ಹೊಸನಗರ : ತಾಲೂಕಿನ ಚಿಕ್ಕಜೇನಿ ಗ್ರಾಮ ಪಂಚಾಯತ್ ಮುತ್ತಲ ಗ್ರಾಮದ ಸ್ವ ಗ್ರಾಮ ಯೋಜನೆ ಸಹಯೋಗದಲ್ಲಿ ಟೈಡ್ ಸಂಸ್ಥೆಯು ಗ್ರಾಮದ ಯುವಕ ರಮೇಶ್ ಅವರಿಗೆ ಕಂಪ್ಯೂಟರ್ ಹಾಗೂ ಪ್ರಿಂಟರ್ ಕೊಡುಗೆ ನೀಡುವ ಕಾರ್ಯಕ್ರಮ ನಡೆಸಿತು.
ಈ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಲು ಗ್ರಾಮೀಣ ಭಾಗದ ಯುವಕರಿಗೆ ತರಭೇತಿ ಹಾಗೂ ಮೂಲ ಉಪಕರಣ ಹಾಗೂ ತಾಂತ್ರಿಕ ನೆರವು ಒದಗಿಸುವ ಅಲ್ಸ್ತ್ರಾಂ ಎಂಬ ವಿಶೇಷ ಯೋಜನೆ ಆಯೋಜಿಸಿ ಅನುಷ್ಟಾನಗೊಳಿಸುತ್ತಿದೆ.
ಇದರ ಅನ್ವಯ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುತ್ತಲ ಸ್ವಗ್ರಾಮ ಸಮಿತಿ ಅಧ್ಯಕ್ಷ ಗುರುಮೂರ್ತಿ, ನಮ್ಮ ಗ್ರಾಮದಲ್ಲಿ ಸಾರ ಸಂಸ್ಥೆ ಹಾಗೂ ಸಮೂಹ ಸಂಸ್ಥೆಯ ಅಡಿಯಲ್ಲಿ ಸ್ವ ಗ್ರಾಮ ಯೋಜನೆ ಜಾರಿಗೆ ತರುವ ಮೂಲಕ ಅನೇಕ ನೆಲ, ಜಲ, ಪರಿಸರ, ಸಮಾಜಮುಖಿ ಕಲ್ಯಾಣ ಕಾರ್ಯಕ್ರಮ ಯಶಸ್ವಿ ಆಗಿ ಅನುಷ್ಟಾನಗೊಳ್ಳುತ್ತಿದೆ. ಇದರ ಒಂದು ಭಾಗವಾಗಿ ಇಂದು ಟೈಡ್ ಸಂಸ್ಥೆ ನಮ್ಮ ಗ್ರಾಮದ ಯುವಕರಿಗೆ ಸ್ವಯಂ ಉದ್ಯೋಗ ತರಭೇತಿ ಹಾಗೂ ಆರಂಭಿಕ ಉದ್ಯೋಗ ಉಪಕರಣ ಒದಗಿಸುವ ಮೂಲಕ ಉತ್ತಮ ಕಾರ್ಯ ಮಾಡುತ್ತಿದೆ. ಇದರಿಂದ ಗ್ರಾಮೀಣ ಉದ್ಯೋಗ ಅವಕಾಶ ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯ ಎಂದ ಅವರು ಮುಂದಿನ ದಿನಗಳಲ್ಲಿ ನಮ್ಮ ಗ್ರಾಮದ ಮಹಿಳೆಯರ ಗುಂಪಿಗೆ ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸಿ ಕೊಡಲು ವಿನಂತಿ ಮಾಡಿದರು.
ಕೊಡುಗೆ ಹಸ್ತಾಂತರ ಮಾಡಿದ ಟೈಡ್ ಸಂಸ್ಥೆಯ ಸಮನ್ವಯ ಅಧಿಕಾರಿ ಪ್ರೇಮ್ ಕುಮಾರ್ ಮಾತನಾಡಿ ಸಂಸ್ಥೆಯು ಗ್ರಾಮೀಣ ಪ್ರದೇಶದ ಆರ್ಥಿಕ ಸ್ವಾವಲಂಬನೆ ಕೇಂದ್ರೀಕರಿಸಿ ಮಹಿಳೆಯರಿಗೆ ಹಾಗೂ ಯುವಕರಿಗೆ ಸ್ವಯಂ ಉದ್ಯೋಗ ತರಭೇತಿ ನೀಡುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಹತ್ತು ಹಲವು ಕ್ಷೇತ್ರ ಹಾಗೂ ವಿಭಾಗಗಳಲ್ಲಿ ಕಾರ್ಯ ಚಟುವಟಿಕೆ ರೂಪಿಸಿ ಅನುಷ್ಟಾನಕ್ಕೆ ತರುತ್ತಿದೆ. ಸಂಸ್ತೆಯ ಮುಖ್ಯ ಉದ್ದೇಶ ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಂಸ್ಥೆ ತಾಂತ್ರಿಕ ನೆರವು ಮತ್ತು ಮಾರ್ಗದರ್ಶನ ನೀಡಲು ಸದಾ ಸಿದ್ಧವಿದೆ ಎಂದು ಹೇಳಿದರಲ್ಲದೆ ಇದರ ಸದುಪಯೋಗ ಪಡೆದುಕೊಳ್ಳವುದರ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸ್ವ ಗ್ರಾಮ ಯೋಜನೆ ಸಂಚಾಲಕ ಯೇಸು ಪ್ರಕಾಶ್, ಸಾರ ಸಂಸ್ಥೆ ಸಂಚಾಲಕ ಧನುಷ್ ಕುಮಾರ್, ಶಿವಕುಮಾರ್, ಸ್ವ ಗ್ರಾಮ ಯೋಜನೆ ಕಾರ್ಯದರ್ಶಿ ಸತೀಶ್ ಹಂಜ, ಸಮಿತಿ ಸದಸ್ಯರಾದ ಮಂಜಪ್ಪ, ನೀಲಮ್ಮ, ಸವಿತಾ, ಮಹೇಶ್ ಮತ್ತಿತರರು ಹಾಜರಿದ್ದರು.