ಗುಣಮಟ್ಟದ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಬಟ್ಟೆಮಲ್ಲಪ್ಪದಿಂದ ಹೊಸನಗರದವರೆಗೆ ಗ್ರಾಮಸ್ಥರಿಂದ 20 ಕಿ.ಮೀ ಪಾದಯಾತ್ರೆ..!

0
793

ಹೊಸನಗರ : ಗುಣಮಟ್ಟದ ವಿದ್ಯುತ್ ನೀಡುವ ಮೂಲಕ ಮಲೆನಾಡಿನ ಜನರ ಸಂಕಷ್ಟ ಕರೆಸಬೇಕೆಂದು ಹರಿದ್ರಾವತಿ ಭಾಗದ ಗ್ರಾಮಸ್ಥರು ಹಾಗೂ ವಿದ್ಯುತ್ ಬಳಕೆದಾರರ ಹೋರಾಟ ಸಮಿತಿಯವರು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರು ಹಾಗೂ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರ ವಾಟಗೋಡು ಸುರೇಶ್ ನೇತೃತ್ವದಲ್ಲಿ 20 ಕಿ.ಮೀ. ದೂರದ ಬಟ್ಟೆಮಲ್ಲಪ್ಪದಿಂದ ಮಾರುತಿಪುರ, ಕಚ್ಚಿಗೆಬೈಲು ಬ್ರಹ್ಮೇಶ್ವರ, ಮಾವಿನಕೊಪ್ಪ ಸರ್ಕಲ್ ಮಾರ್ಗವಾಗಿ ತಾಲೂಕು ಕೇಂದ್ರ ಹೊಸನಗರದವರೆಗೆ ಪಾದಯಾತ್ರೆ ನಡೆಸಿ ತಮ್ಮ ಬೇಡಿಕೆಗಳಿಗಾಗಿ ಆಗ್ರಹಪಡಿಸಿದರು.

ಹೊಸನಗರ ತಾಲೂಕು ವಿದ್ಯುತ್ ಯೋಜನೆಗಳಿಗಾಗಿ ತನ್ನನ್ನು ತಾನೇ ಸಮರ್ಪಿಸಿಕೊಂಡು ಇಡಿ ರಾಜ್ಯಕ್ಕೆ ವಿದ್ಯುತ್ ನೀಡಿದರು ಸಹ ದೀಪದ ಬುಡ ಕತ್ತಲೆ ಎಂಬಂತೆ ಹೊಸನಗರ ತಾಲೂಕು ಸಮರ್ಪಕ ವಿದ್ಯುತ್ ಪಡೆಯುವಲ್ಲಿ ವಿಫಲವಾಗಿದೆ. ಇದಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯು ಪೂರಕವಾಗಿದ್ದು ತತಕ್ಷಣ ಸಮರ್ಪಕ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಒದಗಿಸಲು ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು.

ನಿರಂತರ ವಿದ್ಯುತ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ. ರೈತರು ಗುಣಮಟ್ಟದ ವಿದ್ಯುತ್ ಪಡೆಯಲು ವಿಫಲರಾಗಿ ಕಂಗಾಲಾಗಿದ್ದಾರೆ. ಸಣ್ಣ ಕೈಗಾರಿಕೆ ಹಾಗೂ ಗೃಹ ಉದ್ದಿಮೆದಾರರು ಗ್ರಾಮೀಣ ಹಾಗೂ ನಗರ ವಿದ್ಯುತ್ ಬಳಕೆದಾರರು ಗ್ರಾಮ ಪಂಚಾಯತಿಯ ನೀರು ಸರಬರಾಜು ಯೋಜನೆಗಳವರು, ವಿವಿಧ ಇಲಾಖೆ ಕಚೇರಿಯ ವಿದ್ಯುತ್ ಬಳಕೆದಾರರು ಗುಣಮಟ್ಟದ ವಿದ್ಯುತ್ ಪಡೆಯದ ಕಾರಣ ಲಕ್ಷಾಂತರ ರೂ. ಬೆಲೆಬಾಳುವ ವಿದ್ಯುತ್ ಉಪಕರಣಗಳ ನಷ್ಟ ಅನುಭವಿಸಿದ್ದಾರೆ. ಕೆಲವು ವಿದ್ಯುತ್ ಉಪಕರಣಗಳು ನಿಷ್ಕ್ರೀಯತೆ ಕಂಡುಕೊಂಡಿವೆ.

ವಿದ್ಯುತ್ ಉತ್ಪಾದನೆಯಿಂದ ತಾಲೂಕಿನ ಅನೇಕ ಗ್ರಾಮಗಳು ಶರಾವತಿ ಹಿನ್ನೀರಿನಿಂದ ಆಪೋಷನಗೊಂಡಿದ್ದು ತಮ್ಮ ಮನೆ ಭೂಮಿ ಕಳೆದುಕೊಂಡ ಆ ಭಾಗದ ಜನರು ಇನ್ನು ಪರಿಹಾರ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಎಲ್ಲ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯಲು ವಾಟಗೋಡು ಸುರೇಶ್ ಅವರು ಹರಿದ್ರಾವತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಲೀಲಾವತಿ, ಮಾರುತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್. ಬಿ ಚಿದಂಬರ, ಹರತಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲ್ಲಿ ಯೋಗೇಂದ್ರ ಸೇರಿದಂತೆ ನೂರಾರು ಗ್ರಾಮಸ್ಥರು ಪ್ರತಿಭಟನಾ ಪಾದಯಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಮೂಲಭೂತ ಬೇಡಿಕೆಗಳಿಗಾಗಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here