ಗೃಹ ಸಚಿವರ ಸ್ವಕ್ಷೇತ್ರದಲ್ಲಿ ಇದೆಂತಹ ಪರಿಸ್ಥಿತಿ | ಇಲ್ಲಿ ಹಳ್ಳ ದಾಟಲು ಅಡಿಕೆ ಮರವೇ ಆಸರೆ !!

0
1284

ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣುವಳ್ಳಿಯಿಂದ ಮೇಗರವಳ್ಳಿಗೆ ಹೋಗಬೇಕೆಂದರೆ ಅಲ್ಲಿರುವ ಹಳ್ಳವನ್ನು ದಾಟಿಕೊಂಡು ಹೋಗಬೇಕು.ಈ ಜಾಗಕ್ಕೆ ದಶಕಗಳ ಹಿಂದೆ ಕಾಲು ಸಂಕ ಕೂಡ ಮಾಡಿದ್ದಾರೆ ನಾಲ್ಕು ವರ್ಷಗಳ ಹಿಂದೆ ಈ ಕಾಲು ಸಂಕ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು ನಂತರ ಊರಿನ ಗ್ರಾಮಸ್ಥರ ಸಂಪರ್ಕ ಪೂರ್ಣ ಕಡಿತವಾಗಿದ್ದು ಈ ಹಳ್ಳಕ್ಕೆ ಅಲ್ಲಿನ ಗ್ರಾಮಸ್ಥರೆ ಎಲ್ಲಾ ಒಟ್ಟಿಗೆ ಸೇರಿ ಗ್ರಾಮಪಂಚಾಯಿತಿ ಅನುದಾನದಿಂದ ಸತತ ನಾಲ್ಕು ವರ್ಷಗಳಿಂದ ತಾತ್ಕಾಲಿಕವಾಗಿ ಅಡಿಕೆ ಮರದ ಸೇತುವೆ (ಕಾಲು ಸಂಕ) ಮಾಡಿಕೊಂಡಿದ್ದು ಅದರಲ್ಲಿ ನಡೆದುಕೊಂಡು ಹೋಗುತ್ತಿದ್ದರು ಆದರೆ ಈಗ ಈ ಕಾಲುಸಂಕದಲ್ಲಿ ನಡೆದುಕೊಂಡು ಹೋಗುವುದು ಕಷ್ಟ ಸಾಧ್ಯವಾಗಿದೆ.

ಈ ಹಿಂದೆ ಹೊನ್ನೇತಾಳು ಗ್ರಾಮಪಂಚಾಯಿತಿ ವ್ಯಾಪ್ತಿಯ ಕೆಂದಾಳಬೈಲು ಸಮೀಪ ಕಾಲು ಸಂಕದಲ್ಲಿ ಹಳ್ಳ ದಾಟುತ್ತಿರುವಾಗ ಶಾಲಾ ಬಾಲಕಿಯೊಬ್ಬಳು ನೀರಿನಲ್ಲಿ ಕೊಚ್ಚಿ ಹೋದ ನಿದರ್ಶನ ಕೂಡ ನಮ್ಮ ಮುಂದಿದ್ದು ಈ ವಿಷಯ ಕೂಡ ರಾಜ್ಯ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ತದನಂತರದಲ್ಲಿ ‘ಶಾಲಾ ಸಂಪರ್ಕ ಸೇತು ಯೋಜನೆ’ಯಡಿ ರಾಜ್ಯಾದ್ಯಂತ ಕಾಲು ಸಂಕಗಳಿಗೆ ವಿಶೇಷ ಹಣವನ್ನಿಟ್ಟು ಎಲ್ಲಾ ಕಾಲು ಸಂಕಗಳು ನಿರ್ಮಾಣ ಮಾಡುವತ್ತ ಸರ್ಕಾರ ಮುಂದಾಗಿತ್ತು. ಆದರೆ ಕೆಂದಾಳಬೈಲಿನ ಪಕ್ಕದ ಕೆಲವೇ ಕಿಲೋ ಮೀಟರ್ ದೂರದ ಊರಾದ ಅಣುವಳ್ಳಿಯಲ್ಲಿ ಅರ್ಧಂಬರ್ಧ (ಅರ್ಧ ಕಲ್ಲು, ಚಪ್ಪಡಿ, ಅರ್ಧ ಅಡಿಕೆ ಮರ) ಕಾಲು ಸಂಕ ಇರುವುದು ದುರಂತವೇ ಸರಿ.

ಅಣುವಳ್ಳಿ ಕಾಲು ಸಂಕದಲ್ಲಿ ಪ್ರತಿನಿತ್ಯ ಶಾಲೆಗೆ ಹೋಗುವ ಚಿಕ್ಕ ಚಿಕ್ಕ ಪುಟಾಣಿ ಮಕ್ಕಳು, ಕೆಲಸಕ್ಕೆ ಹೋಗುವವರು, ವಯೋ ವೃದ್ದರು ಎಲ್ಲರೂ ಕೂಡ ಇದರಲ್ಲಿಯೇ ನೆಡೆದುಕೊಂಡು ಹೋಗಬೇಕಾಗಿದೆ. ಹಾಗೆಯೇ ಈ ಭಾಗದಲ್ಲಿ ವೀರಭದ್ರೇಶ್ವರ ದೇವಸ್ಥಾನವಿದ್ದು ಈ ದೇವಸ್ಥಾನಕ್ಕೆ ಹೋಗಬೇಕಾದರೆ ಅನೇಕ ಭಕ್ತಾದಿಗಳು ಇದೆ ಕಾಲು ಸಂಕವನ್ನು ಅವಲಂಬಿಸಬೇಕು. ಮಲೆನಾಡಿನ ಮಳೆ ಅಬ್ಬರ ಜೋರಾಗಿರುವುದರಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಈ ಕಾಲು ಸಂಕ ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಇದ್ದು ಅಪಾಯ ಮುನ್ಸೂಚನೆ ನೀಡುತ್ತಿದೆ. ಯಾವುದಾದರೂ ದುರಂತವಾಗುವ ಮುಂಚೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here