ಕೋವಿಡ್-19 ನಿಯಂತ್ರಣ ಮತ್ತು ಮುಂಜಾಗ್ರತಾ ಸಭೆ

0
252

ಚಿಕ್ಕಮಗಳೂರು: ಕೋವಿಡ್-19 ರಿಂದ ಮೃತಪಟ್ಟವರಿಗೆ ಸರ್ಕಾರದಿಂದ ಸಿಗುವ ಪರಿಹಾರದ ಬಗ್ಗೆ ಜಿಲ್ಲಾಡಳಿತಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿಯನ್ನು ತುರ್ತಾಗಿ ನೀಡುವಂತೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪುರುಷೋತ್ತಮ್ ಎಂ.ಎಲ್ ಸೂಚಿಸಿದರು.

ಅವರು ಇಂದು ನಗರದ ನಗರಸಭೆಯಲ್ಲಿ ನಡೆದ ’ಕೋವಿಡ್ ನಿಯಂತ್ರಣ ಮತ್ತು ಮುಂಜಾಗೃತ’ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಮಲೆನಾಡಿನ ಗುಡ್ಡಗಾಡು ಪ್ರದೇಶಗಳಿಂದ ಕೂಡಿದ್ದು, ಜನಗಳಿಗೆ ವ್ಯಾಕ್ಸಿನ್ ಹಾಕುವ ಬಗ್ಗೆ ಆರೋಗ್ಯ ಇಲಾಖೆಯು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಆರೋಗ್ಯ ಅಧಿಕಾರಿಗಳಿಂದ ಪಡೆದು ಮಾತನಾಡಿದ ಅವರು ಶಾಲಾ, ಕಾಲೇಜುಗಳಲ್ಲಿ ಸರ್ಕಾರದ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಬಗ್ಗೆ ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಉಮೇಶ್ ಸಭೆಗೆ ಮಾಹಿತಿ ನೀಡಿ, ಕೋವಿಡ್-19 ರೋಗದ ನಿರ್ವಹಣೆಯಲ್ಲಿ ಇಲಾಖೆಯಿಂದ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ ಪ್ರಮಾಣವು 1,2% ಇದ್ದು, ಅದರಲ್ಲಿ ಸಾವಿನ ಪ್ರಮಾಣ 0.7% ಚೇತರಿಕೆ ಪ್ರಮಾಣವು 98.3% ಇರುತ್ತದೆ ಮತ್ತು ಹಾಲಿ 445 ಸಕ್ರಿಯ ಕೇಸುಗಳಿರುತ್ತವೆ, ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಪ್ರಮಾಣ ಮೊದಲ ಡೋಸ್‌ನಲ್ಲಿ 82% ರಷ್ಟು ಇದ್ದು ಎರಡನೇ ಡೋಸ್‌ನಲ್ಲಿ ಶೇ. 45% ರಷ್ಟು ಇರುತ್ತದೆ ಎಂದರು.

ಕೋವಿಡ್ ಸಂಬಂಧ ಆರೋಗ್ಯ ಕಾರ್ಯಕರ್ತರಾಗಿ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿದ್ದವರುಗಳ ಅವಧಿಯು ಸಪ್ಟೆಂಬರ್ 2021ರ ಅಂತ್ಯಕ್ಕೆ ಮುಕ್ತಾಯವಾಗಲಿದ್ದು, ಈ ಕಾರ್ಯಕರ್ತರುಗಳ ಕೆಲಸದ ಅವಧಿಯನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿರುತ್ತೆವೆ ಎಂದು ಹೇಳಿದರು.

ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಡಿ.ವಿ ಮಲ್ಲೇಶಪ್ಪ ಮಾತನಾಡಿ, ಹಾಲಿ ಜಿಲ್ಲೆಯಲ್ಲಿ 6 ರಿಂದ 10 ನೇ ತರಗತಿಯವರೆಗೂ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಿದ್ದು, ಒಟ್ಟು 1250 ಶಾಲೆಗಳು ಪ್ರಾರಂಭವಾಗಿದ್ದು ಸುಮಾರು 84% ಪ್ರತಿಶತ ಮಕ್ಕಳು ಶಾಲೆಗೆ ಹಾಜರಾಗುತ್ತಿರುತ್ತಾರೆ.

ಸರ್ಕಾರವು ಹೊರಡಿಸಿರುವ ಕೋವಿಡ್ ಸುತ್ತೋಲೆ ಮಾರ್ಗಸೂಚಿಗಳಲ್ಲಿ ತಿಳಿಸಿರುವ ಆದೇಶಗಳನ್ನು ಪಾಲಿಸುತ್ತಿರುವುದಾಗಿ ತಿಳಿಸಿರುತ್ತಾರೆ, ಮಕ್ಕಳಿಗೆ ಮತ್ತು ಪೋಷಕರಿಗೆ ಕೋವಿಡ್-19 ಅರಿವು ಮೂಡಿಸುವ ಬಗ್ಗೆ ಜಿಲ್ಲೆಯಾದ್ಯಂತ ಜಾತಾ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಸಲಹೆ ನೀಡಿದರು.

ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ಮಾತನಾಡಿ, ಈವರೆಗೂ ಕೋವಿಡ್-19 ವಯಸ್ಸಿನವರಿಂದ ಮಕ್ಕಳಿಗೆ ಹರಡುತ್ತಿದ್ದು, 3ನೇ ಅಲೆಯಲ್ಲಿ ಮಕ್ಕಳಿಂದ ವಯಸ್ಸಿನವರಿಗೆ ಹರಡುವ ಲಕ್ಷಣಗಳನ್ನು ಹೊಂದಿದ್ದು ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಕರ್ನಾಟಕ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಕೋವಿಡ್ ಸೋಂಕಿನ ಪ್ರಮಣ ಶೇ.2%ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಾಲೆ ಮತ್ತು ಕಾಲೇಜುಗಳನ್ನು ಪ್ರಾರಂಭಿಸಲು ಸುತ್ತೋಲೆ ಹೊರಡಿಸಿರುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲೋಕಯುಕ್ತ ವಿಭಾಗದ ಪೊಲೀಸ್ ನಿರೀಕ್ಷಕರುಗಳಾದ ಸಚಿನ್ ಕುಮಾರ್ ಮತ್ತು ಶ್ರೀಧರ್ ಹೆಚ್.ಪಿ, ಲೋಕಯುಕ್ತ ಪೊಲೀಸ್ ನಿರೀಕ್ಷಕ ಕೃಷ್ಣ ಸೇರಿದಂತೆ ಜಿಲ್ಲೆಯ ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here