ಚುನಾಯಿತ ಸದಸ್ಯರ ಜೊತೆಗೆ ನಾಮನಿರ್ದೇಶಿತ ಸದಸ್ಯರುಗಳ ಸಹಕಾರವೂ ಅಗತ್ಯ: ವೇಣುಗೋಪಾಲ್

0
109

ಚಿಕ್ಕಮಗಳೂರು: ನಗರದ ಅಭಿವೃದ್ದಿಗೆ ನಗರಸಭೆ ಚುನಾಯಿತ ಸದಸ್ಯರ ಜೊತೆಗೆ ನಾಮ ನಿರ್ದೇಶಿತ ಸದಸ್ಯರುಗಳ ಸಹಕಾರವೂ ಅಗತ್ಯ ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಿಳಿಸಿದರು.

ನಗರಸಭೆ ಸಭಾಂಗಣದಲ್ಲಿ ಐದು ಮಂದಿ ಸರ್ಕಾರದ ನಾಮನಿರ್ದೇಶಿತ ಸದಸ್ಯರುಗಳನ್ನು ಗೌರವಿಸಿ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ಅಭಿವೃದ್ಧಿಗೆ ಕೈಜೋಡಿಸಬೇಕು. ಪಕ್ಷ ಅವರನ್ನು ಗುರುತಿಸಿ ಜವಾಬ್ಧಾರಿ ಸ್ಥಾನವನ್ನು ನೀಡಿದೆ. ಅದನ್ನು ಉತ್ತಮವಾಗಿ ನಿಭಾಯಿಸಿ ಪಕ್ಷಕ್ಕೆ ಮತ್ತು ನಗರಸಭೆಗೆ ಒಳ್ಳೆಯ ಹೆಸರನ್ನು ತರಬೇಕು ಎಂದು ಮನವಿ ಮಾಡುತ್ತೇವೆ ಎಂದರು.

ನಗರದಲ್ಲಿ ಸಾಕಷ್ಟು ಅಭಿವೃದ್ಧಿ, ಸ್ಚಚ್ಛತಾ ಕಾರ್ಯಗಳು ನಡೆಯುತ್ತಿವೆ. ವಿರೋಧ ಪಕ್ಷದ ಸದಸ್ಯರು ವಿರೋಧಿಸಲೆಂದೇ ಇದ್ದವರ ರೀತಿ ವರ್ತಿಸುತ್ತಿದ್ದಾರೆ. ನಗರದ ಅಭಿವೃದ್ಧಗಿ ಸ್ಪಂದಿಸಬೇಕು ಎಂದು ಹಿಂದೆಯೇ ಮನವಿ ಮಾಡಿದ್ದೆವು. ಅದಕ್ಕೆ ಸ್ಪಂದಿಸದೆ ಕೇವಲ ವಿರೋಧ ಮಾಡುವ ರಾಜಕಾರಣಕ್ಕೆ ಸೀಮಿತರಾಗುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಉತ್ತಮ ಕೆಲಸಗಳನ್ನು ಮಾಡಿದ ಕಾರಣಕ್ಕೆ ಐದುನೇ ಬಾರಿಗೆ ಜನರು ನಗರಸಭೆಯಲ್ಲಿ ಅಧಿಕಾರ ನೀಡಿದ್ದಾರೆ. ಆದರೆ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಮತ್ತು ಉತ್ತಮ ಹೆಸರು ಬರುತ್ತಿರುವುದನ್ನು ಸಹಿಸಲಾಗದೆ ಈ ರೀತಿ ಅಪಪ್ರಚಾರ ಮಾಡಿ ನಗರಸಭೆ ಹೆಸರು ಹಾಳುಮಾಡುವ ಕೆಲಸ ಮಾಡುತ್ತಿದ್ದಾರೆ. ಇದನ್ನು ದೇವರೂ ಮೆಚ್ಚುವುದಿಲ್ಲ. ಜನರೂ ಮೆಚ್ಚುವುದಿಲ್ಲ. ಈ ರೀತಿ ವರ್ತನೆಗಳಿಂದಾಗಿ ಅವರು ಆಯ್ಕೆಯಾಗಿರುವ ವಾರ್ಡ್‍ಗಳಲ್ಲೇ ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದರು.

ನನ್ನ ಮೇಲೆ ಹಾಗೂ ಪೌರಾಯುಕ್ತರ ಮೇಲೆ ಸುಳ್ಳು ಕೇಸು ದಾಖಲಿಸಲಾಗಿದೆ. ಇದರಲ್ಲಿ ಹೊರಗಿನ ನಾಯಕರುಗಳ ಕೈವಾಡವೂ ಇದೆ. ನಗರಸಭೆಗೆ ಕೆಟ್ಟ ಹೆಸರು ತರುವುದಷ್ಟೇ ಇದರ ಉದ್ದೇಶ. ಈ ರೀ ಎಷ್ಟೇ ಪ್ರಯತ್ನ ನಡೆಸಿದರೂ ಜನರ ಬೆಂಬಲ ನಮಗಿದೆ. ಒಳ್ಳೆಯ ಕೆಲಸವನ್ನು ಮುಂದುವರಿಸುತ್ತೇವೆ ಎಂದರು.

ನಾಮ ನಿರ್ದೇಶಿತ ಸದಸ್ಯರುಗಳಾದ ದಂಟರಮಕ್ಕಿ ಮೋಹನ್, ಮಲ್ಲೇಶ್, ರಾಬರ್ಟ್, ರವಿ ಹಾಗೂ ಪುಷ್ಪ ಮೋಹನ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಚುನಾಯಿತ ಸದಸ್ಯರುಗಳಾದ ಮಧುಕುಮಾರ ರಾಜ್ ಅರಸ್, ವಿಫುಲ್ ಕುಮಾರ್, ಅಮೃತೇಶ್, ಕವಿತಾ ಶೇಖರ್, ಮಣಿಕಂಠ, ಆಶ್ರಯ ಸಮಿತಿ ಸದಸ್ಯ ರಾಜೇಶ್, ಆಯುಕ್ತ ಬಸವರಾಜ್ ಹಾಗೂ ಆರ್ ಒ ಬಸವರಾಜ್ ಈ ಸಂದರ್ಭದಲ್ಲಿ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here