ಕೋವಿಡ್ ನಿಯಂತ್ರಣಕ್ಕೆ ಗ್ರಾಮೀಣ‌ ಕಾರ್ಯಪಡೆ ರಚಿಸಲಾಗುವುದು: ಸಚಿವ ಕೆ.ಎಸ್ ಈಶ್ವರಪ್ಪ

0
302

ಶಿವಮೊಗ್ಗ : ಕೋವಿಡ್ ನಿಯಂತ್ರಣಕ್ಕೆ ಗ್ರಾಮೀಣ‌ ಕಾರ್ಯಪಡೆ ರಚಿಸಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಹೆಚ್ಚುತ್ತಿರುವುದರಿಂದ ಮುಂಜಾಗೃತ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಕೋವಿಡ್ ಜನ ಜಾಗೃತಿಗಾಗಿ ಈ ತಕ್ಷಣದಿಂದಲೇ ಗ್ರಾಮ ಮಟ್ಟದಲ್ಲಿ ಮತ್ತು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಗ್ರಾಮೀಣ ಕಾರ್ಯಪಡೆ ಕೆಲಸ ಮಾಡಲಿದೆ ಎಂದರು.

ಕಾರ್ಯಪಡೆಯಲ್ಲಿ ಸುಮಾರು 8 ರಿಂದ 10 ಜನರು ಇರುತ್ತಾರೆ. ಗ್ರಾಮ ಮಟ್ಟದಲ್ಲೂ ಪಂಚಾಯ್ತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಕಾರ್ಯಪಡೆ ರಚಿಸಲಾಗಿದ್ದು, ಗ್ರಾಮಪಂಚಾಯ್ತಿ ಮಟ್ಟದಲ್ಲೂ ಕಾರ್ಯಪಡೆ ರಚಿಸಲಾಗಿದೆ. ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಶೀತ, ನೆಗಡಿ, ಜ್ವರ ಕಂಡು ಬಂದ ಜನರನ್ನು ಆಸ್ಪತ್ರೆಗೆ ದಾಖಲಿಸುವುದು ಈ ಕಾರ್ಯಪಡೆಯ ಕೆಲಸವಾಗಿದೆ. ಇದಕ್ಕೆ ತಗಲುವು ವೆಚ್ಚವನ್ನು ಗ್ರಾಮೀಣಾಭಿವೃದ್ದಿ ಇಲಾಖೆ ಮತ್ತು 15ನೇ ಹಣಕಾಸು ನಿಧಿಯಡಿ ಬಳಸಿಕೊಳ್ಳಲಾಗುವುದು ಎಂದರು.

ರಾಜ್ಯಾದಾದ್ಯಂತ ಈಗಾಗಲೆ ಪ್ರಧಾನ ಮಂತ್ರಿಗಳು ಘೋಷಣೆ ಮಾಡಿರುವ ಮಳೆ ನೀರು ಇಂಗಿಸುವ ಜಲಶಕ್ತಿ ಅಭಿಯಾನ ಆರಂಭವಾಗಿದ್ದು, ಈ ಅಭಿಯಾನದಡಿ ಕೆರೆಗಳ ಪುನಶ್ಚೇತನ, ಕಿರುಗಾಲುವೆ ಅಭಿವೃದ್ದಿ, ಕಲ್ಯಾಣಗಳ ಸ್ವಚ್ಛತೆ, ಸಣ್ಣ ರೈತರ ತೋಟ, ಹೊಲಗಳ ಬದು ನಿರ್ಮಾಣ, ಗೋಕಟ್ಟೆಗಳ ನಿರ್ಮಾಣದಂತೆ ಕೆಲಸಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾಗುವುದು. ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ವರ್ಷ ನಿಗದಿತ ಗುರಿ 13 ಕೋಟಿ ಮಾನವ ದಿನಗಳನ್ನು ಮುಗಿಸಿ ಹೆಚ್ಚುವರಿಯಾಗಿ 8 ಕೋಟಿ ಮಾನವ ದಿನಗಳನ್ನು ಬಳಸಿಕೊಳ್ಳಲಾಗಿದೆ. ಈ ವರ್ಷವೂ ಯಾವುದೇ ಗುರಿಯಿಲ್ಲದೆ ಉದ್ಯೋಗ ಖಾತ್ರಿ ಕೆಲಸಗಳನ್ನು ನಡೆಸಲಾಗುವುದು ಎಂದು ತಿಳಿಸಿದ ಸಚಿವ ಕೆ.ಎಸ್ ಈಶ್ವರಪ್ಪ ಅವರು, ಏ.19 ರಂದು ಶಿವಮೊಗ್ಗದ ಪಿಳ್ಳಂಗಿರಿಯ ಕೆರೆ ಪುನಶ್ಚೇತನ ಕಾಮಗಾರಿಯನ್ನು ಉದ್ಘಾಟಿಸುವ ಮೂಲಕ ಜಿಲ್ಲೆಯಲ್ಲಿ ಜಲಶಕ್ತಿಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here