ತರೀಕೆರೆ: ಭವಿಷ್ಯದ ದಿನಗಳನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಗುಣಮಟ್ಟದ ಯೋಜನೆಗಳ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ತಿಳಿಸಿದರು.
ಶುಕ್ರವಾರ ತಾಲ್ಲೂಕಿನ ಭದ್ರಾ ಜಲಾಶಯದ ಕೆಳಭಾಗದ ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದ ಜಮೀನುಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸರ್.ಎಂ.ವಿಶ್ವೇಶ್ವಯ್ಯ ಅವರ ಉತ್ತಮ ಯೋಜನೆಗಳಿಂದ ಭಾರತದ ದೇವಾಲಯಗಳೆಂದು ಕರೆಯಲ್ಪಡುವ ಜಲಾಶಯಗಳು ಇಂದಿಗೂ ಉತ್ತಮ ಗುಣಮಟ್ಟದಲ್ಲಿದ್ದು, ಕೃಷಿಗೆ ನೀರಾವರಿ ಸೌಲಭ್ಯ ಹಾಗೂ ವಿದ್ಯುತ್ ಒದಗಿಸುತ್ತಿವೆ ಆದ್ದರಿಂದ ಉತ್ತಮ ಯೋಜನೆಯನ್ನು ರೂಪಿಸಿಕೊಂಡು ಕಾಮಗಾರಿಗಳನ್ನು ಕೈಗೊಳ್ಳಿ.
ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದ ಜಮೀನುಗಳನ್ನು ಸರ್ವೆ ಮಾಡುವ ಮೂಲಕ ಗಡಿ ಗುರುತಿಸಿ ಮಾಹಿತಿ ನೀಡಬೇಕು ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಕಾಮಗಾರಿಗಳನ್ನು ಕೈಗೊಳ್ಳಬೇಕು. ಸಮಸ್ಯೆಗಳು ಬಂದಾಗ ಕೆಲಸ ಕೈಗೊಳ್ಳುವ ಬದಲಾಗಿ ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಜಮೀನುಗಳ ಸರ್ವೆ ನಡೆಸಿ ಗಡಿ ಗುರುತಿಸುವುದರಿಂದ ಸರ್ಕಾರವು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಸುಲಭವಾಗುತ್ತದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮೀನು ಸಾಗಣಿಕೆಯ ಪಾಂಡಗಳನ್ನು ವೀಕ್ಷಿಸಿ ಮೀನುಗಳ ಸಾಗಣಿಕೆಯಲ್ಲಿ ನೀರಿನ ಸೌಲಭ್ಯ, ಆಹಾರ ಪೂರೈಕೆಯಲ್ಲಿ ಉತ್ತಮ ಗುಣಮಟ್ಟವನ್ನು ಕಾಪಾಡಬೇಕು, ಇಲಾಖೆಯ ಸಿಬ್ಬಂದಿಗಳಿಗೆ ಹೇಳಿದರು.
ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದ ಜಮೀನಿನಲ್ಲಿ ಚಿತ್ರದುರ್ಗ ಹಾಗೂ ಹೊಸದುರ್ಗಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಕೈಗೊಂಡಿದ್ದು, ಈ ಯೋಜನೆಯೊಂದಿಗೆ ಜಿಲ್ಲೆಯ ತರೀಕೆರೆ, ಅಜ್ಜಂಪುರ ಹಾಗೂ ಕಡೂರು ತಾಲ್ಲೂಕಿಗೆ ಕುಡಿಯುವ ನೀರನ್ನು ಒದಗಿಸಲು ಶುದ್ಧ ನೀರಿನ ಘಟಕ ಸ್ಥಾಪನೆಗೆ ಜಲಾಶಯದ ಕೆಳಭಾಗದ ಈ ಸ್ಥಳವು ಸೂಕ್ತವಾಗಿದ್ದು, ಜಮೀನಿನ ಸರ್ವೆ ಮಾಡಿ ಮಾಹಿತಿ ನೀಡುವಂತೆ ಹೇಳಿದರೂ.
ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಕಾರ್ಯನಿರ್ವಹಿಸಬೇಕು. ಸರ್ಕಾರದಿಂದ ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದ ಸ್ಥಳವನ್ನು ಕುಡಿಯುವ ನೀರಿನ ಯೋಜನೆಗೆ ನೀಡಲು ಯಾವುದೇ ಸಮಸ್ಯೆಯಿಲ್ಲ. ಜಮೀನಿನ ಸರ್ವೆ ನಡೆಸಿ ಮಾಹಿತಿ ನೀಡಿದ್ದಲ್ಲಿ ಸ್ಥಳ ಗುರುತಿಸುವ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಪೂವಿತಾ ಮಾತನಾಡಿ, ಜಲಾಶಯದಿಂದ ವರ್ಷದಲ್ಲಿ ಒಂಭತ್ತು ತಿಂಗಳುಗಳ ಕಾಲ ಗ್ರಾವೀಟಿ ಮೂಲಕ ನೀರು ಬರುವುದರಿಂದ ಯಾವುದೇ ಪಂಪ್ ವ್ಯವಸ್ಥೆಗಳಿಲ್ಲದೆ ನೀರು ಸರಬರಾಜು ಮಾಡಬಹುದು ಇನ್ನೂ ಉಳಿದ ಮೂರು ತಿಂಗಳು ಪಂಪ್ಗಳ ಮೂಲಕ ನೀರನ್ನು ಸರಬರಾಜು ಮಾಡಬಹುದು ಆದ್ದರಿಂದ ಈ ಸ್ಥಳವು ಸೂಕ್ತವಾಗಿದೆ ಎಂದು ತಿಳಿಸಿದರು.
ತರೀಕೆರೆ, ಕಡೂರು ಹಾಗೂ ಅಜ್ಜಂಪುರ ತಾಲ್ಲೂಕಿಗೆ ಶುದ್ಧ ನೀರಿನ ಘಟಕ ಸ್ಥಾಪಿಸಿ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆಗೆ ಒಟ್ಟು 28 ಕಡೆಗಳಲ್ಲಿ ಗ್ರಾವೀಟಿ ಇರುವ ಸ್ಥಳಗಳನ್ನು ಆಯ್ಕೆ ಮಾಡಿದ್ದು, ಸೂಕ್ತ ಯೋಜನೆಗಳ ಮೂಲಕ ಕಾಮಗಾರಿ ಕೈಗೊಳ್ಳಲಾಗುವುದು, ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯಿಂದ ಕುಡಿಯುವ ನೀರಿನ ಯೋಜನೆಗೆ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್, ತಾಲ್ಲೂಕು ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್, ಕಂದಾಯ ಇಲಾಖೆ ಅಧಿಕಾರಿ ಸೋಮಶೇಖರ್, ಮೀನುಗಾರಿಕೆ ಇಲಾಖೆಯ ಸಹಾಯಕ ಗುರುಚನ್ನಬಸವಣ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ ಸೇರಿದಂತೆ ಮತ್ತಿತರರು ಹಾಜರಿದ್ದರು.