ಗೃಹ ಸಚಿವರ ಸ್ವಕ್ಷೇತ್ರದಲ್ಲಿ ಹೆಚ್ಚುತ್ತಿವೆ ಅಪರಾಧ ಪ್ರಕರಣಗಳು ; ಟಿಲ್ಲರ್’ನಲ್ಲಿ ಹೋಗುತ್ತಿದ್ದ ರೈತರ ಮೇಲೆ ಹಲ್ಲೆ ನಡೆಸಿ ಹಣ, ಚಿನ್ನದ ಸರ ದೋಚಿದ ಖದೀಮರು !!

0
1194

ರಿಪ್ಪನ್‌ಪೇಟೆ: ಗೃಹ ಸಚಿವ ಆರಗ ಜ್ಞಾನೇಂದ್ರ ರವರ ಸ್ವಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ಪವರ್ ಟಿಲ್ಲರ್ ನಲ್ಲಿ ಹೋಗುತ್ತಿರುವವರ ಮೇಲೆ ಹಲ್ಲೆ ನಡೆಸಿ ಹಣ, ಚಿನ್ನದ ಸರ ದರೋಡೆ ಮಾಡಿರುವ ಘಟನೆ ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯ ಗರ್ತಿಕೆರೆಯಲ್ಲಿ ನಡೆದಿದೆ.

ಘಟನಾ ವಿವರ:

ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು ಗ್ರಾಮದ ರಾಜಕುಮಾರ ಕೆ.ಹೆಚ್ ಎಂಬುವರು ನೀಡಿದ ದೂರಿನ ಸಾರಾಂಶ ಹೀಗಿದೆ. ಜು.01 ರಂದು ತಮ್ಮ ಅಣ್ಣನ ಮಗ ಪವನ್ ರವರೊಂದಿಗೆ ಬಿಲ್ಲೇಶ್ವರದಲ್ಲಿರುವ ತಮ್ಮ ಜಮೀನಿಗೆ ಬೆಳಗ್ಗೆ, 9-30ಕ್ಕೆ ಹೋಗಿ ತೋಟಕ್ಕೆ ಔಷಧಿ ಹೊಡೆದು ಕೆಲಸದ ಆಳುಗಳಿಗೆ 5 ಸಾವಿರ ರೂಪಾಯಿ ಕೊಟ್ಟು 20,000 ರೂ.ಗಳನ್ನು ಜೇಬಿನಲ್ಲಿ ಇಟ್ಟುಕೊಂಡು ಇವರ ಟಿಲ್ಲರ್ ಅನ್ನು ವೆಲ್ಡಿಂಗ್ ಮಾಡಲು ಸಂಜೆ ಕೆಲಸ ಮುಗಿಸಿ ಗರ್ತಿಕೆರೆಗೆ ತೆಗೆದುಕೊಂಡು ವೆಲ್ಡಿಂಗ್ ಮಾಡಿಸಿಕೊಂಡು 1500 ರೂ. ಗಳನ್ನು ರಿಪೇರಿಗೆ ಕೊಟ್ಟು ಉಳಿದ 18,500 ರೂ ಹಣವನ್ನು ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡು ರಾತ್ರಿ 9-30ಕ್ಕೆ ಗರ್ತಿಕೆರೆಯಿಂದ ಶಾಂತಪುರ ರಸ್ತೆಯಲ್ಲಿ ಮನೆಗೆ ಹೊರಟಿದ್ದು ಸ್ವಲ್ಪ ದೂರ ಸುಮಾರು 15 ನಿಮಿಷ ಟಿಲ್ಲರ್ ಅನ್ನು ಪವನ್ ಈತನು ಚಲಾಯಿಸುತ್ತಿದ್ದು ಹಿಂಬದಿಯಲ್ಲಿ ರಾಜಕುಮಾರ ಕುಳಿತುಕೊಂಡು ಹೋಗುತ್ತಿದ್ದಾಗ ಒಂದು ಬೈಕ್‌ ನಲ್ಲಿ ಮೂರು ಜನ ಅಪರಿಚಿತರು ಇವರು ಹೋಗುತ್ತಿದ್ದ ಟಿಲ್ಲರ್ ಅನ್ನು ಟಾರ್ ರಸ್ತೆಯಲ್ಲಿ, ಮುಂದೆ ಹೋಗದಂತೆ ಅಡ್ಡಗಟ್ಟಿ ಎರಡು ಜನ ಬಂದು ರಾಜಕುಮಾರನ ಹತ್ತಿರ ಜೇಬಿನಲ್ಲಿ ಏನಿದೆ? ಅಂತ ಕೇಳಿದ್ದು ರಾಜಕುಮಾರ ಕೃಷಿ ಕೆಲಸಕ್ಕೆ ಹೋಗಿದ್ದು ಏನೂ ಇಲ್ಲವೆಂದು ಹೇಳಿದರೂ ಬಲವಂತವಾಗಿ ಟಿಲ್ಲರ್ ನ ಟ್ರೇಲರ್ ಮೇಲೆ ಕುಳಿತಿದ್ದ ರಾಜಕುಮಾರನ ಕೊರಳಿಗೆ ಬಲವಂತವಾಗಿ ಕೈ ಹಾಕಿ ಹೊರಗೆ ಎಳೆದು ರಸ್ತೆಯ ಮೇಲೆ ಬೀಳಿಸಿ ಎರಡು ಜನ ರಾಜಕುಮಾರನನ್ನು ಬಲವಂತವಾಗಿ ಮೇಲಕ್ಕೆ ಎತ್ತಿ ಕೈಯನ್ನು ಹಿಂದೆ ಮಾಡಿ ಮಡಚಿ ಹಿಡಿದು ಬಲಬದಿಯಲ್ಲಿದ್ದವನು ರಾಜಕುಮಾರನು ಧರಿಸಿದ್ದ ಸುಮಾರು 20 ಗ್ರಾಂ ತೂಕದ ಬಂಗಾರದ ಸರವನ್ನು ಎಳೆಯುತ್ತಿದ್ದುದನ್ನು ಕಸಿಯಲು ಸಾಧ್ಯವಾಗದಂತೆ ಕುತ್ತಿಗೆಯನ್ನು ಬಲಕ್ಕೆ ತಿರುಗಿಸಿದ್ದರೂ ಆತ ಕುತ್ತಿಗೆಯನ್ನು ಹಿಸುಕಿ ಬಂಗಾರದ ಸರವನ್ನು ಬಲವಂತವಾಗಿ ಕಿತ್ತುಕೊಂಡನು. ನಂತರ ರಾಜಕುಮಾರ ಎಡಭಾಗದಲ್ಲಿ ಕೈಯನ್ನು ಹಿಡಿದುಕೊಂಡಿದ್ದ ವ್ಯಕ್ತಿ, ಹಿಂಬದಿಯಿಂದ ಕೈ ಹಾಕಿ ಪ್ಯಾಂಟ್ ಜೇಬಿನಲಿದ್ದ 18,500‌ ರೂಪಾಯಿ ಹಣವನ್ನು ಕಿತ್ತುಕೊಂಡಿದ್ದಾರೆ.

ನಂತರ ರಾಜಕುಮಾರನ ತಲೆಯನ್ನು ಟಾರ್ ರಸ್ತೆಗೆ ಕುಟ್ಟಿ ಗಾಯಪಡಿಸಿದರು. ನಂತರ ರಾಜಕುಮಾರ ಅವರ ಅಣ್ಣನ ಮಗ ಪವನ್ ಕಡೆ ನೋಡಿದಾಗ ಆತನನ್ನು ಇನ್ನೊಬ್ಬ ಅಸಾಮಿ ರೋಡಿನ ಮೇಲೆ ಮಲಗಿಸಿ ತನ್ನ ಕೈಗಳಿಂದ ಪವನ್ ಕೂಗದಂತೆ ಬಾಯಿಯನ್ನು ಒತ್ತಿ ಹಿಡಿದಿದ್ದು ಆಗ ರಾಜಕುಮಾರ ತಮ್ಮನ್ನು ಇವರು ಜೀವಸಹಿತ ಬಿಡುವುದಿಲ್ಲ ಎಂದು ಹೆದರಿ ಜೋರಾಗಿ ಕೂಗಿಕೊಂಡಿದ್ದರಿಂದ ಸ್ವಲ್ಪ ದೂರದಲ್ಲಿದ್ದ ಮನೆಯವರೆಲ್ಲ ಬ್ಯಾಟರಿ ತೆಗೆದುಕೊಂಡು ಇವರ ಹತ್ತಿರ ಬರುತ್ತಿದ್ದುದ್ದನ್ನು ನೋಡಿ ಆರೋಪಿಗಳು ಇವರನ್ನು ತಳ್ಳಿ, ಬೈಕ್ ತೆಗೆದುಕೊಂಡು ಅದೇ ರಸ್ತೆಯಲ್ಲಿ ಮುಂದೆ ಹೋಗುತ್ತಾರೆ.

ನಂತರ ಎದುರಿನಿಂದ ಬೈಕ್‌ ನಲ್ಲಿ ಪ್ರದೀಪ ರವರು ಬರುತ್ತಿದ್ದು ರಾಜಕುಮಾರ ರವರನ್ನು ನೋಡಿ ಏನಾಯಿತು? ಎಂದು ಕೇಳಿದ್ದು ರಾಜಕುಮಾರ ನಡೆದ ವಿಚಾರವನ್ನು ತಿಳಿಸಿದಾಗ ಪ್ರದೀಪರವರು ಬೈಕ್ ನಲ್ಲಿ ಮುಂದೆ ಹೋದವರು ಪ್ರವೀಣ, ನವೀನ, ಸತೀಶ ಅಂತ ತಿಳಿಸಿದ್ದು ನಂತರ ರಾಜಕುಮಾರ ಮತ್ತು ಪವನ್ ರವರು ಟಿಲ್ಲರ್ ಸ್ಟಾರ್ಟ್ ಮಾಡಿ ಮುಂದೆ ಹೊರಟಿದ್ದು ಸುಮಾರು ಒಂದು ಕಿಲೋಮೀಟರ್ ಮುಂದೆ ಹೋದ ನಂತರ ಅದೇ ಮೂರು ಜನ ಮತ್ತೆ ಟಿಲ್ಲರ್ ನಿಲ್ಲಿಸಿ ನಾವು ಮಾಡಿದ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ. ಮರ್ಡರ್ ಮಾಡುತ್ತೇವೆ ಅಂತ ಬೆದರಿಕೆ ಹಾಕಿ ಹೋಗಿದ್ದಾರೆ.

ಗಾಯಾಳುಗಳು ರಾತ್ರಿ ಸುಮಾರು 11-30 ರ ಸುಮಾರಿಗೆ ಮನೆಗೆ ಹೋಗಿದ್ದು ಮಾರನೆ ದಿನ ಬೆಳಿಗ್ಗೆ ಆರೋಪಿಗಳು ಹಲ್ಲೆ ಮಾಡಿದ್ದರಿಂದ ನೋವು ಜಾಸ್ತಿಯಾಗಿ ಹೊಸನಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಈ ಘಟನೆ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ IPC 1860 (U/s-341,394,506,34) ಅಡಿ ದೂರು ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here