ಚಿಕ್ಕಮಗಳೂರು ನಗರಸಭೆ ಬಜೆಟ್ ; ಸ್ವಚ್ಛತೆ, ಸೌಂದರ್ಯ, ಡಿಜಿಟಲೀಕರಣಕ್ಕೆ ಒತ್ತು

0
138

ಚಿಕ್ಕಮಗಳೂರು: 2022-23ನೇ ಸಾಲಿನ ನಗರಸಭೆ 37ನೇ ಆಯವ್ಯಯವನ್ನು ಶುಕ್ರವಾರ ನಗರಸಭೆ ಅಧ್ಯಕ್ಷ ವರಸಿದ್ಧಿವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಮಂಡನೆ ಮಾಡಲಾಯಿತು.

ಸರ್ವ ಸದಸ್ಯರ ಸಮ್ಮುಖದಲ್ಲಿ ಒಟ್ಟು ರೂ. 2.36 ಕೋಟಿಯ ಉಳಿತಾಯ ಬಜೆಟ್ ಮಂಡನೆ ಮಾಡಿದ್ದು. ಡಿಜಿಟಲ್ ಕ್ರಾಂತಿಯ ಭಾಗವಾಗಿ ನಗರಸಭೆಯ ಆಡಳಿತವನ್ನು ಸಂಪೂರ್ಣ ಪಾರದರ್ಶಕವಾಗಿಸುವ ಸಲುವಾಗಿ ನಗರಸಭೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಜನಹಿತ ಅಪ್ಲೀಕೇಷನ್ ರೂಪಿಸಲಾಗಿದೆ. ಪ್ರಸ್ತುತ ಸಾಲಿನಿಂದ ನಗರಸಭೆ ಎಲ್ಲಾ ತರಹದ ಪಾವತಿಗಳನ್ನು ಭಾರತ್ ಬಿಲ್ ಪೇಮೆಂಟ್ ಮೂಲಕ ಮುಖಾಂತರ ನಿರ್ವಹಿಸುವ ಯೋಜನೆ ರೂಪಿಸಲಾಗಿದೆ ಎಂದು ಅಧ್ಯಕ್ಷರು ಬಜೆಟ್‍ನಲ್ಲಿ ತಿಳಿಸಿದರು.

2022-23ನೇ ಸಾಲಿಗೆ ನಗರೋತ್ಥಾನ ಹಂತ 4 ರ ಯೋಜನೆ ಅಡಿಯಲ್ಲಿ ರೂ. 40 ಕೋಟಿ ಅನುದಾನವನ್ನು ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕ್ರಿಯಾ ಯೋಜನೆ ರೂಪಿಸಲಾಗಿದೆ, ಎಸ್‍ಎಫ್‍ಸಿ ವಿಶೇಷ ಅನುದಾನದಡಿಯಲ್ಲಿ ನಗರದ ಎಲ್ಲಾ ರಸ್ತೆಗಳನ್ನು ಡಾಂಬರೀಕರಣಗೊಳಿಸಲು ರೂ 10 ಕೋಟಿ ಮೀಸಲಿರಿಸಿ ಟೆಂಡರ್ ಕರೆಯಲಾಗಿದೆ. ಎಂ. ಜಿ ರಸ್ತೆಯಲ್ಲಿ ನಗರಸಭೆಯ ಹಿಂದೂ ಮುಜಾಫೀರ್‍ಖಾನ್ ಜಾಗದಲ್ಲಿ ಹೈಟೆಕ್ ವಾಣಿಜ್ಯ ಸಂರ್ಕಿರ್ಣ ಹಾಗೂ ಪಾರ್ಕಿಂಗ್ ಲಾಟ್ ನಿರ್ಮಿಸಲು ಉದ್ದೇಶಿಸಲಾಗಿದೆ ಅದಕ್ಕಾಗಿ ರೂ 10 ಕೋಟಿಗಳ ಡಿಪಿಆರ್ ತಯಾರಿಸಲಾಗುತ್ತಿದೆ ಈ ಮೂಲಕ ನಗರಸಭೆ ಆದಾಯ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.

ಈ ಬಾರಿಯ ಆಯವ್ಯಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ ರೂ. 105 ಲಕ್ಷವನ್ನು ಹಾಗೂ ಇತರೆ ಬಡವರ್ಗದವರ ಅಭಿವೃದ್ಧಿಗಾಗಿ ರೂ. 35 ಲಕ್ಷ ಹಾಗೂ ವಿಶೇಷ ಚೇತನರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ರೂ. 15 ಲಕ್ಷ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ರಸ್ತೆ, ಪಾರ್ಕ್‍ಗಳ ಒತ್ತುವರಿ ಮಾಡಿಕೊಂಡವರ ಜಾಗವನ್ನು ಖುಲ್ಲಾ ಮಾಡಿಸಲಾಗುತ್ತಿದೆ. 94 ಸಿ.ಸಿ ಅಡಿಯಲ್ಲಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಂಡವರಿಗೆ ಸ್ವಾಮ್ಯ ಪತ್ರ ನೀಡಲು ಚಿಂತನೆ ನಡೆಸಲಾಗಿದೆ. ಇನ್ನು ನಗರದ 35 ವಾರ್ಡ್‍ಗಳಿಗೆ ಈ ಬಾರಿಯಲ್ಲಿ ಎಲ್ಲಾ ರಸ್ತಗಳಿಗೆ ನಾಮಫಲಕ ಅಳವಡಿಕೆ ಜತೆಗೆ ಅಗತ್ಯವಿರುವ ಕಡೆಗಳಲ್ಲಿ 10 ಶುದ್ದ ಗಂಗಾ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.

ನಗರದ ಬೇಲೂರು ರಸ್ತೆ ಹಾಗೂ ವಿಜಪುರದ ಆದಿಭೂತಪ್ಪ ದೇವಸ್ಥಾನದ ನಗರಸಭೆ ಜಾಗದಲ್ಲಿ ಫುಡ್‍ಕೋರ್ಟ್ ನಿರ್ಮಿಸಲು ಯೋಜನೆ ರೂಪಿಸಿದ್ದು ಅದಕ್ಕಾಗಿ ರೂ. 1.50 ಕೋಟಿ ಡಿಪಿಆರ್ ತಯಾರಿಸಲಾಗಿದೆ. ಬೈಪಾಸ್ ರಸ್ತೆಯಲ್ಲಿಯೂ ಸಿಡಿಎ ಸಹಯೋಗದೊಂದಿಗೆ ಫುಡ್ ಕೋರ್ಟ್ ನಿರ್ಮಿಸುವ ಯೋಜನೆ ಇದೆ ಎಂದು ತಿಳಿಸಿದರು.

ಡೆಲ್ಟಾ ಯೋಜನೆ ಅಡಿಯಲ್ಲಿ ನಗರದ ಎಂ. ಜಿ ರಸ್ತೆ, ಕೆ. ಎಂ ರಸ್ತೆ, ಹಾಗೂ ಬೈಪಾಸ್ ಒಳಗೊಂಡಂತೆ ಪ್ರಮುಖ ರಸ್ತೆಗಳಲ್ಲಿ ಶಾಲಾ ಮಕ್ಕಳಿಗೆ ಸೈಕಲ್ ಸವಾರರಿಗೆ ಸುಲಲಿತವಾಗಿ ಸಂಚರಿಸಲು ಅನುಕೂಲವಾಗುವಂತೆ ಸೈಕಲ್ ಪಥ ನಿರ್ಮಾಣ, ಜತೆಗೆ ರಸ್ತೆ ಬದಿಯಲ್ಲಿ ಅಲಂಕೃತ ಬೀದಿ ದೀಪಗಳ ಅಳವಡಿಸುವ ಯೋಜನೆ ಹೊಂದಾಗಿದೆ ಎಂದರು.

ನಗರದ 8 ಕಡೆಗಳಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಗೋವುಗಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ಗೋಶಾಲೆಗಳಿಗೆ ಮೇವು ಯೋಜನೆಗಾಗಿ ರೂ. 12 ಲಕ್ಷ ಮೀಸಲಿರಿಸಲಾಗಿದೆ. ನಗರದಲ್ಲಿ ಇರುವ ಹಿಂದು ರುದ್ರ ಭೂಮಿಯ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ. ನಗರದಲ್ಲಿರುವ ಅಂಗನವಾಡಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಪೌರಕಾರ್ಮಿಕರು ದಿನನಿತ್ಯದ ಬೆಳಗಿನ ಉಪಹಾರಕ್ಕೆ ನೀಡಲಾಗುತ್ತಿದ್ದು 20 ರೂಗಳನ್ನು 35 ರೂ ಹೆಚ್ಚು ಮಾಡಲಾಗಿದೆ. ಹೆಚ್ಚಿನ ಸುರಕ್ಷತೆಗಾಗಿ ಮಾಸ್ಕ್, ಗ್ಲೌಸ್, ಹಾಗೂ ಗಂಬೂಟ್ಸ್ ಸೇರಿದಂತೆ ಅಗತ್ಯ ಪರಿಕರಗಳನ್ನು ನೀಡಲಾಗುವುದು. ಸ್ಲಂ ಬೋರ್ಡ್‍ನಿಂದ ಈಗಾಗಲೇ 5 ಲಕ್ಷ ವೆಚ್ಚದಲ್ಲಿ 280 ಮನೆಗಳು ನಿರ್ಮಾಣ ಕಾರ್ಯ ಆರಂಭಗೊಂಡಿದ್ದು ಲ್ಯಾಂಡಿ ತಲಾಬ್, ಶಾಂತಿನಗರ ಸೇರಿದಂತೆ ಕೆಲವೆಡೆ ವಾಸಯೋಗ್ಯ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.

ನಗರಸಭೆ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೂರದೃಷ್ಟಿಯುಳ್ಳ ಬಜೆಟ್ ಮಂಡಿಸಲಾಗಿದೆ ಆಸ್ತಿ ತೆರಿಗೆಯಿಂದ 900 ಲಕ್ಷ, ವಾಣಿಜ್ಯ ಮಳಿಗೆ ಬಾಡಿಗೆ ಬಾಬ್ತು 200 ಲಕ್ಷ ಕಟ್ಟಡ ಪರವಾನಗಿ ಬಾಬ್ತು 75 ಲಕ್ಷ ಅಭಿವೃದ್ಧಿ ಶುಲ್ಕ 100 ಲಕ್ಷ ಗುರಿ ಹೊಂದಲಾಗಿದೆ. ನಗರಸಭೆಯ ಆಡಳಿತವನ್ನು ಪಾರದರ್ಶಕವಾಗಿಸುವುದರ ಜತೆಗೆ ಮೂಲಭೂತ ಸೌಕರ್ಯಕ್ಕೆ ವಿಶೇಷ ಆದ್ಯತೆ ನೀಡಿ ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿಸುವ ದೊಡ್ಡ ನಿರ್ಣಯವನ್ನು ಬಜೆಟ್‍ನಲ್ಲಿ ಕೈಗೊಳ್ಳಲಾಗಿದೆ ಎಂದು ಘೋಷಿಸಿದರು.

ಪ್ರತಿಧ್ವನಿಸಿದ ಧ್ವನಿವರ್ಧಕ ವಿಚಾರ:

ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು, ಹಿರಿಯರು, ರೋಗಿಗಳಿಗೆ ತೊಂದರೆ ಆಗುವ ನಿಟ್ಟಿನಲ್ಲಿ ಅಕ್ರಮವಾಗಿ ನಿಯಮಬಾಹಿರವಾಗಿ ನಗರಸಭೆ ಅನುಮತಿ ಇಲ್ಲದೇ ಕೋರ್ಟ್ ಆದೇಶಕ್ಕೆ ವಿರುದ್ದವಾಗಿ ತಲೆ ಎತ್ತುತ್ತಿರುವ ಚರ್ಚ್, ಮಸೀದಿ, ಪ್ರಾರ್ಥನಾ ಮಂದಿರಗಳಲ್ಲಿ ಮೈಕ್ ಬಳಕೆ ಮಾಡದಂತೆ ಈ ಬಾರಿಯಲ್ಲಿ ನಿಷೇಧಕ್ಕೆ ಕ್ರಮವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ದೇವಾಲಯಗಳಿಗೂ ಅನ್ವಯವಾಗುವಂತೆ ರೂಪಿಸಿ ಎಂದು ಒತ್ತಾಯಿಸಿದರು.

ಎಐಟಿ ವೃತ್ತದಲ್ಲಿ ಬಾಲ ಗಂಗಾಧರನಾಥ ಸ್ವಾಮೀಜಿಯವರ ಪ್ರತಿಮೆ ಸ್ಥಾಪನೆಗೆ ಬಜೆಟ್‍ನಲ್ಲಿ ಅನುದಾನ ಮೀಸಲಿಡಲು ಸದಸ್ಯ ಟಿ. ರಾಜಶೇಖರ್ ಆಗ್ರಹಿಸಿದರು. ಪ್ಲಾಸ್ಟಿಕ್ ನಿಷೇಧದ ಬಗ್ಗೆ ನಿರ್ಣಯ ಕೈಗೊಂಡಿರುವುದು ಉತ್ತಮ ವಿಚಾರ ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳ್ಳುವಂತೆ ಕ್ರಮವಹಿಸಲು ಸಲಹೆ ನೀಡಿದರು.

ಮತ್ತೋರ್ವ ಸದಸ್ಯ ಎ.ಸಿ. ಕುಮಾರ್ ನಗರಸಭೆ ಅನುದಾನ ನಿಧಿಯನ್ನು ಅನ್ಯಕಾರ್ಯಗಳಿಗೆ ದುರ್ಬಳಕೆ ಮಾಡದೇ ನಗರದ ಅಭಿವೃದ್ಧಿಗೆ ಮೀಸಲಿಡಬೇಕು, ಕೆಲವೆಡೆ ಪಾರ್ಕ್‍ಗಳು ಒತ್ತುವರಿಯಾಗಿದ್ದು ಸರ್ವೆ ನಡೆಸಿ ಹದ್ದುಬಸ್ತಿನಲ್ಲಿಡಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಉಮಾದೇವಿಕೃಷ್ಣಪ್ಪ, ನಗರಸಭೆ ಪೌರಾಯುಕ್ತ ಬಿ. ಸಿ. ಬಸವರಾಜ್ ಸೇರಿದಂತೆ ಎಲ್ಲಾ ವಾರ್ಡ್‍ಗಳ ಸದಸ್ಯರು, ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು

ಜಾಹಿರಾತು

LEAVE A REPLY

Please enter your comment!
Please enter your name here