20.6 C
Shimoga
Friday, December 9, 2022

ಗುರುಕುಲ ಮಾದರಿ ಶಿಕ್ಷಣ ಅಗತ್ಯ ; ಶ್ರೀ ರಂಭಾಪುರಿ ಜಗದ್ಗುರುಗಳು

ಎನ್.ಆರ್ ಪುರ : ಜನಸಮುದಾಯದಲ್ಲಿ ಸಂಸ್ಕಾರ ಸದ್ವಿಚಾರಗಳ ಕೊರತೆಯಿಂದಾಗಿ ಅಶಾಂತಿ ಬದುಕು ನಿರ್ಮಾಣಗೊಳ್ಳುತ್ತಿದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಗುರುಕುಲ ಮಾದರಿಯ ಶಿಕ್ಷಣದ ಅಗತ್ಯವಿದೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.


ಅವರು ಹುಬ್ಬಳ್ಳಿಯ ವಿದ್ಯಾನಗರ ಲಕ್ಷ್ಮಿವನ ಪರಿಸರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಕಟ್ಟಡದ ಪುನಶ್ಚೇತನ ಪೂಜಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.


ಜೀವನ ಉನ್ನತಿಗೆ ಶಿಕ್ಷಣ ಅತ್ಯಗತ್ಯ. ಭೌತಿಕ ಶಿಕ್ಷಣದ ಜೊತೆಗೆ ಒಂದಿಷ್ಟಾದರೂ ಧಾರ್ಮಿಕ ಶಿಕ್ಷಣದ ಅರಿವು ಬೇಕಾಗುತ್ತದೆ. ಸುಖ ಶಾಂತಿ ಬದುಕಿಗೆ ಆಧ್ಯಾತ್ಮದ ಅರಿವು ಮುಖ್ಯ. ಈ ಭಾಗದ ವೀರಮಾಹೇಶ್ವರ ಜಂಗಮ ವಟುಗಳಿಗೆ ಸಂಸ್ಕೃತ, ಜೋತಿಷ್ಯ ಮತ್ತು ವೈದಿಕ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ. ಆದಷ್ಟು ಬೇಗ ಕಟ್ಟಡ ಕಾರ್ಯ ಪೂರ್ಣಗೊಳ್ಳಲು ಜನಪ್ರತಿನಿಧಿಗಳ ಮತ್ತು ಧರ್ಮಾಭಿಮಾನಿಗಳ ಸಹಕಾರದ ಅಗತ್ಯವಿದೆ ಎಂದರು.


ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಭಾರತ ದೇಶ ಧರ್ಮ ಸಂಸ್ಕೃತಿ ಮತ್ತು ಪರಂಪರೆಗೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದೆ. ಈ ನಾಡಿನ ಪೀಠ ಮತ್ತು ಮಠಗಳು ಭಾರತೀಯ ಸಂಸ್ಕೃತಿಯನ್ನು ಬೆಳೆಸುತ್ತಾ ಬಂದಿವೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರಸಿದ್ಧ ಪ್ರಾಚೀನ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಧರ್ಮ ಸಂಸ್ಕೃತಿ ಬೆಳೆಸಲು ಶ್ರಮಿಸುತ್ತಿದ್ದಾರೆ. ನಿರ್ಮಾಣಗೊಳ್ಳುತ್ತಿರುವ ಗುರುಕುಲ ಕಟ್ಟಡಕ್ಕೆ ಶಾಸಕರ ಅನುದಾನದಲ್ಲಿ ಹತ್ತು ಲಕ್ಷ ಮತ್ತು ಸರಕಾರದಿಂದ ವಿಶೇಷ ನೆರವು ದೊರಕಿಸಿ ಕೊಡಲಾಗುವುದೆಂದರು.


ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನ್ನೇನಕೊಪ್ಪ ಮಾತನಾಡಿ, ಆದರ್ಶ ಸಂಸ್ಕೃತಿಯ ಪುನರುತ್ಥಾನದ ಅವಶ್ಯಕತೆಯಿದೆ. ಈ ಭಾಗದ ವಿದ್ಯಾರ್ಥಿಗಳಿಗೆ ವೇದ, ಜೋತಿಷ್ಯ ಮತ್ತು ಸಂಸ್ಕೃತ ಜ್ಞಾನ ಪ್ರಾಪ್ತಿಗಾಗಿ ಗುರುಕುಲ ನಿರ್ಮಿಸುತ್ತಿರುವುದು ಸಂತೋಷದ ಸಂಗತಿ. ಕಟ್ಟಡ ಕಾರ್ಯ ತ್ವರಿತ ಗತಿಯಲ್ಲಿ ಜರುಗಿ ಈ ಭಾಗದ ವಿದ್ಯಾರ್ಥಿಗಳ ಬಾಳಿಗೆ ಬೆಳಕು ತೋರಲೆಂದರು. ಮಲ್ಲಿಕಾರ್ಜುನ ಸಾವಕಾರ, ಲಿಂಗರಾಜ ಪಾಟೀಲ, ಹೇಮರಡ್ಡಿ ಕೊಣ್ಣೂರು, ರಮೇಶ ಪಾಟೀಲ, ಮಹೇಶ ಬುರ್ಲಿ, ಇಂಧುಮತಿ ಮಾನ್ವಿ, ವಿಶ್ವನಾಥ ಹಿರೇಗೌಡರು ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಗುರುಕುಲ ನಿರ್ಮಾಣ ಕಾರ್ಯದಲ್ಲಿ ಮುಂದಾಳತ್ವ ವಹಿಸಿದ ಪ್ರಕಾಶ ಬೆಂಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಹದೇವಪ್ಪ ಕುಮಶಿ ಶ್ರೀ ಜಗದ್ಗುರುಗಳಿಗೆ ಗೌರವ ಸಮರ್ಪಿಸಿದರು.


ನಂತರ ರಂಭಾಪುರೀಶ್ವರ ಸಮುದಾಯ ಭವನದಲ್ಲಿದ್ದ ಶ್ರೀ ರಂಭಾಪುರಿ ಜಗದ್ಗುರುಗಳನ್ನು ಕೇಂದ್ರದ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಷಿ ಭೇಟಿ ಮಾಡಿ ಆಶೀರ್ವಾದ ಪಡೆದರು. ರಾಜಣ್ಣ ಕೊರವಿ, ಶಿವು ಮೆಣಸಿನಕಾಯಿ ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!