ಚಿಕ್ಕಮಗಳೂರು: ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕ್ಗಳ ಪಾತ್ರ ಮಹತ್ವದಾಗಿದ್ದು, ಗ್ರಾಮೀಣ ಪ್ರದೇಶದ ಕಟ್ಟ ಕಡೆಯ ವ್ಯಕ್ತಿಗೂ ಹಣಕಾಸು ಸೇವೆಗಳನ್ನು ತಲುಪಿಸುವ ಮೂಲಕ ದೇಶದ ಆರ್ಥಿಕ ಬೆಳವಣಿಗೆಯನ್ನು ವೃದ್ಧಿಸಬಹುದು ಎಂದು ಜಿಲ್ಲಾಧಿಕಾರಿ ಕೆ. ಎನ್. ರಮೇಶ್ ಹೇಳಿದರು.
ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ ಹಾಗೂ ಅಗ್ರಣೀಯ ಬ್ಯಾಂಕ್ ವತಿಯಿಂದ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಸಾಲ ಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು.
ಹೆಚ್ಚು ಗ್ರಾಹಕರನ್ನು ತಲುಪಿದಷ್ಟು ಬ್ಯಾಂಕ್ ವ್ಯವಸ್ಥೆ ಸದೃಢವಾಗಲಿದೆ. 2019ರ ಆರ್. ಬಿ. ಐ ವರದಿ ಪ್ರಕಾರ ಜನ್ ಧನ್ ಯೋಜನೆ ಮೂಲಕ 34 ಕೋಟಿ ಬ್ಯಾಂಕ್ ಖಾತೆಗಳು ಸೃಜಿಸಿದ್ದು, ರೂ. 89,257 ಕೋಟಿ ಹಣ ಬ್ಯಾಂಕುಗಳಿಗೆ ಜಮಾ ಆಗಿದೆ. ಉತ್ತಮವಾದ ಯೋಜನೆಗಳ ಮೂಲಕ ಇಂದು ಬ್ಯಾಂಕ್ ವ್ಯವಸ್ಥೆಯು ಸುಧಾರಣೆಗೊಂಡಿದ್ದು, ದೇಶದ ಶೇ. 80ರಷ್ಟು ಜನ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ ಎಂದರು.
ಕೆಲವು ಆಯ್ದ ಗ್ರಾಹಕರಿಗೆ ಹೆಚ್ಚಿಗೆ ಸಾಲ ನೀಡುವ ಮೂಲಕ ಬ್ಯಾಂಕ್ಗಳು ಅವರ ಮೇಲೆ ಅವಲಂಬಿತರಾಗುವುದರಿಂದ ಮಾರುಕಟ್ಟೆ ಕುಸಿದಾಗ ಸಾಲ ಮರುಪಾವತಿಯಾಗದೇ ಬ್ಯಾಂಕ್ ವ್ಯವಸ್ಥೆಯು ಕುಸಿಯುತ್ತದೆ. ಹಿಂದೆ ಜರುಗಿರುವ ಇಂತಹ ಕೆಲ ನಿದರ್ಶನಗಳನ್ನು ಮನದಟ್ಟು ಮಾಡಿಕೊಂಡು ಹಾಗೂ ಆರ್ಥಿಕ ಸ್ಥಿತಿಯನ್ನು ಅರ್ಥೈಸಿಕೊಳ್ಳುವ ಮೂಲಕ ಸಾಲ ವಿತರಣೆಗೆ ಬ್ಯಾಂಕ್ ಗಳು ಮುಂದಾಗಬೇಕು ಎಂದರು.
ಬ್ಯಾಂಕ್ಗಳು ಗ್ರಾಹಕರೊಡನೆ ಸಂಪರ್ಕವನ್ನು ಹೆಚ್ಚಿಸಿಕೊಂಡು ಹಣಕಾಸು ಸೇರ್ಪಡೆ ಯೋಜನೆಗಳ ಮೂಲಕ ಕಟ್ಟ ಕಡೆಯ ವ್ಯಕ್ತಿಗೂ ಜೀವನೋಪಾಯ ಮಾರ್ಗಕ್ಕಾಗಿ ಹಾಗೂ ಕೌಶಲ್ಯಾಭಿವೃದ್ಧಿಗೆ ಹಣಕಾಸು ಸೌಲಭ್ಯ ನೀಡುವುದರಿಂದ ಬ್ಯಾಂಕ್ನ ಸರಪಳಿ ವ್ಯವಸ್ಥೆಯು ಬಲವಾಗಿ ಆದಾಯವು ಹೆಚ್ಚಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ಜನಸಾಮಾನ್ಯರು ಇಂತಹ ಕಾರ್ಯಕ್ರಮದ ಮೂಲಕ ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದುಕೊಂಡು ಸರ್ಕಾರ ರೂಪಿಸಿರುವ ಹಲವಾರು ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಫಲಾನುಭವಿಗಳು ಬ್ಯಾಂಕ್ನಿಂದ ಸಾಲ ಪಡೆದ ನಂತರ ನಂಬಿಕೆಯನ್ನು ಉಳಿಸಿಕೊಂಡು ಮರುಪಾವತಿಯನ್ನು ಸಮಯಕ್ಕೆ ಸರಿಯಾಗಿ ಮಾಡಿದ್ದಲ್ಲಿ, ಬಡವರ್ಗದ ಕಲ್ಯಾಣಕ್ಕಾಗಿ ರೂಪಿಸಿರುವ ಯೋಜನೆಗಳ ಉದ್ದೇಶ ಈಡೇರುತ್ತದೆ ಎಂದರು.
ಸಾಲ ನೀಡುವಾಗ ಸಲ್ಲಿಸಬೇಕಾದ ದಾಖಲಾತಿಗಳ ಮಾಹಿತಿಯನ್ನು ಬ್ಯಾಂಕ್ ಅಧಿಕಾರಿಗಳು ಗ್ರಾಹಕರಿಗೆ ಆರಂಭದಲ್ಲಿಯೇ ತಿಳಿಸಬೇಕು. ನಂತರ ಜನಸಾಮಾನ್ಯರನ್ನು ಬ್ಯಾಂಕ್ಗಳಿಗೆ ಅಲೆದಾಡಿಸಬಾರದು ಎಂದರು.
ವಿವಿಧ ಬ್ಯಾಂಕ್ಗಳ ಸ್ಟಾಲ್ಗಳನ್ನು ಕಾರ್ಯಕ್ರಮದಲ್ಲಿ ತೆರೆಯಲಾಗಿತ್ತು ಹಾಗೂ ಸಾಲ ಮಂಜೂರಾದ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಪ್ರತಾಪ್, ಯು. ಬಿ. ಐ ಪ್ರಾದೇಶಿಕ ಮುಖ್ಯಸ್ಥ ರಾಜಮಣಿ ಮತ್ತಿತ್ತರ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು.
Related