ಜಾತಿ ರಹಿತ ವಾತಾವರಣ ಸೃಷ್ಟಿಸಲು ಈ ಬಾರಿ ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಶಿ.ಜು. ಪಾಶ

0
251

ಶಿವಮೊಗ್ಗ: ಸಾಹಿತ್ಯ ಪರಿಷತ್ತಿಗೆ ಹೊಸ ವಾತಾವರಣ ಸೃಷ್ಠಿಸಲು ಕನ್ನಡ ಭಾಷೆ ಬೆಳೆಸಲು ಕ.ಸಾ.ಪ.ದಲ್ಲಿ ಜಾತಿ ರಹಿತ ವಾತಾವರಣ ಸೃಷ್ಟಿಸಲು ನಾನು ಈ ಬಾರಿ ಕ.ಸಾ.ಪ. ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ತಮ್ಮನ್ನು ಗೆಲ್ಲಿಸಬೇಕು ಎಂದು ಅಭ್ಯರ್ಥಿ ಶಿ.ಜು.ಪಾಶ ಮನವಿ ಮಾಡಿದರು.

ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ.9 ರಂದು ಚುನಾವಣೆ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ ಎಂದರೆ ಮೂಗು ಮುರಿಯುವವರೆ ಹೆಚ್ಚಾಗಿದ್ದಾರೆ. ಕ.ಸಾ.ಪ.ದಲ್ಲಿದ್ದ ಅಧ್ಯಕ್ಷರುಗಳು ಜನ ರೋಸಿಹೋಗುವಂತೆ ನಡೆದುಕೊಂಡಿದ್ದಾರೆ. ಜಾತಿಯೇ ಇಲ್ಲಿ ವಿಜೃಂಭಿಸಿದೆ. ಇದನ್ನು ತಪ್ಪಿಸಬೇಕಾಗಿದೆ. ಕಾಟಾಚಾರಕ್ಕೆ ನಡೆಯುವ ಸಾಹಿತ್ಯ ಹುಣ್ಣಿಮೆಗಳು ಕೂಡ ರಾಜಕೀಯಗೊಂಡಿದ್ದವು. ಈ ಎಲ್ಲಾ ಗೊಂದಲಗಳನ್ನು ತಪ್ಪಿಸಿ ಒಂದು ಶುದ್ಧ ಸಾಂಸ್ಕೃತಿಕ ವಲಯವನ್ನಾಗಿ ಸಾಹಿತ್ಯ ಪರಿಷತ್‌ನ್ನು ರೂಪಿಸಬೇಕಾಗಿದೆ. ರಾಜ ಕಾರಣದಿಂದ ಮುಕ್ತಗೊಳ್ಳಬೇಕಾಗಿದೆ. ಕನ್ನಡವನ್ನೇ ಬರೆಯುವ ಲೇಖಕರ ವೇದಿಕೆಯಾಗಬೇಕಾಗಿದೆ ಎಂದರು.

ಪತ್ರಿಕಾ ರಂಗದಲ್ಲಿರುವ ನನಗೆ ಸಾಹಿತ್ಯದ ಬಗ್ಗೆ ಒಲವು ಜಾಸ್ತಿ. ಸ್ಥಳೀಯ ಮಟ್ಟದ ಪತ್ರಿಕೆಗಳು ಸೇರಿದಂತೆ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಲಂಕೇಶ್, ಹಾಯ್ ಬೆಂಗಳೂರು, ಹೊಸತು ಹೀಗೆ ಹಲವು ಪತ್ರಿಕೆಗಳಲ್ಲಿ ನನ್ನ ಕಥೆ ಲೇಖನಗಳು ಪ್ರಕಟವಾಗಿವೆ. ಈಗಾಗಲೇ ಅಪ್ಪನ ಬೇಡಿ, ಕೋಳಿ ಹುಂಜದ ಹೂವು, ಕೆರೆ ಅಂಗಳದ ನವಾಬ, ಮಹಾ ವಿನಾಶ ಡಿಸ್ಕವರಿ ಮುಂತಾದ ಕೃತಿಗಳನ್ನು ರಚಿಸಿದ್ದೇನೆ. ಕರ್ನಾಟಕ ಸಂಘದಿಂದ ಲಂಕೇಶ್ ಪತ್ರಿಕೆ ಪ್ರಶಸ್ತಿ, ಸಂಕ್ರಮಣ ಕಾವ್ಯ ಪ್ರಶಸ್ತಿ, ಶ್ರೀ ನಾಗನಂದ ಪ್ರಶಸ್ತಿ, ಜಿಲ್ಲಾ ಪ್ರೆಸ್ ಗೀಲ್ಡ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವೆ. ಹಲವು ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ಮಾಡಿರುವೆ. ಹೀಗೆ ಸದಾ ಸಾಹಿತ್ಯದ ಕ್ರಿಯಾಶೀಲನಾಗಿರುವೆ. ಒಂದು ಹೊಸ ವಾತಾವರಣ ಸೃಷ್ಠಿಸಲು ನನಗೆ ಅವಕಾಶ ಮಾಡಿಕೊಡಬೇಕು ಎಂದರು.

ಒಬ್ಬರು 3 ಬಾರಿ ಅಧ್ಯಕ್ಷ ಸ್ಥಾನ ಅನುಭವಿಸಿದ್ದಾರೆ. ಇನ್ನೊಬ್ಬರು ನನಗೆ ಒಂದು ಅವಕಾಶ ಕೊಡಿ ವಯಸ್ಸಾಗಿದೆ ಎಂದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮತ್ತೊಮ್ಮೆ ಸ್ಪರ್ಧಿಸುವುದಿಲ್ಲ ಎಂದು ಹೇಳಿ ಈಗ ಮತ್ತೆ ಸ್ಪರ್ಧಿಸುತ್ತಿದ್ದಾರೆ. ಆದ್ದರಿಂದ ಇಂತಹವರಿಗೆ ಅವಕಾಶ ಕೊಡದೆ ಹೊಸಬರಿಗೆ ಅವಕಾಶ ನೀಡಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪದ್ಮನಾಭ್,‌ ಎಸ್.ಕೆ.ಗಜೇಂದ್ರಸ್ವಾಮಿ, ಸುಧೀರ್, ಗೀತಾ, ಅಮೀರ್, ಕುಮಾರ್, ಪ್ರವೀಣ್, ಶ್ರೀನಿವಾಸ್ ಇತರರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here