ಹೊಸನಗರ: ಗ್ರಾಮ ಲೆಕ್ಕಿಗರ ಕಛೇರಿ ಮುಂದೆ ಗಂಟೆಗಟ್ಟಲೆ ಕಾದು ಸುಸ್ತಾದ ವೃದ್ದೆಯೊಬ್ಬರು ಕಛೇರಿ ಮುಂಭಾಗ ಕುಸಿದು ಬಿದ್ದ ಘಟನಎ ತಾಲೂಕಿನ ನಿಟ್ಟೂರು ಗ್ರಾಮ ಲೆಕ್ಕಾಧಿಕಾರಿ ಕಛೇರಿಯಲ್ಲಿ ನಡೆದಿದೆ.
ಹೆಬ್ಬಿಗೆ ಗ್ರಾಮದ ವೃದ್ಧೆ ಸಾಧಮ್ಮ ಕುಸಿದು ಬಿದ್ದವರು. ಅವರನ್ನು ಕೂಡಲೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತು ಎಂದು ತಿಳಿದು ಬಂದಿದೆ.
ವೃದ್ಧೆ ಸಾಧಮ್ಮ ಅವರು ಸಾಮಾಜಿಕ ಭದ್ರತಾ ಪಿಂಚಣಿ ಸೌಲಭ್ಯ ಪಡೆಯಲು ಹೆಬ್ಬಿಗೆ ಗ್ರಾಮದಿಂದ 7 ಕಿ.ಮೀ ನಡೆದುಕೊಂಡು ನಿಟ್ಟೂರಿಗೆ ಗ್ರಾಮ ಲೆಕ್ಕಾಧಿಕಾರಿ ಕಛೇರಿಗೆ ಬಂದಿದ್ದರು. ಶುಕ್ರವಾರ ಬೆಳಗ್ಗೆ 9.30ಕ್ಕೆ ವೃದ್ಧೆ ಸಾಧಮ್ಮ ಅವರು ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಮಧ್ಯಾಹ್ನವಾದರೂ ಗ್ರಾಮ ಲೆಕ್ಕಿಗ ಮಂಜಪ್ಪ ಕಚೇರಿಗೆ ಆಗಮಿಸಿರಲಿಲ್ಲ ಎಂದು ಆರೋಪಿಸಲಾಗಿದೆ. ಕಾದು ಸುಸ್ತಾಗಿದ್ದ ವೃದ್ಧೆ ಸಾಧಮ್ಮ ಅವರು ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.
ಸ್ಥಳೀಯರು ಸಾಧಮ್ಮ ಅವರನ್ನು ಉಪಚರಿಸಿದರು. ಅಲ್ಲದೆ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ಬೆನ್ನಿಗೆ ತಹಶೀಲ್ದಾರ್ ವಿ.ಎಸ್.ರಾಜೀವ್ ಅವರು ಗ್ರಾಮ ಲೆಕ್ಕಿಗ ಮಂಜಪ್ಪ ಅವರನ್ನು ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
Related