ಗೃಹ ಸಚಿವರ ತವರೂರಲ್ಲಿ ದಲಿತ ಮಹಿಳೆ ಮೇಲೆ ಗ್ಯಾಂಗ್ ರೇಪ್ ಯತ್ನ !

0
1577

ತೀರ್ಥಹಳ್ಳಿ : ಗೃಹ ಸಚಿವರ ತವರೂರು ಆರಗದಲ್ಲಿ ನಿರಂತರ ಕ್ರಿಮಿನಲ್‌ ಪ್ರಕರಣ ನಡೆಯುತ್ತಿದೆ.

ಗೃಹ ಸಚಿವರ ಸ್ವಕ್ಷೇತ್ರ ಆರಗದಲ್ಲಿ ಸೋಮವಾರ ರಾತ್ರಿ 10.30 ರ ಸಮಯದಲ್ಲಿ ದಲಿತ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಯತ್ನ ನಡೆದಿದೆ ಎನ್ನಲಾದ ಪ್ರಯತ್ನದ ಘಟನೆಯನ್ನು ಮುಚ್ಚಿ ಆರೋಪಿಗಳನ್ನು ರಕ್ಷಿಸುವ ಸಂಚು ತೀರ್ಥಹಳ್ಳಿಯಲ್ಲಿ ನಡೆಯುತ್ತಿದ್ದು ಅದನ್ನು ಯಾರು ಮಾಡುತ್ತಿದ್ದಾರೆ ? ಎಂಬುದೇ ಈಗ ಪ್ರಶ್ನೆಯಾಗಿದೆ.

ರಾಜ್ಯ ಗೃಹಸಚಿವರಾದ ಆರಗ ಜ್ಞಾನೇಂದ್ರ ವಾರದಲ್ಲಿ 4 ದಿನ ತೀರ್ಥಹಳ್ಳಿಯಲ್ಲೇ ಇರುತ್ತಾರೆ. ಆದರೂ ಸಹ ತೀರ್ಥಹಳ್ಳಿಯಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಅಮಾನವೀಯ. ಘಟನೆ ನಡೆದ ಮೇಲೂ ಸಹ ಅದನ್ನು ಮುಚ್ಚಿ ಹಾಕಲು ಗೃಹಸಚಿವರ ಆಪ್ತರೊಬ್ಬರು ಸಂಚು ರೂಪಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಘಟನೆ ?

ಮೇ 09 ರಂದು ಸಂಜೆ ಆರಗ ಗ್ರಾಮದ 26 ವರ್ಷದ ಮಹಿಳೆಯೊಬ್ಬರು ತಮ್ಮ ಪತಿಯ ಅನಾರೋಗ್ಯದ ಕಾರಣದಿಂದಾಗಿ ತೀರ್ಥಹಳ್ಳಿಯ ತಮ್ಮ ಪರಿಚಿತ ವೈದ್ಯರ ಬಳಿ ಹೋಗಿದ್ದು, ಆದರೆ ಅವರು ಸಿಗದ ಕಾರಣ ಹಳೆ ಔಷಧಿ ಚೀಟಿಯನ್ನು ತೋರಿಸಿ ಔಷಧಿಯನ್ನು ಖರೀದಿಸಿ ತನ್ನ ಗಂಡನೊಂದಿಗೆ ರಾತ್ರಿ 09:00 ಗಂಟೆಗೆ ಬಸ್ ನಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಮ್ಮ ಊರಿಗೆ ವಾಪಾಸ್ ಬಂದು ಬಸ್ ನಿಂದ ಇಳಿದು, ನಡೆದುಕೊಂಡು ಹೋಗುತ್ತಿದ್ದಾಗ ಊರಿನ ಹತ್ತಿರ ಏಕಾಏಕಿ ದೇವರಗುಡಿ ಗ್ರಾಮದ ನಿವಾಸಿಗಳಾದ ಸಂಪತ್, ಆದರ್ಶ ಮತ್ತು ಇತರೆ 02 ಜನ ಅಪರಿಚಿತರು ಬಂದು ಅಡ್ಡಗಟ್ಟಿ ಆಕೆಯ ಗಂಡನಿಗೆ ಹಲ್ಲೆ ಮಾಡಿ ಆತನು ಪ್ರಜ್ಞಾಹೀನರಾಗಿರುತ್ತಾನೆ. ನಂತರ ಮಹಿಳೆಯ ಕೈ ಹಿಡಿದು ಪಕ್ಕದ ರಬ್ಬರ್ ಪ್ಲಾಂಟೇಷನ್ ಗೆ ಎಳೆದುಕೊಂಡು ಹೋಗಿ ಮಹಿಳೆಯು ತೊಟ್ಟಿದ್ದ ಬಟ್ಟೆಗಳನ್ನು ಹರಿದು ವಿವಸ್ತ್ರ ಮಾಡಿದ್ದಾರೆ.

ಬಲಾತ್ಕಾರ ಮಾಡಲು ಪ್ರಯತ್ನಿಸಿದಾಗ ಮಹಿಳೆಯು ಜೋರಾಗಿ ಕೂಗಿಕೊಂಡ ಶಬ್ದಕ್ಕೆ ಆಕೆಯ ಪತಿಯು ಎಚ್ಚರಗೊಂಡು ಆತನು ಸಹ ಜೋರಾಗಿ ಕೂಗಿದಾಗ ಆರೋಪಿಗಳೆಲ್ಲರೂ ಆಕೆಗೆ ನಿನ್ನನ್ನು ಅತ್ಯಾಚಾರ ಮಾಡದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಅಲ್ಲಿಂದ ಓಡಿಹೋಗಿರತ್ತಾರೆಂದು ಸಂತ್ರಸ್ತೆ ಠಾಣೆಗೆ ನೀಡಿದ ದೂರಿನ ಮೇರೆಗೆ ಪೊಲೀಸರು ಕಲಂ 341, 323, 376, 354(A), 354(B), 506 ಸಹಿತ 34 ಐಪಿಸಿ ಹಾಗೂ ಕಲಂ 3 (1) (w) (i) (ii), 3 (2) (va) The SC & ST (POA) Act ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ಆರೋಗ್ಯ ಸರಿ ಇಲ್ಲದ ಕಾರಣ ಸೋಮವಾರ ಪತಿ ಜತೆ ಮಹಿಳೆ ತೀರ್ಥಹಳ್ಳಿ ಅಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯಿಂದ ಸಂಜೆ ಮನೆಗೆ ತೆರಳುತ್ತಿದ್ದ ಸಂದರ್ಭ ದಲಿತ ದಂಪತಿಗಳ ಮೇಲೆ ಬೈಕ್‌ ಹರಿಬಿಟ್ಟು ಅರೋಪಿಗಳು ದೌರ್ಜನ್ಯ ಎಸಗಿದ್ದಾರೆ.

ಕುಡಿತದ ಮತ್ತಿನಲ್ಲಿದ್ದ ನಾಲ್ವರು ಯುವಕರು 2 ಬೈಕ್‌ಗಳನ್ನು ಹರಿಬಿಟ್ಟ ಕಾರಣಕ್ಕೆ ಪತಿಯ ಕಾಲು, ತಲೆಗೆ ಏಟು ಬಿದ್ದು ಕೆಲ ಕಾಲ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಈ ಸಂದರ್ಭ ಆರೋಪಿಗಳು ಮಹಿಳೆಯ ಬಟ್ಟೆ ಹರಿದು ನಿರ್ವಸ್ತ್ರ ಮಾಡಿದ್ದಾರೆ. ಪ್ರಜ್ಞೆ ಹೀನಾಸ್ಥಿತಿಯಲ್ಲಿದ್ದ ಮಹಿಳೆಯ ಪತಿ ತಕ್ಷಣ ಎಚ್ಚರಗೊಂಡು ಕಿರುಚಿಕೊಂಡ ನಂತರ ಸ್ಥಳೀಯರು ಘಟನಾ ಸ್ಥಳಕ್ಕೆ ಓಡಿ ಬಂದಿದ್ದಾರೆ.

ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಾಗಿರುವ ದಂಪತಿಗಳು ಪೊಲೀಸ್‌ ಅಧಿಕಾರಿಗಳಿಗೆ ದೂರು ನೀಡಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊನೆಗೂ ಎಫ್‌ಐಆರ್‌ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here