23.2 C
Shimoga
Sunday, November 27, 2022

ಗಣಪತಿ ಕೆರೆ ವಿಸ್ತೀರ್ಣ ಏಕಾಏಕಿ 30 ಎಕರೆ ಆಗಿದ್ದು ಹೇಗೆ ? ಕೆರೆ ಜಾಗ ಬಿಟ್ಟು ಕೊಟ್ಟವರ ಹೆಸರು ಶಾಸಕರು ಬಹಿರಂಗಪಡಿಸಲಿ ; ಬೇಳೂರು ಒತ್ತಾಯ

ಸಾಗರ : 24 ಎಕರೆ ಇದ್ದ ಗಣಪತಿ ಕೆರೆ ವಿಸ್ತೀರ್ಣ ಏಕಾಏಕಿ 30 ಎಕರೆ ಆಗಿದ್ದು ಹೇಗೆ ? ಕೆರೆ ಜಾಗ ಬಿಟ್ಟು ಕೊಟ್ಟವರ ಹೆಸರನ್ನು ಶಾಸಕರು ಬಹಿರಂಗಪಡಿಸಬೇಕು. ಕೆರೆಯನ್ನು ಮರುಸರ್ವೇ ನಡೆಸಿ ಅಚ್ಚುಕಟ್ಟು ಗುರುತಿಸಬೇಕು ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದ್ದಾರೆ.

ಶನಿವಾರ ಕಾಂಗ್ರೇಸ್ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆರೆ ಒತ್ತುವರಿ ತೆರವು ಮಾಡಿ ಎಂದು ನೀಡಿರುವ ಪಟ್ಟಿಯಲ್ಲಿ ಶಾಸಕ ಹಾಲಪ್ಪ ಹರತಾಳು ಹೆಸರು ಇದೆ. ತಮ್ಮ ಜಾಗವನ್ನು ರಕ್ಷಣೆ ಮಾಡಿಕೊಳ್ಳಲು ಶಾಸಕರು ಕೆರೆ ಅಭಿವೃದ್ದಿ ನಾಟಕ ಮಾಡುತ್ತಿದ್ದಾರೆ. ಕೆರೆ ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಿಸಿ, ಪಕ್ಕದಲ್ಲಿಯೆ ತಮ್ಮ ಮನೆ ಮಾಡಿಕೊಂಡು ವಾಕಿಂಗ್ ಇನ್ನಿತರೆ ಚಟುವಟಿಕೆಗಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಸರ್ಕಾರದ ಹಣವನ್ನು ಶಾಸಕರು ತಂದು ಕೆರೆಗೆ ಸುರಿಯುತ್ತಿದ್ದಾರೆ ಎಂದು ದೂರಿದರು.


ರಾಜ್ಯ ಸರ್ಕಾರ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಂದ 100 ರೂ. ಪ್ರತಿತಿಂಗಳು ವಸೂಲಿ ಮಾಡಲು ಮುಂದಾಗಿರುವ ಕ್ರಮ ಖಂಡನೀಯ. ಸರ್ಕಾರ ದಿವಾಳಿಯಾಗಿ ಹೋಗಿರುವುದಕ್ಕೆ ಇದು ಸಾಕ್ಷಿಯಾಗಿದೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವವರು ಬಡ, ಕೂಲಿಕಾರ್ಮಿಕರ ಮಕ್ಕಳು. ಸರ್ಕಾರ ಶಾಲೆಯನ್ನು ಆಧುನಿಕವಾಗಿ ಸಜ್ಜುಗೊಳಿಸುವುದನ್ನು ಬಿಟ್ಟು ಮಕ್ಕಳಿಂದ ಹಣ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಸರ್ಕಾರದ ಬಳಿ ಹಣ ಇಲ್ಲದೆ ಇದ್ದರೆ ಹೇಳಲಿ. ಕಾಂಗ್ರೆಸ್ ಪಕ್ಷ ಸಾರ್ವಜನಿಕ ವಂತಿಕೆ ಎತ್ತಿ ಹಣ ಸಂಗ್ರಹಿಸಿ ಕೊಡುತ್ತದೆ ಎಂದರು.

ನಗರ, ನಿಟ್ಟೂರು, ತುಮರಿ, ಬ್ಯಾಕೋಡ್ ಇನ್ನಿತರೆ ಭಾಗಗಳಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡು ಎರಡು ವರ್ಷವಾಗಿದೆ. ಶಾಸಕರು ಈಗ ಔಷಧಿ ಪೊಟ್ಟಣ ಹಿಡಿದು ಬೆಳೆಗಾರರ ಎದುರು ಹೋಗುತ್ತಿದ್ದಾರೆ. ಎರಡು ವರ್ಷದಿಂದ ಶಾಸಕರು ಸಂಸದರು ಏನು ಮಾಡುತ್ತಿದ್ದರು. ಎಲೆಚುಕ್ಕಿ ರೋಗ ಬಂದಿರುವ ಎಲ್ಲ ಅಡಿಕೆ ತೋಟಗಳಿಗೆ ನಾನು ಭೇಟಿ ನೀಡಿದ್ದೇನೆ. ಬೆಳೆಗಾರರು ಫಸಲು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಶಾಸಕ ಹಾಲಪ್ಪ ಹರತಾಳು ನಾನು ಕೂಲಿಂಗ್ ಗ್ಲಾಸ್ ಹಾಕಿಕೊಂಡು ನೋಡಿದ್ದರಿಂದ ಹಾನಿ ಗೊತ್ತಾಗಲಿಲ್ಲ ಎಂದು ಟೀಕಿಸಿದ್ದು ನಿಜಕ್ಕೂ ಅವರ ಸಣ್ಣತನಕ್ಕೆ ಸಾಕ್ಷಿಯಾಗಿದೆ. ನಾನು ಕೂಲಿಂಗ್ ಗ್ಲಾಸ್ ಹಾಕಿಕೊಂಡು ನೋಡಿರಬಹುದು. ಆದರೆ ಶಾಸಕರ ರೀತಿ ರಾಜ್ಯದ ಎದುರು ಮಾನ ಹರಾಜು ಹಾಕಿಸಿಕೊಂಡವನಲ್ಲ ಎಂದು ತಿರುಗೇಟು ನೀಡಿದರು.

ಚುನಾವಣೆ ಸಂದರ್ಭದಲ್ಲಿ ನಾನು ಮುಳುಗಡೆ ನಾಯಕ ಎಂದು ಬಿಂಬಿಸಿಕೊಂಡು ಜನರಿಂದ ಹಾಲಪ್ಪ ಮತ ಪಡೆದಿದ್ದರು. ಹಾಲಪ್ಪ ಮಾತು ನಂಬಿ ಜನರು ಕಾಗೋಡು ತಿಮ್ಮಪ್ಪರಂತಹ ಶ್ರೇಷ್ಟ ನಾಯಕರನ್ನು ಬಿಟ್ಟು ಓಟು ಕೊಟ್ಟು ಗೆಲ್ಲಿಸಿದ್ದರು. ಅದರ ಪರಿಣಾಮ ಈಗ ಮುಳುಗಡೆ ಸಂತ್ರಸ್ತರನ್ನು ಬೀದಿಗೆ ತಳ್ಳುವ ಪ್ರಯತ್ನ ನಡೆಸಿದ್ದಾರೆ. ಯಡಿಯೂರಪ್ಪ ಅವರು ದೆಹಲಿಗೆ ಹೋಗಿದ್ದರಿಂದ ಸಂಸದರು, ಗೃಹಸಚಿವರು, ಶಾಸಕರು ಮನವಿ ಕೊಟ್ಟು ಬಂದಿದ್ದಾರೆಯೆ ವಿನಃ, ಮುಳುಗಡೆ ಸಂತ್ರಸ್ತರು, ರೈತರು, ಬಡವರ ಬಗ್ಗೆ ಶಾಸಕರಿಗೆ, ಸಂಸದರಿಗೆ ಕಾಳಜಿ ಇಲ್ಲ ಎಂದು ಹೇಳಿದರು.

ಸರ್ಕಾರ ತಕ್ಷಣ ಎಲೆಚುಕ್ಕಿ ರೋಗದಿಂದ ಹಾಳಾದ ತೋಟಗಳಿಗೆ ಹೆಚ್ಚಿನ ಪರಿಹಾರ ಕೊಡಬೇಕು. ಇಲ್ಲವೆ ತೋಟಗಳನ್ನು ದತ್ತು ತೆಗೆದುಕೊಂಡು ಸರ್ಕಾರವೇ ನಿರ್ವಹಿಸಿ ಫಸಲಿನಿಂದ ಬೆಳೆಗಾರರು ಗಳಿಸುತ್ತಿದ್ದ ಆದಾಯವನ್ನು ಅವರ ಖಾತೆಗೆ ಜಮೆ ಮಾಡಬೇಕು. ಹಸಿರುಮಕ್ಕಿ ಸೇತುವೆ ಕಾಮಗಾರಿ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆ ಮಾಡಿದ ಮೇಲೆ ನಾಲ್ಕೂವರೆ ವರ್ಷದ ನಂತರ ಶಾಸಕ ಹಾಲಪ್ಪ ತಾಂತ್ರಿಕ ಸಮಸ್ಯೆ ಎನ್ನುವ ಕಾರಣ ನೀಡಿದ್ದು ಅವರ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಶಾಸಕರ ಗಮನ ವಿನಾಯಕನ ಹುಂಡಿ ತುಂಬಿಸಿಕೊಳ್ಳುವುದರ ಮೇಲೆ ಇದೆಯೆ ವಿನಃ ಅಭಿವೃದ್ದಿಯತ್ತ ಚಿತ್ತ ಇಲ್ಲ ಎಂದರು.

ಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್.ಜಯಂತ್, ನಗರ ಬ್ಲಾಕ್ ಅಧ್ಯಕ್ಷ ಬಿ.ಆರ್.ಜಯಂತ್, ಪ್ರಧಾನ ಕಾರ್ಯದರ್ಶಿ ಮಹಾಬಲ ಕೌತಿ, ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಪ್ರಮುಖರಾದ ಅನ್ವರ್ ಭಾಷಾ, ಎಲ್.ಚಂದ್ರಪ್ಪ, ಯಶವಂತ ಪಣಿ, ಸೋಮಶೇಖರ ಲ್ಯಾವಿಗೆರೆ, ನಾರಾಯಣಪ್ಪ, ಗಣಾಧೀಶ್, ತಾರಾಮೂರ್ತಿ, ರಮೇಶ್ ಚಂದ್ರಗುತ್ತಿ ಇನ್ನಿತರರು ಹಾಜರಿದ್ದರು.

- Advertisement -

More articles

1 COMMENT

 1. ಎಲೆಚುಕ್ಕಿ ರೋಗಕ್ಕೆ AVAF -18 ಹಾಗೂ SOIL STAR ADVANCE ಸಾವಯುವ(Organic)ಲಿಕ್ವಿಡ್ ಬಳಕೆ ಮಾಡುವುದರ ಮೂಲಕ ಹತೋಟಿಗೆ ತರಬಹುದು.ನಗರ, ಹೊಸನಗರ,ಸಾಗರ,ತೀರ್ಥಹಳ್ಳಿ,ರಿಪನ್ಪೇಟೆ,ಗರ್ತಿಕೆರೆ,ಸೊರಬ,ಬನವಾಸಿ,ಶಿಕಾರಿಪುರ,ಶಿರಾಳಕೊಪ್ಪ,ಶಿವಮೊಗ್ಗ ಎಲ್ಲಾ ಪ್ರಮುಖ ಕೃಷಿ ಗೊಬ್ಬರದ ಅಂಗಡಿಗಳಲ್ಲಿ ಲಭ್ಯವಿದೆ.

  https://organicagrosolutions.com/

  https://in.docworkspace.com/d/sIPbwvbOAAaPssJoG.

  http://www.madariorganics.com

  ಬಳಸುವ ಕ್ರಮದ ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ:
  ಮೋಬೈಲ್ :
  ವಿಜಯ್ -8722121456
  ಕಾಮನ ರಾಜಪ್ಪ -8618741845
  ಸುನೀತಾ – 8105348960

  MADARI ORGANATICS INNOVATIONS PVT LTD.
  #5378/10, Lali Hanumamma,
  Shamanur Rd,
  SS Layout, A Block,
  Davanagere
  KARNATAKA- 577 004

LEAVE A REPLY

Please enter your comment!
Please enter your name here

- Advertisement -

Latest article

error: Content is protected !!