ಚುನಾವಣಾಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು: ಜಿಲ್ಲಾಧಿಕಾರಿ ಕೆ.ಎನ್. ರಮೇಶ್

0
322

ಚಿಕ್ಕಮಗಳೂರು: ಚುನಾವಣಾ ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಹೇಳಿದರು.

ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಚುನಾವಣೆ ಅಂಗವಾಗಿ ರಿಟರ್ನಿಂಗ್ ಅಧಿಕಾರಿಗಳಿಗೆ ಹಾಗೂ ಸಹಾಯಕ ರಿಟರ್ನಿಂಗ್ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಅನುಸಾರ ಈ ವರ್ಷದ ಮೇ ನಲ್ಲಿ ಅವಧಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳು ಮತ್ತು ವಿವಿಧ ಕಾರಣಗಳಿಂದ ಖಾಲಿ ಇರುವ 37 ಗ್ರಾಮ ಪಂಚಾಯಿತಿಗಳಿಗೆ ಮಾರ್ಚ್ 29ರಂದು ಚುನಾವಣೆ ನಿಗಧಿಯಾಗಿದೆ ಎಂದು ತಿಳಿಸಿದರು.

ಮಾರ್ಚ್ 15 ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ 19 ಕೊನೆಯ ದಿನವಾಗಿದ್ದು, 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಮಾರ್ಚ್ 22 ಕಡೆಯ ದಿನವಾಗಿದೆ ಎಂದು ಹೇಳಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಸಲ್ಲಿಸುವ ನಾಮಪತ್ರಗಳಲ್ಲಿ ದೋಷಪೂರಿತ ಕಂಡು ಬಂದಲ್ಲಿ ಅವರಿಗೆ ತಿಳಿ ಹೇಳುವ ಮೂಲಕ ಅವರ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಅಧಿಕಾರಿಗಳು ಕ್ರಮವಹಿಸುವಂತೆ ಸೂಚಿಸಿದರು.

ನಾಮಪತ್ರ ಸ್ವೀಕಾರ ಮಾಡಿಕೊಂಡಾಗ ಚುನಾವಣಾ ಅಧಿಕಾರಿಗಳು ಸಮಯದ ನಿಗಧಿಯನ್ನು ಹಾಗೂ ಸೀಲ್ ನಂಬರನ್ನು ಕಡ್ಡಾಯವಾಗಿ ನಮೂದಿಸಿಕೊಳ್ಳಬೇಕು. ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾರ್ಚ್ 15 ರಿಂದ 31ರವರೆಗೆ ನೀತಿ ಸಂಹಿತೆ ಜಾರಿಯಲ್ಲಿ ಇರಲಿದೆ ಎಂದರು.

ಡಯಟ್ ಉಪನ್ಯಾಸಕರಾದ ಕೆ.ಜಿ.ಕಾಂತರಾಜ್, ಪ್ರಶಾಂತ್ ಅವರು ಚುನಾವಣೆ ಸಂಬಂಧ ರಿಟರ್ನಿಂಗ್ ಅಧಿಕಾರಿಗಳಿಗೆ ಹಾಗೂ ಸಹಾಯಕ ರಿಟರ್ನಿಂಗ್ ಅಧಿಕಾರಿಗಳಿಗೆ ಉಪನ್ಯಾಸ ನೀಡಿದರು.

ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಡಾ.ಹೆಚ್,ಎಲ್.ನಾಗರಾಜ್, ಚಿಕ್ಕಮಗಳೂರು ತಹಸೀಲ್ದಾರ್ ಕಾಂತರಾಜ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here