ಜಾತಿ, ಧರ್ಮ, ಪಕ್ಷ ಬಿಟ್ಟು ಹೋರಾಟ ಮಾಡೋಣ ನಮ್ಮ ಭೂಮಿಯ ಹಕ್ಕನ್ನು ನಾವು ಪಡೆಯೋಣ ; ನಿಟ್ಟೂರು ಮಠದ ರೇಣುಕಾನಂದಸ್ವಾಮಿ ಕರೆ

0
312

ಶಿವಮೊಗ್ಗ: ಜಾತಿ, ಧರ್ಮ, ಪಕ್ಷ ಬಿಟ್ಟು ಹೋರಾಟ ಮಾಡೋಣ, ನಮ್ಮ ಭೂಮಿಯ ಹಕ್ಕನ್ನು ನಾವು ಪಡೆಯೋಣ. ಈ ಹೋರಾಟ `ನಮ್ಮ ಭೂಮಿ ನಮ್ಮ ಹಕ್ಕು’ ಆಗಿದೆ. ಶರಾವತಿ ಹಿನ್ನೀರಿನ ಮುಳುಗಡೆ ರೈತರೆಲ್ಲರೂ ತಮಗೆ ಭೂಮಿ ಸಿಗುವವರೆಗೂ ಹೋರಾಟವನ್ನು ತೀವ್ರಗೊಳಿಸಬೇಕು ಎಂದು ಗರ್ತಿಕೆರೆ ನಿಟ್ಟೂರು ನಾರಾಯಣ ಗುರುಮಠದ ಶ್ರೀ ರೇಣುಕಾನಂದಸ್ವಾಮಿ ಕರೆ ನೀಡಿದರು.

ಅವರು ಮಂಗಳವಾರ ನಗರದ ಆಲ್ಕೊಳ ಸರ್ಕಲ್‌ನಲ್ಲಿ ಶಿವಮೊಗ್ಗ ಜಿಲ್ಲಾ ಶರಾವತಿ ಹಿನ್ನೀರಿನ ಮುಳುಗಡೆ ರೈತರ ಸಂಘ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯಕ್ಕೆ ಮತ್ತು ದೇಶಕ್ಕೆ ಬೆಳಕು ನೀಡಿದ ಶರಾವತಿ ಹಿನ್ನೀರಿನ ಮುಳುಗಡೆ ರೈತರು ಇಂದೂ ಕತ್ತಲಲ್ಲಿಯೇ ಇದ್ದಾರೆ. ನೂರಾರು ಕುಟುಂಬಗಳು ನಿರಾಶ್ರಿತವಾಗಿವೆ. ಇದುವರೆಗೂ ಸರ್ಕಾರ ಯಾವುದೇ ಭೂಮಿಯ ಹಕ್ಕನ್ನು ನೀಡಿಲ್ಲ. ಹಾಗಾಗಿ ಹೋರಾಟ ಅನಿವಾರ್ಯವಾಗಿದೆ. ಎಲ್ಲ ಹಿಂದುಳಿದವರೂ ಪಕ್ಷಬೇಧ ಮರೆತು ಹೋರಾಟ ಮಾಡೋಣ. ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಗೆಲುವು ನಿಶ್ಚಿತ ಎಂದರು.

ಸಿಗಂಧೂರು ಶ್ರೀ ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ರಾಮಪ್ಪ ಮಾತನಾಡಿ, ಶರಾವತಿ ಹಿನ್ನೀರಿನ ಮುಳುಗಡೆ ರೈತರು ಭೂಮಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಸುಮಾರು 166 ಹಳ್ಳಿಗಳು ಮುಳುಗಡೆಯಾಗಿವೆ. 60 ವರ್ಷಗಳಿಂದ ಮುಳುಗಡೆ ಸಂತ್ರಸ್ತರಿಗೆ ಜಮೀನು ಹಂಚಿಕೆಯಾಗಿಲ್ಲ. ಹಾಗಾಗಿ ಸರ್ಕಾರ ತಕ್ಷಣವೇ ಹಕ್ಕುಪತ್ರ ನೀಡಬೇಕು. ನಮಗಂತೂ ಹೋರಾಟ ಮಾಡಿ, ಜೀವನವೇ ಸವೆದುಹೋಗಿದೆ. ಇನ್ನೇನು ಸಾಯುವುದು ಬಾಕಿ ಉಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಸಾಗರದ ತೀ.ನಾ. ಶ್ರೀನಿವಾಸ್ ಮಾತನಾಡಿ, ಸುಮಾರು 166 ಗ್ರಾಮಗಳ 1.06 ಲಕ್ಷ ಎಕರೆಗೂ ಹೆಚ್ಚು ಭೂಮಿ ಜಲಾಶಯಕ್ಕೆ ಹೋಗಿದೆ. 1958ರ ನಿರ್ಣಯದಂತೆ ನಿರಾಶ್ರಿತರ ಕುಟುಂಬಗಳಿಗೆ 9.6 ಸಾವಿರ ಎಕರೆ ಜಮೀನನ್ನು ಡಿನೋಟಿಫಿಕೇಷನ್ ಮಾಡಿರುತ್ತಾರೆ. ಆದರೆ, ಜಮೀನು ಇನ್ನೂ ಹಂಚಿಕೆಯಾಗಿಲ್ಲ. ಹಕ್ಕುಪತ್ರ ನೀಡಿಲ್ಲ. ಇದರಿಂದ ನಿರಾಶ್ರಿತ ಕುಟುಂಬಗಳು ಕಂಗಾಲಾಗಿವೆ. ಈ ಹಿನ್ನೆಲೆಯಲ್ಲಿ ಈ ಬೃಹತ್ ಪಾದಯಾತ್ರೆಯನ್ನು ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ಆಯೋಜಿ ಸಲಾಗಿದೆ ಎಂದರು.

ಆಲ್ಕೊಳ ವೃತ್ತದಿಂದ ಪಾದಯಾತ್ರೆಯ ಮೂಲಕ ಪ್ರತಿಭಟನಾ ಮೆರವಣಿಗೆ ನಡೆದು, ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು. 60 ವರ್ಷಗಳಿಂದ ಆಗಿರುವ ನಷ್ಟಕ್ಕೆ ಸರ್ಕಾರವೇ ಪರಿಹಾರ ನೀಡಬೇಕು. ಸಂತ್ರಸ್ತರಿಗೆ ಮೀಸಲಿಟ್ಟ ಜಾಗದಲ್ಲಿ ಅರಣ್ಯ ಇಲಾಖೆಯವರು ಒತ್ತುವರಿ ಮಾಡಿಕೊಂಡಿದ್ದು, ಅದನ್ನು ಕೈಬಿಡಬೇಕು. ಭೂ ಕಬಳಿಕೆದಾರರಿಗೆ ನೆರವಾದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. 15 ದಿನದೊಳಗೆ ನಿರಾಶ್ರಿತರಿಗೆ ಭೂಮಿ ಹಂಚಿಕೆ ಮಾಡಬೇಕು. ಇಲ್ಲದಿದ್ದರೆ ನಿರಾಶ್ರಿತ ಕುಟುಂಬಗಳು ಸೇರಿ ಹೋರಾಟವನ್ನು ತೀವ್ರಗೊಳಿಸಲಾಗುವುದು. ಶರಾವತಿ ಮಹಾವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಲಿದ್ದಾರೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಈ ವಿಚಾರವು ಜಿಲ್ಲಾಡಳಿತದ ಹಂತದಲ್ಲಿದ್ದು,ಇತ್ಯರ್ಥವಾಗಬೇಕಿದೆ. ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಸರ್ಕಾರಗಳಿಗೆ ಇಚ್ಚಾಶಕ್ತಿಯ ಕೊರತೆ ಇದೆ. ಅಧಿಕಾರಿಗಳು ಯಾವುದೇ ರೀತಿಯ ಕೆಲಸ ಮಾಡುತ್ತಿಲ್ಲ. ಮುಳಗಡೆ ಸಂತ್ರಸ್ತರಿಗೆ ಭೂಮಿ ನೀಡಬೇಕು. ಜೊತೆಗೆ ಉದ್ಯೋಗ ನೀಡಬೇಕು. ತಕ್ಷಣವೇ ಶರಾವತಿ ಮುಳುಗಡೆ ಸಂತ್ರಸ್ಥರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು ಎಂದು ಆಗ್ರಹಿಸಿದರು.

ಪಾದಯಾತ್ರೆ ಮತ್ತು ಧರಣಿ ಸತ್ಯಾಗ್ರಹದಲ್ಲಿ ನೂರಾರು ರೈತರು, ರೈತ ಮಹಿಳೆಯರು, ಮುಳುಗಡೆ ರೈತರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಮುಳುಗಡೆ ರೈತರಾದ ಹೂವಪ್ಪ, ಗಣಪತಿ, ಅಶೋಕ್ ಕೆ.ಎನ್., ಕೇಶವ, ರಾಜೇಂದ್ರ, ರಘುಪತಿ, ಮಂಜಪ್ಪ ಸಂಕಲಪುರ, ನಾಗರಾಜ್ ಎಂ.ಡಿ.ಕೆ., ಸುರೇಶ್ ಕೆ., ಎಸ್, ರಾಘವೇಂದ್ರ, ಗೋವಿಂದಪ್ಪ ಮತ್ತಿತರರು ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here