ಎನ್.ಆರ್.ಪುರ: ಜಮೀನಿಗೆ ಬಂದ ಆನೆಯನ್ನು ಓಡಿಸಲು ಹೋದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ ನಡೆದಿದೆ.
ಬೈರಾಪುರ ಗ್ರಾಮದ ನಿವಾಸಿ ಯಶವಂತ್ (50) ನಾಪತ್ತೆಯಾಗಿರುವ ವ್ಯಕ್ತಿಯಾಗಿದ್ದು ಕಳೆದ ರಾತ್ರಿ ಕಾಡಾನೆ ಬೈರಾಪುರ ಗ್ರಾಮದ ಅಂಚಿಗೆ ಬಂದಿತ್ತು. ಹೊಲ-ಗದ್ದೆಗಳ ಮೇಲೆ ದಾಳಿಗೆ ಮುಂದಾಗಿತ್ತು. ಈ ವೇಳೆ ಯಶವಂತ್ ಗ್ರಾಮದ ಹರೀಶ್ ಎಂಬವರ ಜೊತೆ ಆನೆಯನ್ನು ಓಡಿಸಲು ಹೋಗಿದ್ದರು. ಈ ವೇಳೆ ಆನೆ ಅಟ್ಟಿಸಿಕೊಂಡು ಬಂದ ಹಿನ್ನೆಲೆ ಹರೀಶ್ ಗ್ರಾಮದತ್ತ ಓಡಿ ಬಂದಿದ್ದಾರೆ. ಆದರೆ ಕತ್ತಲಲ್ಲಿ ಯಶವಂತ್ ಯಾವ ಕಡೆ ಹೋಗಿದ್ದಾರೆ ಎಂದು ಗೊತ್ತಾಗಿಲ್ಲ. ಇಂದು ಮಧ್ಯಾಹ್ನವಾದರೂ ಯಶವಂತ್ ಪತ್ತೆಯಾಗಿಲ್ಲ.
ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆ ಗಮನಕ್ಕೆ ತಂದರೂ ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ, ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಸ್ಥಳಿಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮಲೆನಾಡಿನ ಹಲವು ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಮೂಡಿಗೆರೆ ತಾಲೂಕಿನ ಗುತ್ತಿ, ಬೈರಾಪುರ, ಕೋಗಿಲೆ, ಸಾರಗೋಡು, ಮೂಲರಹಳ್ಳಿ, ಗೌಡಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಆನೆ ಹಾವಳಿಯಿಂದ ರೈತರು ಬೆಳೆಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ.