ಚಿಕ್ಕಮಗಳೂರು : ಕಳೆದ ಆರು ತಿಂಗಳ ಮೊದಲೇ ಆಫರ್ ನೀಡಿ ಹಣ ಕಟ್ಟಿಸಿ ಕೊಂಡ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಈಗ ಸೀಟನ್ನು ಕೊಡದೆ ಕಟ್ಟಿದ ಹಣವನ್ನೂ ಕೊಡದೆ ಸತಾಯಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಆಲ್ದೂರಿನ ನಿವಾಸಿ ಚರಿತಾ ಎಂ ಗೌಡ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಔಟ್ ಆಫ್ ಔಟ್ ಅಂಕ ತೆಗೆದಿದ್ದಾಳೆ. ಈಕೆಗೆ ಕಳೆದ ಡಿಸೆಂಬರ್ನಲ್ಲಿ ಮೂಡಬಿದರೆಯ ಎಕ್ಸಲೆಂಟ್ ಪಿಯು ಕಾಲೇಜ್ ನವರು ಆಫರ್ ನೀಡಿ 90% ಬಂದರೆ 25 ಸಾವಿರ ಡಿಸ್ಕೌಂಟ್, 95% ಬಂದರೆ 50 ಸಾವಿರ ಡಿಸ್ಕೌಂಟ್, 99% ಬಂದರೆ 75 ಸಾವಿರ ಡಿಸ್ಕೌಂಟ್, 100% ಬಂದರೆ ಒಂದು ಲಕ್ಷ ಎಂದು ನಂಬಿಸಿ 50 ಸಾವಿರ ಮುಂಗಡ ಹಣ ನೀಡಿ ಅಡ್ಮಿಷನ್ ಮಾಡಿಸಿಕೊಂಡಿದ್ದಾರೆ.
ಈಗ 625 ಕ್ಕೆ 625 ಅಂಕ ಪಡೆದು ಮೂಡಬಿದರೆಯ ಎಕ್ಸಲೆಂಟ್ ಕಾಲೇಜಿಗೆ ಹೋದರೆ ಅಲ್ಲಿನ ಆಡಳಿತ ಮಂಡಳಿ ಸೀಟು-ಹಣ ಎರಡೂ ಇಲ್ಲ. ಸೀಟು ಬೇಕಾದ್ರೆ ಎರಡೂವರೆ ಲಕ್ಷ ರೂ. ನೀಡಿ, ನಿಮ್ಮ ಹಣ ವಾಪಸ್ ಬರೋದಿಲ್ಲ ಎಂದು ಹೇಳುತ್ತಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ.
ಎಸ್.ಎಸ್.ಎಲ್.ಸಿ.ಯಲ್ಲಿ ಔಟ್ ಆಫ್ ಔಟ್ ಅಂಕ ತೆಗೆದಿರುವವರು ನೀಟ್ ಪರೀಕ್ಷೆಯಲ್ಲಿ ಪಡೆಯುವ ರ್ಯಾಂಕ್ ಆಧಾರದ ಮೇಲೆ ಸ್ಕಾಲರ್ ಶಿಪ್ ಎಂದು ಕೊಡುತ್ತೇವೆ ಎಂದು ರಾಗ ಬದಲಿಸಿದ್ದಾರೆ ಎನ್ನಲಾಗಿದೆ.
ಕೇವಲ ಈಕೆಗೆ ಮಾತ್ರವಲ್ಲದೆ ಈಕೆಯ ಸುಮಾರು ಏಳೆಂಟು ಜನ ಸ್ನೇಹಿತರಿಗೂ ಇದೇ ರೀತಿ ಮೋಸ ಆಗಿದೆ ಎಂದು ಆರೋಪಿಸಿದ್ದಾರೆ.
ಕಾಲೇಜು ಆಡಳಿತ ಮಂಡಳಿಯ ನಡೆಗೆ ಪೋಷಕರು ಕಂಗಾಲಾಗಿ ಪೊಲೀಸರ ಮೊರೆ ಹೋಗಲು ನಿರ್ಧರಿಸಿದ್ದಾರೆ.
Related