ಹೊಸನಗರ: ತಾಲೂಕಿನ ಹುಂಚ ಹೋಬಳಿಯ ಗೊರಗೋಡು ಗ್ರಾಮದಲ್ಲಿ ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಬೇರೆಡೆಗೆ ಸಾಗಾಟ ಮಾಡಲಾಗುತ್ತಿದ್ದು, ಕೂಡಲೇ ಇದನ್ನು ತಡೆಯಬೇಕು ಎಂದು ಸ್ಥಳೀಯ ಗ್ರಾಮಸ್ಥರು ತಾಲೂಕು ಆಡಳಿತಕ್ಕೆ ಬುಧವಾರ ಮನವಿ ಸಲ್ಲಿಸಿದ್ದಾರೆ.
ಹೊಸನಗರ ತಾಲ್ಲೂಕು ಗೊರಗೋಡು ಗ್ರಾಮದ ಸರ್ವೆ ನಂ.14ರಲ್ಲಿ ಗುರುರಾಜ ಎಂಬುವವರು ಶರಾವತಿ ಹಿನ್ನೀರು ಸಮೀಪದಲ್ಲಿನ ಕೆಪಿಸಿ ಜಾಗದಲ್ಲಿ ಹಿಟಾಚಿ ಯಂತ್ರ ಬಳಸಿ, ಮಣ್ಣು ತೆಗೆಯಲಾಗುತ್ತಿದ್ದು, ಸಮೀಪದ ತಮ್ಮ ಖಾತೆ ಜಮೀನಿಗೆ ಇದನ್ನು ಸಾಗಾಟ ಮಾಡುತ್ತಿದ್ದಾರೆ. ಹಿನ್ನೀರು ಪಕ್ಕದ ಈ ಜಾಗವು ಸುತ್ತಮುತ್ತಲ ಗ್ರಾಮದ ಜಾನುವಾರುಗಳಿಗೆ ಮೇವು ಒದಗಿಸುತ್ತಿದ್ದು, ಮಣ್ಣು ತೆಗೆಯುತ್ತಿರುವುದರಿಂದ ಸಮಸ್ಯೆಯಾಗಿದೆ. ಮಣ್ಣು ತೆಗೆಯುವ ವೇಳೆ ಅಪಾರ ಪ್ರಮಾಣದ ಮರ-ಗಿಡಗಳನ್ನು ನಾಶಪಡಿಸಲಾಗಿದೆ. ಶರಾವತಿ ಹಿನ್ನೀರು ಸಮೀಪದ ಪರಿಸರವನ್ನು ಈ ಮೂಲಕ ಹಾಳುಗೆಡವಿದ್ದಾರೆ ಎಂದು ಆರೋಪಿಸಿ, ತಹಸೀಲ್ದಾರ್ಗೆ ದೂರು ಸಲ್ಲಿಸಿದ್ದಾರೆ.
ಅಲ್ಲದೇ ಮಣ್ಣು ತೆಗೆದ ಜಾಗದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಿದ್ದು, ಮರಳು ಸಾಗಾಟ ನಡೆಸಲು ಮುಂದಾಗಿದ್ದಾರೆ. ಕೂಡಲೇ ಅಕ್ರಮವನ್ನು ತಡೆಯುವಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಹಾಗೂ ಅಕ್ರಮ ಎಸಗಿದ ವ್ಯಕ್ತಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ಈ ತಹಶೀಲ್ದಾರ್ರವರಿಗೆ ಮನವಿ ಪತ್ರ ನೀಡುವ ಸಂದರ್ಭದಲ್ಲಿ ಅದೇ ಊರಿನವರಾದ ಯಲ್ಲಪ್ಪಚಾರ್, ಗಣಪತಿಆಚಾರ್, ಚಂದ್ರಾಚಾರ್, ಜಗದೀಶ ಆಚಾರ್ ಮತ್ತಿತರ ಗ್ರಾಮಸ್ಥರು ಉಪಸ್ಥಿತರಿದ್ದರು.