ಜಗತ್ತಿನಲ್ಲಿ ಶಾಂತಿ ನೆಲೆಸಲು ಮಹಾವೀರರ ಬೋಧನೆಗಳು ಅಗತ್ಯ: ಶಾಸಕ ಸಿ.ಟಿ.ರವಿ

0
130

ಚಿಕ್ಕಮಗಳೂರು: ಜಗತ್ತಿಗೆ ಮಹಾವೀರರ ಬೋಧನೆಗಳು ಅಗತ್ಯವಾಗಿದ್ದು, ಆಗ ಮಾತ್ರ ಜಗತ್ತು ಯುದ್ಧದಿಂದ ಮುಕ್ತವಾಗಿ ಶಾಂತಿ ನೆಲೆಸುತ್ತದೆ ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಟಿ.ರವಿ ಹೇಳಿದರು.

ಅವರು ಜಿಲ್ಲಾಡಳಿತದ ವತಿಯಿಂದ ಗುರುವಾರ ತೇರಾಪಂಥ್ ಭವನದಲ್ಲಿ ಹಮ್ಮಿಕೊಳ್ಳಲಾದ ಭಗವಾನ್ ಮಹಾವೀರ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಜಗತ್ತಿಗೆ ಜ್ಞಾನದ ಬೆಳಕು, ಸದ್ವಿಚಾರಗಳನ್ನು ಬೋಧಿಸಲೆಂದೇ ಮಹಾವೀರರ ಜನನವಾಗಿದ್ದು, ಅಹಿಂಸೆ ಧರ್ಮದ ಮೂಲ ತಿರುಳು ಎಂದು ಅವರು ಬೋಧಿಸಿದರು. ಕೈವಲ್ಯ ಜ್ಞಾನವನ್ನು ಗಳಿಸಿಕೊಂಡು ಅದನ್ನು ಸಮಾಜಕ್ಕೆ ಬೋಧಿಸಿ, ಸಮಾಜದಲ್ಲಿನ ಪ್ರತಿಯೊಂದು ಜೀವಿಯನ್ನೂ ಪ್ರೀತಿಸಬೇಕು ಎನ್ನುವ ಸಂದೇಶ ಸಾರಿದ ಮಹಾವೀರ ಅಹಿಂಸೆಯನ್ನು ಬೋಧಿಸಿದರು ಎಂದು ಹೇಳಿದರು.

ಜಿನನಾಗುವುದು ಸಾಮಾನ್ಯ ಸಂಗತಿಯಲ್ಲ. ನೂರಾರು ಕೋಟಿಯಲ್ಲಿ ಒಬ್ಬರು ಜಿನರಾಗಲು ಸಾಧ್ಯ ಅಂತಹ ಮಹಾನ್ ತೀರ್ಥಂಕರ ಮಹಾವೀರ ಎಂದರು.

ಜಗತ್ತಿಗೆ ಭಾರತ ಕೊಟ್ಟಿರುವಷ್ಟು ಕೊಡುಗೆಯನ್ನು ಬೇರೆ ಯಾವ ದೇಶವೂ ನೀಡಿಲ್ಲ. ಅದಕ್ಕಾಗಿ ಅದನ್ನು ಕರ್ಮಭೂಮಿ, ಜ್ಞಾನ ಭೂಮಿ ಧರ್ಮ ಭೂಮಿ ಎಂದು ಕರೆಯಲಾಗುತ್ತದೆ. 24ನೇ ತೀರ್ಥಂಕರ ಮಹಾವೀರರು ಜನಿಸಿದ ಪುಣ್ಯಭೂಮಿ ಭಾರತ ಎಂದರು.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ಅಹಿಂಸೆ, ಸತ್ಯ, ಧರ್ಮ, ಅಪರಿಗ್ರಹ ಮುಂತಾದ ಮಹಾವೀರರ ಬೋಧನೆಗಳೂ ಇಂದಿಗೂ ಪ್ರಸ್ತುತವಾಗಿದ್ದು, ಮಾನವರು ದುಃಖ, ಹಿಂಸೆಗೆ ಉತ್ತರ ಹುಡುಕಬೇಕಾದರೆ ಏನು ಮಾಡಬೇಕು ಎನ್ನುವ ಸಂದೇಶವನ್ನು ಸಾರಿದರು ಎಂದರು.

ಚಿಕ್ಕಮಗಳೂರು ಜಿಲ್ಲಾ ಜೈನ ಸಂಘದ ಅಧ್ಯಕ್ಷ ಕಾಂತಿಲಾಲ್ ಜೈನ್ ಮಾತನಾಡಿ, ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಮಹಾವೀರರ ಬೋಧನೆಗಳು ದಾರಿದೀಪವಾಗುತ್ತವೆ ಎಂದರು.

ಚಿಕ್ಕಮಗಳೂರು ನಗರಸಭೆಯ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಎಚ್, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಮೇಶ ಸಿ ಹಾಗೂ ಜೈನ ಸಂಘದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here