ಗ್ರಾಹಕರು ತಮ್ಮ ಹಕ್ಕುಗಳ ಮೇಲೆ ಜಾಗೃತಿ ಹೊಂದಲಿ ; ನ್ಯಾ|| ಕೆ. ರವಿಕುಮಾರ್

0
427

ಹೊಸನಗರ: ಮಾರುಕಟ್ಟೆಗೆ ಗ್ರಾಹಕನೇ ರಾಜನಿದ್ದಂತೆ. ಆತನ ಅನಿಸಿಕೆಗೆ ತಕ್ಕಂತೆ ಉತ್ಪಾದಕರು ವಸ್ತುಗಳನ್ನು ಉತ್ಪಾದಿಸಬೇಕಿದೆ. ಉತ್ಪಾದಿತ ವಸ್ತುಗಳಲ್ಲಿನ ಲೋಪ-ದೋಷಕ್ಕೆ ಉತ್ಪಾದಕನೇ ನೇರ ಹೊಣೆ ಆಗುತ್ತಾನೆ. ಗ್ರಾಹಕರು ತಮ್ಮ ವಸ್ತುಗಳ ಖರೀದಿ ಸಮಯದಲ್ಲಿ ರಸೀದಿ ಪಡೆಯುವುದು ಕಡ್ಡಾಯವಾಗಲಿ ಎಂದು ಇಲ್ಲಿನ ಪ್ರಧಾನ ವ್ಯವಹಾರ ನ್ಯಾಯಧೀಶ ಕೆ. ರವಿಕುಮಾರ್ ತಿಳಿಸಿದರು.

ವಿಶ್ವ ಗ್ರಾಹಕರ ದಿನಾಚರಣೆ ಅಂಗವಾಗಿ ಪಟ್ಟಣದ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ತಾಲೂಕು ವರ್ತಕರ ಸಂಘ, ವಕೀಲರ ಸಂಘ ಹಾಗೂ ಕಾನೂನು ಸೇವಾ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

1986 ಗ್ರಾಹಕರ ಹಿತರಕ್ಷಣಾ ಕಾಯ್ದೆಗೆ 2019ರಲ್ಲಿ ಸೂಕ್ತ ತಿದ್ದುಪಡಿ ತರಲಾಗಿದ್ದು, ಗ್ರಾಹಕ ಖರೀದಿಸಿದ ನಿತ್ಯಬಳಕೆ ವಸ್ತುಗಳ ಮೇಲೆ ಮಾರಾಟಗಾರರು, ಸೇವೆ ಒದಗಿಸುವುದು ಕಡ್ಡಾಯವಾಗಿದೆ. ಆದರೆ ಗ್ರಾಹಕರು ಖರೀದಿ ಪತ್ರ ಹೊಂದುವುದು ಅಗತ್ಯವಾಗಿದೆ.‌ ಗ್ರಾಹಕರು ತಮ್ಮ ಹಕ್ಕುಗಳ ಮೇಲೆ ಜಾಗೃತಿ ಹೊಂದಿ, ಅನ್ಯಾಯ, ಮೋಸ ಕಂಡು ಬಂದಲ್ಲಿ ಸಂಘಟಿತ ಹೋರಾಟ ಮಾಡಬೇಕಿದೆ. ಸಗಟು ಮಾರಾಟಗಾರರು ಸೇರಿದಂತೆ ನಡುವಿನ ಹಲವು ಸಣ್ಣ ವ್ಯಾಪಾರಿಗಳು ಸಹ ಗ್ರಾಹಕರಿಗೆ ಅನ್ಯಾಯವಾದಲ್ಲಿ ಕಾನೂನಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.

ಅಂಗಡಿ ಮಾಲೀಕರು ಹಾಗೂ ಖರೀದಿದಾರರ ನಡುವೆ ಸಾಮರಸ್ಯ ಅತ್ಯಗತ್ಯ ಇರಬೇಕು. ಅಂಗಡಿ ಮಾಲೀಕರು ತಮ್ಮ ಅಂಗಡಿಯ ಜಾಹೀರಾತು ಇರುವ ಕೈಚೀಲ ಲಕೋಟೆಗಳನ್ನು ಗ್ರಾಹಕರಿಗೆ ನೀಡುತ್ತಿದ್ದು ಲಕೋಟೆಗಳ ಹಣವನ್ನು ಗ್ರಾಹಕರಿಂದ ಪಡೆದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಗ್ರಾಹಕರು ವಸ್ತುಗಳನ್ನು ಖರೀದಿ ಮಾಡಿದಾಗ ಕಡ್ಡಾಯವಾಗಿ ಬಿಲ್ ಪಡೆಯಬೇಕೆಂದು ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ವಾಲೇಮನೆ ಶಿವಕುಮಾರ್ ಮಾತನಾಡಿ, ಗ್ರಾಹಕರ ಹಿತರಕ್ಷಣೆ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದಾಗಿನಿಂದ ಉತ್ಪಾದಕರು ಹೆಚ್ಚಿನ ಜವಾಬ್ದಾರಿ ವಹಿಸಬೇಕಿದೆ. ದೇಶದ ಯಾವುದೇ ಮೂಲೆಯಿಂದಲೂ ಗ್ರಾಹಕ ತನ್ನಗಾದ ಅನ್ಯಾಯ, ಮೋಸದ ವಿರುದ್ದ ಧ್ವನಿ ಎತ್ತಬಹುದಾಗಿದೆ. ಇದಕ್ಕೆ ಸೂಕ್ತ ಗ್ರಾಹಕರ ವೇದಿಕೆ ಬಳಕೆಯ ಅಗತ್ಯವಿದೆ ಎಂದರು.

ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಜೇಸಿ ಪೂರ್ವ ವಲಯಾಧ್ಯಕ್ಷ ಎಲ್. ಕೆ. ಮುರುಳಿಧರ, ಪ.ಪಂ. ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷೆ ಕೃಷ್ಣವೇಣಿ, ಸದಸ್ಯೆ ಗಾಯತ್ರಿ, ಗುರುರಾಜ್ ಬಜಾಜ್, ಶ್ರೀನಿವಾಸ ಕಾಮತ್, ಶ್ರೀಧರ ಉಡುಪ ಮೊದಲಾದವರು ಉಪಸ್ಥಿತರಿದ್ದರು.

ಕು|| ರಶ್ಮಿತಾ ಪ್ರಾರ್ಥಿಸಿದರು. ಬಿ.ಎಸ್. ಸುರೇಶ್ ನಿರೂಪಿಸಿ, ವರ್ತಕರ ಸಂಘದ ಕಾರ್ಯದರ್ಶಿ ಬೈಸೆ ಹರೀಶ್ ಸ್ವಾಗತಿಸಿ, ಸುಧೀಂದ್ರ ಪಂಡಿತ್ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here