ಗ್ರಾಮ ಒನ್ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ : ಡಾ.ಆರ್.ಸೆಲ್ವಮಣಿ

0
216

ಶಿವಮೊಗ್ಗ : ಸರ್ಕಾರದ ವಿವಿಧ ಯೋಜನೆಗಳು, ವಿವಿಧ ಕೃಷಿ ಮಾರುಕಟ್ಟೆ ಮಾಹಿತಿ, ಸಕಾಲ ಹಾಗೂ ಸೇವಾಸಿಂಧು ಯೋಜನೆಗಳ ಸೇವೆ, ಸಾರ್ವಜನಿಕ ಕುಂದುಕೊರತೆಗಳ ಸ್ವೀಕಾರ ಮತ್ತು ಮಾಹಿತಿಹಕ್ಕು ಕಾಯ್ದೆಯಡಿ ಮಾಹಿತಿ ಕೋರಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಗ್ರಾಮ ಒನ್ ಕೇಂದ್ರಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲೆಯ 241 ಗ್ರಾಮ ಪಂಚಾಯಿತಿಗಳಲ್ಲಿ ಆರಂಭಿಸಲಾಗಿದ್ದು, ಉಳಿದ 30 ಪಂಚಾಯಿತಿಗಳಲ್ಲಿ ಶೀಘ್ರದಲ್ಲಿ ಕೇಂದ್ರಗಳು ಆರಂಭಗೊಂಡು ಸಾರ್ವಜನಿಕ ಸೇವೆಗೆ ಸಜ್ಜಾಗಲಿವೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಹೇಳಿದರು.

ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಗ್ರಾಮ ಒನ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಜನತೆ ರಾಜ್ಯ ಸರ್ಕಾರದ 79ಇಲಾಖೆಗಳ 300ಕ್ಕೂ ಹೆಚ್ಚಿನ ಸೇವೆಗಳಿಗಾಗಿ ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡದೆ ಸಮೀಪದ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದ ಅವರು ಇದರಿಂದಾಗಿ ಸಮಯ, ಹಣ ಉಳಿತಾಯವಾಗಲಿದೆ. ಸಾರ್ವಜನಿಕರು ಈ ಸದವಕಾಶದ ಲಾಭ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.

ಕಳೆದ 4-6ತಿಂಗಳಲ್ಲಿ ಸುಮಾರು 9000ಅರ್ಜಿಗಳು ಗ್ರಾಮ ಒನ್ ಕೇಂದ್ರಗಳ ಮೂಲಕ ವಿಲೇವಾರಿಯಾಗಿದೆ ಎಂದರು.

ಈ ಯೋಜನೆಯ ಆರಂಭದ ಹಂತದಲ್ಲಿ ಯೋಜನೆಯ ವ್ಯವಸ್ಥಿತ ಅನುಷ್ಠಾನದಲ್ಲಿ ಅಲ್ಪ ಮಟ್ಟಿನ ನ್ಯೂನತೆಗಳಿದ್ದು ಕಾಲಾನಂತರದಲ್ಲಿ ಎಲ್ಲವೂ ಸರಿಯಾಗಲಿದೆ. ಸಾರ್ವಜನಿಕರು ಜಿಲ್ಲಾಡಾಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.

ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಹಾಗೂ ಸಕಾಲದಲ್ಲಿ ಮಾಹಿತಿ ಒದಗಿಸಿ ಜನಸ್ನೇಹಿ ವಾತಾವರಣ ನಿರ್ಮಿಸುವಂತೆ ಅವರು ಸೂಚಿಸಿದರು.

ಜಿಲ್ಲಾ ಮಟ್ಟದ ಸಮಿತಿಯಲ್ಲಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಆಯಾ ತಾಲೂಕುಗಳಲ್ಲಿ ಗ್ರಾಮ ಒನ್ ಸೇವೆಗಳ ಕುರಿತು ನಡೆಯುವ ಸಭೆಯಲ್ಲಿ ಭಾಗವಹಿಸುವಂತೆ ಹಾಗೂ ಕೇಂದ್ರಗಳಿಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಅವರು ಸೂಚಿಸಿದರು.

ಅಲ್ಲದೆ ಸಾರ್ವಜನಿಕರಿಗೆ ಉತ್ತಮ ಸೇವೆ ದೊರೆಯುತ್ತಿರುವುದನ್ನು, ಯಾವುದೇ ಅಡತಡೆಯಿಲ್ಲದೆ ಅರ್ಜಿಗಳು ವಿಲೇವಾರಿಯಾಗುವುದನ್ನು ಜಿಲ್ಲಾ ಸಮಿತಿ ಸದಸ್ಯರುಗಳು ನೋಡಿಕೊಳ್ಳಬೇಕು. ಕಾಲಮಿತಿಯಲ್ಲಿ ಅರ್ಜಿಗಳ ವಿತರಣೆ ಹಾಗೂ ಗುಣಾತ್ಮಕ ಸೇವೆಗಳ ಬಗ್ಗೆ ಭೇಟಿ ಸಂದರ್ಭದಲ್ಲಿ ಗಮನಿಸುವಂತೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್‌.ಹೊನ್ನಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here