23.2 C
Shimoga
Sunday, November 27, 2022

ಗೋಶಾಲೆಗಳಿಗೆ ಆರ್ಥಿಕ ನೆರವು ಒದಗಿಸಲು ಬದ್ಧ : ಪ್ರಭುಚೌವ್ಹಾಣ್


ಶಿವಮೊಗ್ಗ : ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಗೋಶಾಲೆಗಳಿಗೆ ಅಗತ್ಯವಿರುವ ಆರ್ಥಿಕ ನೆರವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ರಾಜ್ಯ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಅವರು ಹೇಳಿದರು.


ಅವರು ಇಂದು ಶಿವಮೊಗ್ಗ ಸಮೀಪದ ಹುಣಸೋಡು ಗ್ರಾಮದಲ್ಲಿ ಕರ್ಕಿ ಶ್ರೀಮಠದ ಸಹಕಾರದೊಂದಿಗೆ ನಡೆಯುತ್ತಿರುವ ಜ್ಞಾನೇಶ್ವರಿ ಗೋಶಾಲೆಗೆ ಭೇಟಿ ನೀಡಿ, ಗೋಪೂಜೆ ನೆರವೇರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು.

ಗೋಹತ್ಯೆ ನಿಷೇಧ ಕಾನೂನು ಜಾರಿಯಾದ ನಂತರ ಕಸಾಯಿಖಾನೆಗೆ ಹೋಗುತ್ತಿರುವ ಗೋವುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದ್ದು, ಗೋಶಾಲೆಗಳಿಗೆ ಬರುತ್ತಿರುವ ಜಾನುವಾರುಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದರು.
ರಾಜ್ಯದಾದ್ಯಂತ ಒಟ್ಟು 100ಗೋಶಾಲೆಗಳನ್ನು ಸರ್ಕಾರದ ವತಿಯಿಂದಲೇ ಆರಂಭಿಸಲು ಉದ್ದೇಶಿಸಲಾಗಿದೆ. ಗೋವುಗಳ ರಕ್ಷಣೆಗಾಗಿ ಗೋಶಾಲೆಗಳ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗಿದ್ದು, ಅವುಗಳಿಗೆ ವೇಗ ಹೆಚ್ಚಿಸಲಾಗುವುದು. ಈಗಾಗಲೇ ಘೋಷಿಸಿರುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆಗಳ ಆರಂಭಕ್ಕೆ ಸ್ಥಳ ನಿವೇಶನ ಗುರುತಿಸುವ ಕಾರ್ಯ ನಡೆದಿದೆ. ಕೆಲವು ಕಡೆ ಸ್ಥಳ ಗುರುತಿಸಲಾಗಿದ್ದು, ಭೌತಿಕವಾಗಿ ಕಟ್ಟಡ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದ ಅವರು, ಸರ್ಕಾರದ ಈ ಮಹತ್ವದ ಕಾರ್ಯದೊಂದಿಗೆ ಸಾಕಷ್ಟು ಸಂಖ್ಯೆಯ ದಾನಿಗಳು ಗೋಶಾಲೆಗಳಿಗೆ ಉದಾರ ದಾನ ನೀಡಲು ಆಸಕ್ತಿ ತೋರಿಸಿದ್ದಾರೆ ಎಂದವರು ನುಡಿದರು.
ರಾಜ್ಯ ಸರ್ಕಾರದ ಪುಣ್ಯಕೋಟಿ ವಿಶೇಷ ಯೋಜನೆಯಡಿ ಗೋವಿನ ಸಂತತಿ ರಕ್ಷಣೆ ಹಾಗೂ ಗೋಶಾಲೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಸರ್ಕಾರಿ ನೌಕರರಿಂದ ಸುಮಾರು 100ಕೋಟಿ ರೂ.ಗಳ ಆರ್ಥಿಕ ಸಹಾಯಧನವನ್ನು ನೀಡುತ್ತಿರುವುದು ಈ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಬಲ ಬಂದಂತಾಗಿದೆ ಎಂದ ಅವರು, ಪ್ರಸ್ತುತ ಗೋಶಾಲೆಗಳಲ್ಲಿ ಪ್ರತಿ ಜಾನುವಾರಿಗೆ ಪ್ರತಿ ದಿನಕ್ಕೆ ನೀಡಲಾಗುತ್ತಿರುವ ರೂ.17/-ಗಳನ್ನು ಗುಜರಾತ್ ರಾಜ್ಯದಲ್ಲಿರುವಂತೆ ರೂ.30/- ಗಳಿಗೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಈ ಸಂಬಂಧ ಶೀಘ್ರವೇ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ, ಅನುಷ್ಠಾನಕ್ಕೆ ತರಲಾಗುವುದು ಎಂದರು.


ಚಿತ್ರನಟ ಸುದೀಪ್ ಅವರನ್ನು ಪಶುಪಾಲನಾ ಇಲಾಖೆಯ ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಇದೇ ಸಂದರ್ಭದಲ್ಲಿ ನಟ ಸುದೀಪ್ ಅವರು 31ಗೋವುಗಳನ್ನು ದತ್ತು ಸ್ವೀಕರಿಸಿದ್ದಾರೆ. ಅಲ್ಲದೇ ಸ್ವತಃ ಸಚಿವರು 31ಗೋವುಗಳನ್ನು ದತ್ತು ಪಡೆದಿರುವುದಾಗಿ ತಿಳಿಸಿದ ಅವರು, ಮಾನ್ಯ ಮುಖ್ಯಮಂತ್ರಿಗಳು 11ಗೋವುಗಳನ್ನು ದತ್ತು ಪಡೆದು ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ. ಅಂತೆಯೇ ಸಾರ್ವಜನಿಕರೂ ಕೂಡ ಇದೇ ಮಾದರಿಯಲ್ಲಿ ಗೋವುಗಳನ್ನು ದತ್ತುಪಡೆದು ಗೋವುಗಳ ರಕ್ಷಣೆಗೆ ಮುಂದಾಗಬೇಕು. ಇದೇ ರೀತಿಯಲ್ಲಿ ರಾಜ್ಯದ ಎಲ್ಲಾ ಚುನಾಯಿತ ಪ್ರತಿನಿಧಿಗಳು ತಮ್ಮ ಕಾರ್ಯಕ್ಷೇತ್ರದ ಒಂದು ಗೋಶಾಲೆಯನ್ನು ದತ್ತು ಪಡೆದು ನಿರ್ವಹಿಸಲು ಮನವಿ ಮಾಡಲಾಗುವುದು ಎಂದರು.


ಪಶುಪಾಲನಾ ಇಲಾಖೆಯಲ್ಲಿ ವೈದ್ಯಕೀಯ ಸಿಬ್ಬಂಧಿಗಳ ಕೊರತೆ ಇದೆ. ಈಗಾಗಲೇ 400ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆಯ್ಕೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ. ಪ್ರಕರಣ ಇತ್ಯರ್ಥಗೊಂಡ ನಂತರ ನೇಮಕಗೊಂಡ ಅಭ್ಯರ್ಥಿಗಳಿಗೆ ಕರ್ತವ್ಯದ ಮೇಲೆ ಹಾಜರಾಗಲು ಸೂಚನಾಪತ್ರ ರವಾನಿಸಲಾಗುವುದು ಎಂದರು.


ಯಾವುದೇ ಫಲಾಪೇಕ್ಷೆಯಿಲ್ಲದೇ ಗೋವುಗಳನ್ನು ಸಂರಕ್ಷಿಸುತ್ತಿರುವ, ಗೋಶಾಲೆಗಳನ್ನು ನಡೆಸುತ್ತಿರುವ ಸಂಘ-ಸಂಸ್ಥೆಗಳ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿವಮೊಗ್ಗದ ಸುರಭಿ ಗೋಶಾಲೆಯ ಮುಖ್ಯಸ್ಥ ನಟರಾಜ್ ಭಾಗ್ವತ್, ಮಹಾವೀರ ಗೋಶಾಲೆಯ ಮುಖ್ಯಸ್ಥ ಬಾಬುಲಾಲ್ ಜೈನ್, ಜ್ಞಾನೇಶ್ವರಿ ಗೋಶಾಲೆಯ ಮುಖ್ಯಸ್ಥ ಚಂದ್ರಹಾಸ ರಾಯ್ಕರ್ ಹಾಗೂ ಸೋಮೇಶ್ ಮತ್ತಿತರರು ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!