ಜನವಿರೋಧಿ ನೀತಿ ಮತ್ತು ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

0
196

ಶಿಕಾರಿಪುರ: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ ಮತ್ತು ಅಡುಗೆ ಅನಿಲ ಸಿಲಿಂಡರ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ರಾಜ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರ ಸೂಚನೆ ಮೇರೆಗೆ ಶಿಕಾರಿಪುರ ತಾಲ್ಲೂಕಿನಲ್ಲಿಯೂ ಸಹ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ವತಿಯಿಂದ ಪಟ್ಟಣದ ವಿವಿಧ ಭಾಗಗಳಲ್ಲಿ ಮೆರವಣಿಗೆ ಮಾಡುವುದರ ಮೂಲಕ ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ್ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಿನೇ ದಿನೇ ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ (ಗ್ಯಾಸ್ ಸಿಲಿಂಡರ್) ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿವೆ. ಇದು ಜನಸಾಮಾನ್ಯರಿಗೆ ಅರ್ಥವಾಗುವದನ್ನು ಅರಿತ ಬಿಜೆಪಿ ಸರ್ಕಾರ ಮತ್ತು ಆ ಪಕ್ಷದ ಮುಖಂಡರುಗಳು, ಜನರಲ್ಲಿ ಈ ಬೆಲೆ ಏರಿಕೆಯನ್ನು ಕಡಿಮೆ ಮಾಡಲು ಮುಂದಾಗದೇ ಅದನ್ನು ಮರೆಮಾಚಿಸುವ ಉದ್ದೇಶದಿಂದ ಜಾತಿ ಜಾತಿಗಳಲ್ಲಿ, ಧರ್ಮ ಧರ್ಮಗಳಲ್ಲಿ ವಿಷಬೀಜ ಬಿತ್ತುವ ಮೂಲಕ ದೇಶದ ಜನತೆಯಲ್ಲಿ ಜಗಳ ಹೊಡೆದಾಟ ನಡೆಸುವುದರ ಜೊತೆಗೆ ಕೊಲೆ ಪ್ರಕರಣಗಳು ಹೆಚ್ಚಿಸಲು ಕಾರಣೀಭೂತರಾಗುವುದಲ್ಲದೇ, ದೇಶವನ್ನೇ ಅಲ್ಲೋಲ ಕಲ್ಲೋಲ ಸ್ಥಿತಿಗೆ ತರಲು ಯತ್ನಿಸುತ್ತಿದ್ದಾರೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಂದನಂತರ ರೈತರಿಗೆ ಕೃಷಿ ಕಾರ್ಮಿಕರಿಗೆ ಯಾವುದೇ ರೀತಿಯ ಅನುಕೂಲವಾಗುವ ಹಾಗೆ ಯೋಜನೆಗಳನ್ನು ಜಾರಿಗೆ ತಂದಿಲ್ಲ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ನಿಗದಿ ಪಡಿಸದೇ, ರೈತರ ಹಿತ ಕಾಪಾಡುವುದುಕ್ಕಿಂತ ತಮ್ಮ ಹಿತ ಕಾಯ್ದುಕೊಳ್ಳುವುದೇ ಅವರಿಗೆ ಹೆಚ್ಚಾಗಿದೆ. ಇತ್ತೀಚೆಗೆ ಬಿಜೆಪಿ ಪಕ್ಷದ ರಾಜ್ಯ ಸರ್ಕಾರದ ಸಚಿವರಾದ ಎಂ ಟಿ ಬಿ ನಾಗರಾಜ್ ರವರೇ ವಿಧಾನಸಭೆಯಲ್ಲಿ ಚರ್ಚಾ ಸಮಯದಲ್ಲಿ ರಾಜ್ಯದಲ್ಲಿ ವಿವಿಧ ಕಾರಣಗಳಿಂದ 750 ಕ್ಕೂ ಅಧಿಕ ಕಾರ್ಖಾನೆಗಳು ಮುಚ್ಚಿವೆ ಎಂದು ಸ್ವ ಪಕ್ಷದವರೇ ಹೇಳಿಕೊಳ್ಳುವ ಕೆಟ್ಟ ಪರಿಸ್ತಿತಿ ರಾಜ್ಯ ಸರ್ಕಾರಕ್ಕೆ ಬಂದಿದೆ. ಸಚಿವರಿಗೆ ಈಬಗ್ಗೆ ಕಾರಣ ನೀಡಲು ಸಾಧ್ಯವಾಗಲಿಲ್ಲ ಕಾರಣ ಅವರು ಮಾತನಾಡಿದ್ದು ತಮ್ಮ ಸರ್ಕಾರದ ವಿರುದ್ಧವಾಗಿದೆ ಎಂದು ಮನಗಂಡು ಮಾತನ್ನು ಹೆಚ್ಚು ಮುಂದುವರಿಸದೇ, ಅವರ ಮಾತನ್ನು ಮೊಟಕುಗೊಳಿಸಿದ್ದಾರೆ. ಕಾರಣ ಇಷ್ಟೇ ರಾಜ್ಯದಲ್ಲಿ ಮುಚ್ಚಿರುವ ಕಾರ್ಖಾನೆಗಳಿಗೆ ತೆರಿಗೆ ವಿನಾಯಿತಿ ಮತ್ತು ಕಾರ್ಖಾನೆಗಳಿಗೆ ಅಗತ್ಯವಿರುವ ಸಂಪನ್ಮೂಲಗಳನ್ನು ನೀಡಿದ್ದರೆ ಕಾರ್ಖಾನೆಗಳು ಏಕೆ ಮುಚ್ಚುತ್ತಿದ್ದವು ಎಂದು ಪ್ರಶ್ನಿಸಿದರು.

ದೇಶದಲ್ಲಿ ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಬೆಲೆ ಏರಿಕೆ ಬಿಸಿ ಮುಟ್ಟಿಸಿದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯದೆ ಇರುವುದರಿಂದ ಇದನ್ನು ಗಮನಿಸುತ್ತಾ ಇರುವ ಜನರಿಗೆ ದಾರಿ ತಪ್ಪಿಸುವ ಉದ್ದೇಶದಿಂದ ಜಾತಿ ಜಾತಿಗಳಲ್ಲಿ ಧರ್ಮ ಧರ್ಮಗಳಲ್ಲಿ ಒಡಕು ಉಂಟು ಮಾಡಲು ಯತ್ನಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರೈತರ ಭೂಮಿ ಕಬಳಿಕೆಯ ಕಾಯ್ದೆಯನ್ನು ಜಾರಿಗೆ ತರಲು ಮುಂದಾರು, ಹಿಜಾಬ್ ವಿಚಾರ ಎತ್ತಿ ಹಿಂದೂ ಮುಸ್ಲಿಂ ಜಗಳ ಹಚ್ಚುವ ಕೆಲಸ, ಹಲಾಲ್ ವಿಚಾರ, ಟಿಪ್ಪು ಸುಲ್ತಾನನ ವಿಚಾರ ಹೀಗೆ ಹಲವಾರು ಪ್ರಕಾರಗಳಲ್ಲಿ ದೇಶದ ಜನತೆಯಲ್ಲಿ ಅಶಾಂತಿ ನಿರ್ಮಾಣಕ್ಕೆ ಕಾರಣರಾಗಿದ್ದಾರೆ.

ದೇಶದ ಅನೇಕ ವಿದ್ಯಾವಂತ ಯುವಕರು ಉದ್ಯೋಗಕ್ಕಾಗಿ ಮುಸ್ಲಿಂ ರಾಷ್ಟ್ರ ಸೇರಿದಂತೆ ಹಲವು ವಿದೇಶಗಳಲ್ಲಿ ನೆಲೆಸಿದ್ದಾರೆ. ನಮ್ಮ ದೇಶಕ್ಕೆ ಮುಸ್ಲಿಂ ರಾಷ್ಟ್ರಗಳಿಂದ ಪೆಟ್ರೋಲ್ ಡೀಸೆಲ್ ಬರುತ್ತಿದೆ ದೇಶದಲ್ಲಿ ಜಾತಿ ಜಾತಿಗಳಲ್ಲಿ ಧರ್ಮ ಧರ್ಮಗಳಲ್ಲಿ ಒಡಕು ಉಂಟು ಮಾಡುವುದನ್ನು ಗಮನಿಸುತ್ತಿರುವ ಮುಸ್ಲಿಂ ರಾಷ್ಟ್ರಗಳು ಪೆಟ್ರೋಲ್ ಡೀಸೆಲ್ ಸರಬುರಾಜು ಮಾಡುವುದನ್ನು ನಿಲ್ಲಿಸಿದರೆ ಏನು ಮಾಡಬೇಕು ಎಂದ ಅವರು, ಈ ರೀತಿ ಇರುವಾಗ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟದ ಹಾದಿ ಹಿಡಿಯಲಾಗುವುದು ಎಂದು ತಿಳಿಸಿದರು.

ನಂತರ ಮಾತನಾಡಿದ ಪುರಸಭಾ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಳ್ಳಿ ದರ್ಶನ್, ಶಾಲಾ ಕಾಲೇಜುಗಳಲ್ಲಿ ಪ್ರಾರ್ಥನಾ ಸಮಯದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಪ್ರಾರ್ಥನೆಯೊಂದಿಗೆ ಆರಂಭವಾಗುವ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳಿಗೆ ಓದು ಬರಹ ಕಲಿಕೆಯ ಬದಲು, ಅಣ್ಣ ತಮ್ಮರವರಂತಿರುವವರಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಎಂಬ ಭಾವನೆಗಳನ್ನ ಬಿತ್ತುವ ಕೆಲಸ ನಡೆಯುತ್ತಿದೆ. ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದು ಈಗಾಗಲೇ ಏಳೆಂಟು ವರ್ಷ ಕಳೆದರೂ ದೇಶದ ಅಭಿವೃದ್ಧಿ ಬಗ್ಗೆ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ. ಒಂದು ವೇಳೆ ರಾಜ್ಯದಲ್ಲಿ ಚುನಾವಣೆ ಬಂತೆಂದರೆ, ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಬೆಲೆ ಏರಿಕೆಯಿಂದ ಜನ ಬೇಸರವಾಗಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಬಿಜೆಪಿ ಪಕ್ಷವು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಅರಿತ ಬಿಜೆಪಿ ಪಕ್ಷದವರು, ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮ ಎಂದು ಜಾತಿ ಜಾತಿಗಳಲ್ಲಿ ಧರ್ಮ ಧರ್ಮಗಳಲ್ಲಿ ಒಡಕು ಉಂಟು ಮಾಡಲು ಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಗೋಣಿ ಪ್ರಕಾಶ್, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕ್ ನಾಯ್ಕ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ್, ಬಡಗಿ ಪಾಲಾಕ್ಷಪ್ಪ, ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ವೀರೇಶ್, ಸೇವಾದಳದ ಅಧ್ಯಕ್ಷ ಕಬೂತರ್, ಅಹ್ಮದ್ ಖಾನ್ ಸೇರಿದಂತೆ ಅನೇಕರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here