‘ಚಂಪಾ’ರವರಿಗೆ ಅಭಿಮಾನಿಗಳಿಂದ ಭಾವಪೂರ್ಣ ಶ್ರದ್ಧಾಂಜಲಿ

0
131

ಚಿಕ್ಕಮಗಳೂರು: ಅನಾರೋಗ್ಯದಿಂದ ನಿಧನರಾದ ಕವಿ, ಸಾಹಿತಿ, ನಾಟಕಕಾರ ಹಾಗೂ ಕನ್ನಡದ ಪರ ಹೋರಾಟಗಾರ ಪ್ರೊ. ಚಂದ್ರಶೇಖರ ಪಾಟೀಲ ಅವರಿಗೆ ನಗರದ ಬಿಎಸ್‍ಪಿ ಕಚೇರಿಯಲ್ಲಿ ವಿವಿಧ ಪಕ್ಷ ಸಂಘಟನೆಗಳು ಮತ್ತು ಅಭಿಮಾನಿಗಳು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಚಂಪಾ ಅವರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪನಮನ ಸಲ್ಲಿಸಿದ ಮುಖಂಡರು ಮತ್ತು ಅಭಿಮಾನಿಗಳು ಕವಿಯ ಆತ್ಮಕ್ಕೆ ಶಾಂತಿಕೋರಿ ಒಂದು ನಿಮಿಷ ಮೌನಾಚರಣೆ ಮಾಡುವುದರೊಂದಿಗೆ ಚಂಪಾ ಅವರೊಂದಿಗಿನ ಒಡನಾಟ ಮತ್ತು ವಿಚಾರಧಾರೆಗಳನ್ನು ಮೆಲುಕು ಹಾಕಿದರು.

ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ರೈತಸಂಘದ ಮುಖಂಡ ಗುರುಶಾಂತಪ್ಪ, ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಲ್ಪಸಂಖ್ಯಾತ ವರ್ಗದ ಕವಿ ನಿಸಾರ್ ಅಹಮದ್ ಅವರನ್ನು ತೀವ್ರ ವಿರೋಧದ ನಡುವೆಯೂ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದವರು ಚಂದ್ರಶೇಖರ ಪಾಟೀಲರು ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಶ್ ಕ್ಯಾತನಬೀಡು ಮಾತನಾಡಿ, ಚಂಪಾ ಅವರೊಂದಿಗಿನ ತಮ್ಮ 30 ವರ್ಷಗಳ ಒಡನಾಟವನ್ನು ಸ್ಮರಿಸಿದರು. ಕನ್ನಡದ ಕಟ್ಟಾಳು ಚಂಪಾ ಅವರು ನಿಷ್ಟುರವಾದಿಗಳಾಗಿದ್ದರು. ಜಾತಿಯ ವಾಸನೆಯೂ ಅವರಲ್ಲಿರಲಿಲ್ಲ ಎಂದ ಅವರು, ಚಂಪಾ ಅವರ ಹೆಸರಿನಲ್ಲಿ ನಗರದಲ್ಲಿ ವಿಚಾರ ಸಂಕಿರಣ ನಡೆಸುವಂತೆ ಸಲಹೆ ಮಾಡಿದರು.

ಜಿಲ್ಲಾ ಕಸಾಪ ನಿಕಟ ಪೂರ್ವ ಕಾರ್ಯದರ್ಶಿ ಡಿ. ಎಂ. ಮಂಜುನಾಥಸ್ವಾಮಿ ಮಾತನಾಡಿ, ಬಂಡಾಯ ಸಾಹಿತ್ಯಕ್ಕೆ ಬಲತುಂಬಿದ ಬಾಹುಬಲಿ ಚಂಪಾ ಅವರು ರೈತ ಹೋರಾಟಕ್ಕೆ ಮತ್ತು ದಲಿತ ಹೋರಾಟಕ್ಕೆ ಶಕ್ತಿ ತುಂಬಿದವರು ಎಂದು ತಿಳಿಸಿದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ. ಟಿ. ರಾಧಾಕೃಷ್ಣ ಮಾತನಾಡಿ, ಸತ್ಯವನ್ನು ಪ್ರತಿಪಾದನೆ ಮಾಡಿದ ಧೀಮಂತ ಸಾಹಿತಿ ಚಂಪಾ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ ಎಂದು ಶೋಕಿಸಿದರು.

ಚಂಪಾ ಅವರ ಮಾತಿಗೂ ಮತ್ತು ಕೃತಿಗೂ ಯಾವುದೇ ವ್ಯತ್ಯಾಸವಿರಲಿಲ್ಲ, ನುಡಿದಂತೆ ನಡೆಯುತ್ತಿದ್ದ ಅವರು ಸಹೃದಯಿಯಾಗಿದ್ದರು. ಭಕ್ತಿ ಬಂಡಾರಿ ಬಸವಣ್ಣನವರ ನಿಜವಾದ ಅನುಯಾಯಿಯಾಗಿದ್ದರು ಎಂದು ಬಣ್ಣಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಜೆಡಿಎಸ್ ಮುಖಂಡ ಬೈರೇಗೌಡ, ಜಿಲ್ಲಾ ಸಹೋದರತ್ವ ಸಮಿತಿಯ ಅಧ್ಯಕ್ಷೆ ಕೆ. ಬಿ. ಸುಧಾ, ಬಿಎಸ್‍ಪಿ ತಾಲೂಕು ಅಧ್ಯಕ್ಷ ಹರೀಶ್, ಹುಣಸೆಮಕ್ಕಿ ಲಕ್ಷ್ಮಣ್, ದಯಾನಂದ್, ನಾಗೇಶ್ ನುಡಿನಮನ ಸಲ್ಲಿಸಿದರು.

ಬಿಎಸ್‍ಪಿ ಮುಖಂಡರಾದ ಕೆ. ಆರ್. ಗಂಗಾಧರ್, ನವೀನ್ ಇದ್ದರು

ಜಾಹಿರಾತು

LEAVE A REPLY

Please enter your comment!
Please enter your name here