇರಿ: ಪಟ್ಟಣದಲ್ಲಿ ಶಂಕರಾಚಾರ್ಯ ಮೂರ್ತಿ ಮೇಲೆ ಅನ್ಯಧರ್ಮದವರ ಕಾರ್ಯಕ್ರಮವೊಂದರ ಪ್ಲೆಕ್ಸ್ ಹಾಕಿದ್ದ ಪ್ರಕರಣದಲ್ಲಿ ತನ್ನ ಮೇಲೆ ಸುಳ್ಳು ಆರೋಪ ಮಾಡಿ ತೇಜೋವಧೆ ಮಾಡಲಾಗಿದೆ, ಸಮಾಜದಲ್ಲಿ ತಪ್ಪು ಕಲ್ಪನೆ ಮೂಡುವಂತೆ ಮಾಡಲಾಗಿದೆ, ಕೋಮು ಸಾಮರಸ್ಯ ಕೆರಳಿಸುವಂತೆ ಮಾಡಲಾಗಿದೆ ಎಂಬ ಖಾಸಗಿ ದೂರಿನ ಮೇರೆಗೆ ಶೃಂಗೇರಿ ನ್ಯಾಯಾಲಯದಲ್ಲಿ ಮುಖ್ಯಮಂತ್ರಿ ಯವರ ರಾಜಕೀಯ ಕಾರ್ಯದರ್ಶಿ ಜೀವರಾಜ್ ಸೇರಿದಂತೆ ನಾಲ್ವರ ಮೇಲೆ ಪ್ರಕರಣ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ನೋಟಿಸ್ ನೀಡಿದೆ.

2020ರ ಆಗಸ್ಟ್ 13ರಂದು ಶೃಂಗೇರಿ ಪಟ್ಟಣದಲ್ಲಿರುವ ಶಂಕರಾಚಾರ್ಯ ಅವರ ಪ್ರತಿಮೆ ಮೇಲೆ ಅನ್ಯಧರ್ಮದವರ ಕಾರ್ಯಕ್ರಮವೊಂದರ ಹಸಿರು ಬಣ್ಣದ ಪ್ಲೆಕ್ಸ್ ಅನ್ನು ಹಾಕಲಾಗಿದ್ದು, ಈ ಪ್ರಕರಣ ಜಿಲ್ಲೆಯಲ್ಲಿ ಭಾರೀ ಸದ್ದು ಮಾಡಿತ್ತು. ಮಾಜಿ ಸಚಿವ ಜೀವರಾಜ್ ನೇತೃತ್ವದಲ್ಲಿ ಸಂಘಪರಿವಾರದವರು ಪಟ್ಟಣದ ಪೊಲೀಸ್ ಠಾಣೆ ಹಾಗೂ ಶಂಕರಾಚಾರ್ಯ ಅವರ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ ಅನ್ಯಧರ್ಮದವರ ಬಾವುಟ ಹಾಕಿ ಪ್ರತಿಮೆಯನ್ನು ಅಪವಿತ್ರ ಮಾಡಲಾಗಿದೆ ಎಂದು ಆರೋಪಿಸಿದ್ದರು. ಪೊಲೀಸರ ತನಿಖೆ ಬಳಿಕ ಮಾನಸಿಕ ಅಸ್ವಸ್ಥನೊಬ್ಬ ಈ ಪ್ಲೆಕ್ಸ್ ಹಾಕಿರುವುದು ಪತ್ತೆಯಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದರಿಂದ ಪ್ರತಿಭಟನಾಕಾರರ ಆರೋಪ ಸುಳ್ಳು ಎಂದು ಸಾಭೀತಾಗಿತ್ತು.

ಈ ಪ್ರಕರಣ ಸಂಬಂಧ ಪ್ರತಿಭಟನೆ ನಡೆಸಿದ್ದ ಜೀವರಾಜ್ ಹಾಗೂ ಬಿಜೆಪಿ ಮುಖಂಡರಾದ ಹರೀಶ್ ಶೆಟ್ಟಿ, ವೇಣುಗೋಪಾಲ್ ಹಾಗೂ ಶ್ರೀರಾಮಸೇನೆಯ ಅರ್ಜುನ್ ಎಂಬವರು ತನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡಿ ತೇಜೋವಧೆ ಮಾಡಿದ್ದಲ್ಲದೇ ಕೋಮುಸಾಮರಸ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿ ಪಟ್ಟಣದ ನಿವಾಸಿ ಹುಸೇನ್ ಎಂಬವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಸುಹೈಲ್ ರವರ ದೂರಿನ ಮೇರೆಗೆ ಸೆಕ್ಷನ್ 153, 153ಎ, 182, 211, 295ಎ ಮತ್ತು ಸೆಕ್ಷನ್ 34ರಂತೆ ಸಿಸಿ ಸಂಖ್ಯೆ 284/22ನಂತೆ ಶೃಂಗೇರಿ ನ್ಯಾಯಾಲಯದಲ್ಲಿ 2022, ಜೂ.16ರಂದು ಎ1 ಆರೋಪಿಯಾಗಿ ಅರ್ಜುನ್, ಎ2 ಜೀವರಾಜ್, ಎ3 ಹರೀಶ್ ಶೆಟ್ಟಿ, ಎ4 ವೇಣುಗೋಪಾಲ್ ಮೇಲೆ ಪ್ರಕರಣ ದಾಖಲಾಗಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ, ತನಿಖಾ ಅಧಿಕಾರಿಗಳಿಗೆ ತಪ್ಪು ಮಾಹಿತಿ, ಗಲಭೆಗೆ ಪ್ರಚೋದನೆ ನೀಡಿರುವ ಸೆಕ್ಷನ್ ಅಡಿಯಲ್ಲಿ ತಾಲೂಕು ನ್ಯಾಯಾಲಯ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿ ಆದೇಶಿಸಿದೆ.

ಜಾಹಿರಾತು

LEAVE A REPLY

Please enter your comment!
Please enter your name here