20.6 C
Shimoga
Friday, December 9, 2022

ಚಂದ್ರಗುತ್ತಿ ; ರೇಣುಕಾಂಬ ದೇವಿಗೆ ವಿಶೇಷ ಪೂಜೆ | ಹರೀಶಿಯಲ್ಲಿ ಬನದೇವತೆ ಗಜಲಕ್ಷ್ಮೀ ಉತ್ಸವ ಸಂಭ್ರಮ ಸಡಗರದಿಂದ ಸಂಪನ್ನ | ಗಣಿಗಾರಿಕೆಗೆ ಪರವಾನಿಗೆ ಕೊಡಬಾರದು

ಸೊರಬ : ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇಗುಲಕ್ಕೆ ಕಾರ್ತಿಕ ಹುಣ್ಣಿಮೆಯ ಪ್ರಯುಕ್ತ ಭಕ್ತರು ಮಂಗಳವಾರ ಆಗಮಿಸಿ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು.

ಚಂದ್ರಗ್ರಹಣ ಇರುವ ಹಿನ್ನೆಲೆ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವಿವಿಧ ಕಡೆಗಳಿಂದ ಭಕ್ತರು ಆಗಮಿಸಿ ತಮ್ಮ ಇಷ್ಟ ದೇವತೆ ರೇಣುಕಾದೇವಿಯನ್ನು ದರ್ಶನ ಮಾಡಿ ಉದೋ ಉದೋ ಎಂದು ಜೈಕಾರ ಹಾಕಿ ಭಕ್ತಿ ಸಮರ್ಪಿಸಿದರು. ಭಕ್ತಾದಿಗಳು ಆರಾಧ್ಯ ದೇವಿ ರೇಣುಕಾಂಬೆಗೆ ವಿವಿಧ ಧಾರ್ಮಿಕ ಸೇವೆ, ಹರಕೆ, ಪೂಜೆ ನಡೆಸಿದರು.

ಚಂದ್ರ ಗ್ರಹಣ ಮುಗಿದ ನಂತರ ರೇಣುಕಾದೇವಿ ಪಲ್ಲಕ್ಕಿ ಉತ್ಸವವು ಸಮೀಪದ ಹೊಳೆ ಜೋಳದಗುಡ್ಡೆ ಗ್ರಾಮದ ಗೋಮಂತೇಶ್ವರ ದೇವಾಲಯಕ್ಕೆ ತೆರಳಿ ತೆಪ್ಪದ ಕಾರ್ತಿಕ ಮಹೋತ್ಸವದ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಯಿತು. ಪೂಜೆ ಮುಗಿದ ಬಳಿಕ ದೇವಿಯ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ವಿವಿಧ ವಾದ್ಯ ಮೇಳಗಳ ಮೂಲಕ ಜೋಳದಗುಡ್ಡೆಯಿಂದ ಚಂದ್ರಗುತ್ತಿ ಮುಖ್ಯರಸ್ತೆ ಹಾಗೂ ರಥ ಬೀದಿ ಮಾರ್ಗವಾಗಿ ಬೆಟ್ಟದಲ್ಲಿರುವ ದೇಗುಲಕ್ಕೆ ಬೆಳಗಿನ ಜಾವ 5 ಗಂಟೆಗೆ ತೆರಳಿತು.

ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿಗಳು, ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು, ಆರಕ್ಷಕ ಠಾಣೆ ಸಿಬ್ಬಂದಿಗಳು, ಭಕ್ತಾಧಿಗಳು ಇದ್ದರು.

ಹರೀಶಿಯಲ್ಲಿ ಬನದೇವತೆ ಗಜಲಕ್ಷ್ಮೀ ಉತ್ಸವ ಸಂಭ್ರಮ ಸಡಗರದಿಂದ ಸಂಪನ್ನ

ಸೊರಬ: ಪ್ರತಿವರ್ಷ ದಂತೆ ಈ ವರ್ಷವೂ ಹರೀಶಿಯಲ್ಲಿ ಬನದೇವತೆ ಗಜಲಕ್ಷ್ಮೀ ಉತ್ಸವ ಸಂಭ್ರಮ ಸಡಗರದಿಂದ ಸಂಪನ್ನಗೊಂಡಿತು.
ಹರೀಶಿ ಗ್ರಾಮ ಚಂದ್ರಗುತ್ತಿ ಹೋಬಳಿಯ ಚಿಕ್ಕ ಗ್ರಾಮ ಇಲ್ಲಿನ 35 ವಿಪ್ರ ಕುಟುಂಬಗಳು ತಲತಲಾಂತರದಿಂದ ಗಜಲಕ್ಷ್ಮೀ ಬನದಲ್ಲಿ ಉತ್ಸವ ನಡೆಸುತ್ತಿದ್ದು, ಕಾರ್ತೀಕ ಮಾಸದ ಏಕಾದಶಿ ಯಿಂದ ತ್ರಯೋದಶಿಯವರೆಗೆ ಅಲ್ಲಿನ ಅಪರೂಪದ ಧನ್ವಂತರಿ ದೇವಸ್ಥಾನ ದಲ್ಲಿ ಪೂಜೆ ಹವನ ನಡೆದು ಅಲ್ಲಿಂದ ಉತ್ಸವ ಮೂರ್ತಿ ಯನ್ನು ಪಲ್ಲಕ್ಕಿಯ ಮೂಲಕ ವನಕ್ಕೆ ತರಲಾಗುತ್ತದೆ. ವನದಲ್ಲಿ ಸಾವಿರ ವರ್ಷಕ್ಕೂ ಪ್ರಾಚೀನವಾದ ಗಜಲಕ್ಷ್ಮೀ ವಿಗ್ರಹಕ್ಕೆ ಅಲಂಕರಿಸಿ ಪೂಜಿಸುತ್ತಾರೆ. ಸಾರ್ವಜನಿಕ ಹಣ್ಣುಕಾಯಿ ನೈವೇದ್ಯ ದ ಬಳಿಕ ಪ್ರಸಾದ ವಿನಿಯೋಗ, ವನಬೋಜನ ನಡೆಯುತ್ತದೆ.
ಅರ್ಚಕ ಶ್ರೀಧರ ಭಟ್, ಸುಬ್ರಾಯಭಟ್, ವಿನಾಯಕ ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು.
ಗ್ರಾಮದ ವಿಪ್ರಸಮೂಹದವರು, ಗ್ರಾಮ ಪ್ರಮುಖರು ಇದ್ದರು.

ಗಣಿಗಾರಿಕೆಗೆ ಪರವಾನಿಗೆ ಕೊಡಬಾರದು

ಸೊರಬ: ಈಗಾಗಲೇ ಗಣಿಗಾರಿಕೆ ಅದ್ವಾನದಿಂದ ನಾವು ಹೈರಾಣಾಗಿದ್ದೇವೆ. ಮತ್ತೆ ಈ ಭಾಗಕ್ಕೆ ಗಣಿಗಾರಿಕೆಗೆ ಯಾವುದೇ ಪರವಾನಿಗೆ ಕೊಡಕೂಡದು ಎಂದು ಬಸ್ತಿಕೊಪ್ಪ ಗ್ರಾಮಸ್ಥರು ಆಗ್ರಹಿಸಿದರು.


ಚಂದ್ರಗುತ್ತಿ ಹೋಬಳಿ ಬಸ್ತಿಕೊಪ್ಪದಲ್ಲಿ ನಡೆದ ವಾರ್ಡ್‌ ಸಭೆ ಉದ್ಧೇಶಿಸಿ ಮಾತನಾಡಿದ ಗ್ರಾಮಸ್ಥರು, ಜನರಿಗೆ ಮಾರಕವಾಗುವ ಅಭಿವೃದ್ಧಿ ನಮಗೆ ಬೇಡ, ಜನರೊಂದಿಗೆ ಒಟ್ಟಾಗಿ ಬದುಕುವ ಸೌಲಭ್ಯ ಇದ್ದರೆ ಸಾಕು. ವರ್ಷವಿಡಿ ಸರಾಗವಾಗಿ ಓಡಾಡಲು ರಸ್ತೆಯಿಲ್ಲ. ಕೃಷಿಗೆ ಪೂರಕವಾಗಿ ಇರುವ ಬೋರ್‌ವೆಲ್‌ ಗಳು ನಿಷ್ಕ್ರಿಯಗೊಂಡಿದೆ. ಅಸ್ತಮ, ಹೃದಯ ಬೇನೆಯಂತಹ ಕಾಯಿಲೆಗಳು ಸಾಮಾನ್ಯವೆನಿಸಿದೆ. ಕೂಲಿನಾಲಿ ಮಾಡಿ ಜೀವನ ನಿರ್ವಹಿಸುವ ನಮಗೆ ಇಲ್ಲಿನ ಗಣಿಗಾರಿಕೆಯೆ ಶಾಪವಾಗಿ ಪರಿಣಮಿಸಿದೆ ಎಂದು ತಮ್ಮ ಅಳಲು ತೋಡಿಕೊಂಡರು.


ಈ ಹಿಂದೆ ಗಣಿಗಾರಿಕೆಯ ದುಷ್ಪರಿಣಾಮಗಳನ್ನು ಜಿಲ್ಲಾಧಿಕಾರಿಗಳೂ ಸೇರಿದಂತೆ ಸಂಬಂಧಪಟ್ಟ ಎಲ್ಲ ಮೇಲಾಧಿಕಾರಿಗಳೂ ಗಮನಿಸಿದ್ದಾರೆ. ಈಗಿರುವ ಗಣಿಗಾರಿಕೆಗೆ ಸರ್ಕಾರವೇ ಮಾನ್ಯತೆ ನೀಡಿದ್ದು ಇನ್ನೂ ನಾಲ್ಕು ವರ್ಷ ಪರವಾನಿಗೆ ಇರುವುದರಿಂದ ಅಲ್ಲಿಯವರೆಗೆ ಗಣಿ ನಿಯಮಾನುಸಾರ ಜನರಿಗೆ ತೊಂದರೆಯಾಗದಂತೆ ಮುಂದುವರೆಸಲು ಗ್ರಾಮ ಒಪ್ಪಿದೆ. ಸಾಲದೆಂಬಂತೆ ಇಲ್ಲಿನ ಸನಂ 24ರಲ್ಲಿ ಇನ್ನೊಂದು ಕ್ವಾರೆ ಸಿಡಿಯಲು ಸಜ್ಜಾಗಿದೆ. ಇರುವ ಜಲಮೂಲ ರಕ್ಷಿತ ಅರಣ್ಯವೂ ಸೇರಿದಂತೆ ಹಲವಾರು ವೈವಿಧ್ಯವುಳ್ಳ ಜೀವಿಗಳೂ ನಾಶವಾಗುತ್ತವೆ. ಹಾಗಾಗಿ ಇಂತಹ ಯೋಜನೆ ಇಲ್ಲಿ ಕೂಡದು. ಹಠಾತ್‌ ನಡೆಸಲು ಮುಂದಾದರೆ ಇಡೀ ಗ್ರಾಮ, ಪರಿಸರ ಸಂಘಟನೆಗಳು ಒಟ್ಟಾಗಿ ಶಾಂತಿಯುತ ಹೋರಾಟಕ್ಕೆ ಸಜ್ಜಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮದ ಅಭಿವೃದ್ಧಿ, ಜನಸಾಮಾನ್ಯರಿಗೆ ದೊರಕುವ ಸರ್ಕಾರದ ಸೌಲಭ್ಯಗಳ ಲೋಪದೋಷಗಳು, ಗ್ರಾಮಕ್ಕೆ ತುರ್ತು ಅಗತ್ಯವಿರುವ ಸೌಕರ್ಯಗಳ ಕುರಿತಂತೆ ಚರ್ಚೆ ನಡೆದವು. ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದ ಕುರಿತಂತೆ ಪೂರ್ವಭಾವಿ ಮಾಹಿತಿ ನೀಡಲಾಯಿತು.


ಚಂದ್ರಗುತ್ತಿ ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀ, ಪಿಡಿಒ ನಾಗೇಂದ್ರಪ್ಪ, ತಾಪಂ ಜೀವವೈವಿಧ್ಯ ನಿರ್ವಹಣ ಸಮಿತಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ಎಸ್‌ಡಿಎ ರೇಖಾ, ಸದಸ್ಯ ಸಲೀಂ, ಡಿಇಒ ಮಂಜುನಾಥ, ಕರವಸೂಲಿಗಾರ ಸಂತೋಷ್‌, ಮಂಜು, ವಾಟರ್‌ಮನ್‌ ಹರ್ಷ, ಎಸ್‌ಡಿಎಂಸಿ ಅಧ್ಯಕ್ಷ ಮಂಜು, ಗ್ರಾಮ ಪ್ರಮುಖರು ಇದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!