ಹೊಸನಗರ : ಇಲ್ಲಿನ ಮಲೆನಾಡು ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಇಂದು ಕ್ಷಯಮುಕ್ತ ಕರ್ನಾಟಕ ಮಧ್ಯೆ ಥಟ್ ಅಂತ ಹೇಳಿ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಕೆ.ಆರ್ ಪ್ರಭಾಕರ್, ಹಿರಿಯ ಕ್ಷಯರೋಗ ಚಿಕಿತ್ಸೆ ಮೇಲ್ವಿಚಾರಕ ಚಂದ್ರಪ್ಪ, ಹಿರಿಯ ಆರೋಗ್ಯ ಸಹಾಯಕ ಎಸ್. ರಮೇಶ್ ಆಚಾರಿ, ಶಾಲಾ ಮುಖ್ಯಶಿಕ್ಷಕ ಎನ್. ಸುಧಾಕರ್, ಸಹ ಶಿಕ್ಷಕರಾದ ಧರ್ಮಪ್ಪ, ಚಂದ್ರು, ಶ್ರೀಮತಿ ರತ್ನ ನಾಯಕ್, ಹಿರಿಯ ಪತ್ರಕರ್ತ ಯು.ಎಸ್ ಸದಾನಂದ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
‘ಇದು ಸಮಯ ಕ್ಷಯರೋಗ ಕೊನೆಗಾಣಿಸಲು’ ಎಂಬ ಘೋಷಣೆಗಳೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿ ಕ್ಷಯರೋಗಿಗಳು ಕೆಮ್ಮುವಾಗ, ಸೀನುವಾಗ ಕರವಸ್ತ್ರ ಬಳಸಬೇಕೆಂದು, ರೋಗಿಯು ಕಫವನ್ನು ಮನಸ್ಸಿಗೆ ಬಂದ ಕಡೆ ಉಗುಳ ಬಾರದೆಂದು, ರೋಗದ ಬಗ್ಗೆ ಪರೀಕ್ಷೆ ಹಾಗೂ ಚಿಕಿತ್ಸೆ ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿದ್ದ ಇದರ ಸದುಪಯೋಗ ಪಡೆಯಬೇಕೆಂದು ಮಾಹಿತಿ ನೀಡಿದರು.
ಮಲೆನಾಡು ಪ್ರೌಢಶಾಲೆ ವಿದ್ಯಾರ್ಥಿಗಳಾದ ರಂಜಿತಾ ಹಾಗೂ ಪುನೀತ್ ತಂಡದವರು ಪ್ರಥಮ ಬಹುಮಾನ, ವೇದ ಯಶವಂತ ತಂಡದವರು ದ್ವಿತೀಯ ಬಹುಮಾನ ಹಾಗೂ ರಚನಾ ಹಾಗೂ ರಕ್ಷಿತಾ ತಂಡದವರು ತೃತೀಯ ಬಹುಮಾನ ಗಳಿಸಿದರು.
ಆರೋಗ್ಯ ರಕ್ಷಣೆ ಬಗ್ಗೆ ಉಪಯುಕ್ತ ಮಾಹಿತಿ ಹೊಂದಿದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.