ಗದ್ದಲ, ಗಲಾಟೆ, ಕೂಗಾಟ ಪ್ರತಿಭಟನೆಯ ನಡುವೆ ಶಿವಮೊಗ್ಗ ಮಹಾನಗರ ಪಾಲಿಕೆಯ 2021-22 ನೇ ಸಾಲಿನ ಬಜೆಟ್ ಮಂಡನೆ

0
373

ಶಿವಮೊಗ್ಗ : ಗದ್ದಲ, ಗಲಾಟೆ, ಕೂಗಾಟ ಪ್ರತಿಭಟನೆಯ ನಡುವೆ ಮಹಾನಗರ ಪಾಲಿಕೆಯ 2021-22 ನೇ ಸಾಲಿನ ಬಜೆಟ್ ಇಂದು ಮಂಡನೆಯಾಯಿತು.

ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳಿಗಾಗಿ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿರುವ ಅನಿತಾ ರವಿಶಂಕರ್ ಇಂದು ಪಾಲಿಕೆಯಲ್ಲಿ ಬಜೆಟ್ ಮಂಡಿಸುತ್ತಿರುವಾಗ ಪ್ರಾರಂಭದಲ್ಲಿಯೇ ವಿರೋಧ ಪಕ್ಷವಾದ ಕಾಂಗ್ರೆಸ್‌ನ ಸದಸ್ಯರು ಬಜೆಟ್ ಮಂಡನೆಗೆ ಅವಕಾಶ ಕೊಡದೆ ಘೋಷಣೆಗಳನ್ನು ಕೂಗುತ್ತಾ ಇದು ಸುಳ್ಳಿನ ಕಂತೆಯ ಬಜೆಟ್ ಇದೊಂದು ಕಾಗದದ ಹಾಳೆ ಕಳೆದ ಸಾರಿ ಮಂಡಿಸಿದ ಬಜೆಟ್‌ನ ಹಣವೇ ನ್ಯೂನತೆಯಿಂದ ಕೂಡಿದೆ. ಅದು ಈ ಬಾರಿಯ ಬಜೆಟ್ ಕೂಡ ಮುಂದುವರೆದಿದೆ. ಹಾಗಾಗಿ ಬಜೆಟ್ ಮಂಡಿಸಲು ಬಿಡುವುದಿಲ್ಲ ಎಂದು ಬಾವಿಗಿಳಿದು ಪ್ರತಿಭಟನೆ ಮಾಡಿದರು.

ಈ ಪ್ರತಿಭಟನೆಯಲ್ಲಿ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಹೆಚ್.ಸಿ. ಯೋಗೀಶ್, ನಾಗರಾಜ್ ಕಂಕಾರಿ, ರಮೇಶ್ ಹೆಗ್ಡೆ, ಮಂಜುಳಾ ಶಿವಣ್ಣ, ರೇಖಾ ರಂಗನಾಥ್, ಸೇರಿದಂತೆ ಹಲವರಿದ್ದರು.

ಪ್ರತಿಭಟನೆ ಕೂಗಾಟ ಮತ್ತು ಗದ್ದಲದ ನಡುವೆಯೆ ಅನಿತಾ ರವಿಶಂಕರ್ ಬಜೆಟ್ ಮುಖ್ಯಾಂಶಗಳನ್ನು ಓದಲು ಆರಂಭಿಸಿದರು. ಆಗಲೂ ಕೂಡ ಕಾಂಗ್ರೆಸ್ ಸದಸ್ಯರು ಅವಕಾಶ ಕೊಡಲಿಲ್ಲ. 2019-20 ಮತ್ತು 2020-21 ರ ಬಜೆಟ್‌ನ ನ್ಯೂನತೆಗಳ ಕರಪತ್ರ ಪ್ರದರ್ಶಿಸಿ ಬಜೆಟ್ ಮಂಡನೆಗೆ ಅಡ್ಡಿಪಡಿಸಿದರು.

ಪಾಲಿಕೆಯ ವ್ಯಾಪ್ತಿಗಳ ಕೆರೆಗಳ ಕಾಯಕಲ್ಪಕ್ಕೆ 1 ಕೋಟಿ ಎಂದು ಸುಳ್ಳು ಹೇಳಲಾಗಿದೆ. ಸ್ತ್ರೀ ಸಬಲೀಕರಣಕ್ಕೆ 10 ಸಾವಿರ, ರಸ್ತೆಗಳ ಸೌಂದರ್ಯಕ್ಕೆ 50 ಲಕ್ಷ, ಜನಪ್ರತಿನಿಧಿಗಳ ಸಮಾಲೋಚನೆ ಕೊಠಡಿಗೆ 50 ಲಕ್ಷ, ಮೀನು ಮತ್ತು ಮಾಂಸ ಮಾರುಕಟ್ಟೆಗೆ 50 ಲಕ್ಷ, ಕಸಾಯಿ ಖಾನೆಗೆ 25 ಲಕ್ಷ ಎಂದು ಹೇಳಲಾಗುತ್ತಿದೆ. ಆದರೆ ಇದೆಲ್ಲವೂ ಸುಳ್ಳು ಎಂದರು.

2019-20 ರಲ್ಲಿಯೂ ಕೂಡ ಇದೇ ನ್ಯೂನತೆಗಳಿದ್ದವು. ಗೋವು ಸಂರಕ್ಷಣೆ ಯೋಜನೆಗೆ 50 ಲಕ್ಷ ಎಂದು ಘೋಷಿಸಲಾಗಿತ್ತು. ಆದರೆ ಸಂರಕ್ಷಣೆ ಎಲ್ಲಿದೆ. ಸಿದ್ಧಗಂಗಾ ಶ್ರೀ ವಿದ್ಯಾ ಸರಸ್ವತಿ ಯೋಜನೆಗೆ 40 ಲಕ್ಷ ನಿಗದಿ ಮಾಡಲಾಗಿತ್ತು. ಆದರೆ ಎಲ್ಲಿದೆ ಇದು ಶ್ರೀಗಳಿಗೆ ಮಾಡಿದ ಅವಮಾನ. ಲವ-ಕುಶ ಮಕ್ಕಳ ಕಲ್ಯಾಣ ಯೋಜನೆ 10 ಲಕ್ಷ ಕೂಡ ನೆನೆಗುದುಗೆ ಬಿದ್ದು, ಶ್ರೀ ರಾಮನ ಮಕ್ಕಳನ್ನು ಅವಮಾನಿಸಲಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಆರೋಪ ಮಾಡಿದರು.

ಈ ಆರೋಪಗಳ ನಡುವೆಯೇ ಅನಿತಾ ಶಂಕರ್ ಅವರು 281.14 ಲಕ್ಷ ರೂ.ಗಳ ಉಳಿತಾಯ ಬಜೆಟ್‌ನ್ನು ಮಂಡನೆ ಮಾಡಿದರು. ಇದರ ಪ್ರಕಾರ 2021-22 ನೇ ಸಾಲಿನಲ್ಲಿ ನಗದು 11352.08 ಲಕ್ಷ ಇದ್ದು, ರಾಜಸ್ವ ಆದಾಯ 11227.91 ಲಕ್ಷ ಆಗಿದೆ. ಬಂಡವಾಳ ಆದಾಯ 4386.78 ಆಗಿದೆ. ಅಸಾಧಾರಣ ಆದಾಯ 1882.37 ಆಗಿದೆ. ಒಟ್ಟು 28849.14 ಲಕ್ಷ ಜಮೆ ಆಗಿದೆ. ಇದರಲ್ಲಿ ರಾಜಸ್ವ ವೆಚ್ಚ 9937.62 ಲಕ್ಷ. ಬಂಡವಾಳ ವೆಚ್ಚ 16118.00 ಲಕ್ಷ, ಅಸಾಧಾರಣ ವೆಚ್ಚ 2511.37 ಲಕ್ಷ ಒಟ್ಟು 28567.99 ಲಕ್ಷ ಆಗಿದ್ದು, 281.14 ಉಳಿತಾಯ ಬಜೆಟ್ ಆಗಿದೆ.

ಬಜೆಟ್‌ನ ಪ್ರಮುಖ ಅಂಶಗಳು:

ಡಿ ಗ್ರೂಪ್ ನೌಕರರ ವಸತಿ ಗೃಹಕ್ಕೆ 5 ಕೋಟಿ, ಶಾಸನ ಭವನಕ್ಕೆ 5 ಕೋಟಿ, ಕ್ರೀಡಾಂಗಣಕ್ಕೆ 1 ಕೋಟಿ, ಶೌಚಾಲಯ ನಿರ್ಮಾಣಕ್ಕೆ ಕೋಟಿ, 2 ಸುಮಾರು 27 ಪಾರ್ಕ್‌ಗಳ ಅಭಿವೃದ್ಧಿ, ಪಾಲಿಕೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ ಪಡಿಸಲು 1 ಕೋಟಿ, ಪೌರ ಕಾರ್ಮಿಕರ ಕಲ್ಯಾಣ ಯೋಜನೆ 30 ಲಕ್ಷ, ವಿಮಾ ಯೋಜನೆಗಾಗಿ 50 ಲಕ್ಷ, ಪ್ಲಾಸ್ಟಿಕ್ ಮುಕ್ತ ಶಿವಮೊಗ್ಗಕ್ಕೆ 10 ಲಕ್ಷ, ವಿಶ್ವ ಮಹಿಳಾ ದಿನಾಚರಣೆಯಂದು ಸಾಧನೆಗೈದ ಮಹಿಳೆಯರಿಗೆ ತಲಾ 10 ಸಾವಿರ ರೂ. ಗಳ ಪಾರಿತೋಷಕ, ಗೋವು ಸಂರಕ್ಷಣೆ ಯೋಜನೆ ಮುಂದುವರಿಕೆ, ಮೀನು ಮತ್ತು ಮಾಂಸದ ಮಾರುಕಟ್ಟೆಗೆ 50 ಲಕ್ಷ ನಿಗದಿಪಡಿಸಲಾಗಿದೆ. ಹಾಗೆಯೇ ಕ್ರೀಡಾಯೋಜನೆ, ಸ್ವಾಮಿ ವಿವೇಕಾನಂದ ಯುವ ಯೋಜನೆ, ಕೆಳದಿ ಚನ್ನಮ್ಮ ಮಹಿಳಾ ಯೋಜನೆ, ಸಾಂಸ್ಕೃತಿಕ ಸುರಕ್ಷಾ ಯೋಜನೆ, ಅಜಿತಶ್ರೀ ಸೇವಾ ಯೋಜನೆ, ಲವಕುಶ ಮಕ್ಕಳ ಯೋಜನೆ, ಪಂಡಿತ್ ದೀನದಯಾಳ್ ಹೃದಯ ಸ್ಪರ್ಶಿ ಯೋಜನೆ, ಡಾ.ಅಬ್ದುಲ್ ಕಲಾಂ ವಿಶಿಷ್ಟಚೇತನ ಕ್ಷೇಮಾಭಿವೃದ್ಧಿ ಇವೆಲ್ಲವನ್ನು ಮುಂದುವರೆಸಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here