ಜಾರಿಯಾಗದ ಜಿಲ್ಲಾಧಿಕಾರಿಗಳ ಆದೇಶ ; ರಿಪ್ಪನ್‌ಪೇಟೆಯಲ್ಲಿ ಕಡೆಗೂ ತಪ್ಪಲಿಲ್ಲ ಟ್ರಾಫಿಕ್ ಜಾಮ್ ಕಿರಿಕಿರಿ

0
540

ರಿಪ್ಪನ್‌ಪೇಟೆ: ದಿನೇ ದಿನೇ ವಾಹನಗಳ ದಟ್ಟಣೆಯಿಂದಾಗಿ ಸಾರ್ವಜನಿಕರು, ಶಾಲಾ – ಕಾಲೇಜ್ ವಿದ್ಯಾರ್ಥಿಗಳು, ರೈತನಾಗರೀಕರು ಟ್ರಾಫಿಕ್ ಕಿರಿಕಿರಿಯಿಂದಾಗಿ ರಸ್ತೆ ದಾಟದಂತಾಗಿದ್ದು ಈ ಬಗ್ಗೆ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ಇಕ್ಕೇರಿಯವರು ಆದೇಶ ಹೊರಡಿಸಿ ನಾಲ್ಕು ಸಂಪರ್ಕ ರಸ್ತೆಯಲ್ಲಿ ಒಂದೊಂದು ದಿನ ಒಂದೊಂದು ಕಡೆಯಲ್ಲಿ ದ್ವಿಚಕ್ರ ವಾಹನ ಸೇರಿದಂತೆ ಇತರ ವಾಹನಗಳ ನಿಲುಗಡೆಗೆ ಆದೇಶ ಹೊರಡಿಸಲಾಗಿದ್ದರೂ ಕೂಡಾ ಆ ಆದೇಶ ಜಾರಿಯಾಗದೆ ಕಸದ ತೊಟ್ಟಿ ಸೇರಿದಂತಾಗಿದೆ ಎಂದು ಶಾಲಾ – ಕಾಲೇಜ್ ವಿದ್ಯಾರ್ಥಿಗಳು, ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲಾ – ಕಾಲೇಜ್ ವಿದ್ಯಾರ್ಥಿಗಳು ಮತ್ತು ರೈತನಾಗರೀಕರ ಮನವಿಯನ್ನಾದರಿಸಿ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಇಕ್ಕೇರಿಯವರು ಒಂದೊಂದು ರಸ್ತೆಯಲ್ಲಿ ಒಂದೊಂದು ದಿನ ಒಂದು ಕಡೆಯಲ್ಲಿ ವಾಹನ ನಿಲುಗಡೆ ಮಾಡುವಂತೆ ಆದೇಶ ಹೊರಡಿಸಿ ಟ್ರಾಫಿಕ್ ಸಮಸ್ಯೆ ಪರಿಹಾರ ಕಲ್ಪಿಸಲಾಗಿದ್ದು ನಾಲ್ಕು ರಸ್ತೆ ಸೇರುವ ವಿನಾಯಕ ವೃತ್ತದ 100 ಮೀಟರ್ ಅಂತರದಲ್ಲಿ ನಾಮಫಲಕವನ್ನು ಅಳವಡಿಸಲಾಗಿದ್ದರೂ ಆದೇಶ ಮಾತ್ರ ಜಾರಿಯಾಗದೆ ಎಲ್ಲೆಂದರಲ್ಲಿ ವಾಹನಗಳನ್ನು ಅಡ್ಡ-ದಿಡ್ಡಿಯಾಗಿ ನಿಲ್ಲಿಸಿ ಜನರು ಓಡಾಡದಂತೆ ವಾಹನಗಳ ದಟ್ಟಣೆಯಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದರೂ ಕೂಡಾ ಪೊಲೀಸ್ ಇಲಾಖೆ ಗೊತ್ತಿಲ್ಲದವರೆಂತೆ ನಿರ್ಲಕ್ಷ್ಯ ವಹಿಸಿದ್ದಾರೆ.

ಠಾಣೆಗೆ ವರ್ಗಾವಣೆಯಾಗಿ ಬಂದ ನಾಲ್ಕು ದಿನಗಳು ಮಾತ್ರ ಸರ್ಕಲ್‌ಗೆ ಪೊಲೀಸರನ್ನು ನಿಯೋಜಿಸುತ್ತಾರೆ ನಂತರ ‘ಹಳೇ ಗಂಡನ ಪಾದವೇ ಗತಿ’ ಎಂಬಂತೆ ಯಥಾಪ್ರಕಾರ ವಾಹನಗಳು ಎಲ್ಲಿಬೇಕಾದಲ್ಲಿ ನಿಲ್ಲಿಸುತ್ತಾರೆ. ಕೆಲವರಂತೂ ಅರ್ಧ ರಸ್ತೆಗೆ ನಿಲ್ಲಿಸಿ ಅಂಗಡಿ, ಔಷಧಿ ಅಂಗಡಿಗಳಿಗೆ ತೆರಳುತ್ತಾರೆ. ಹೇಳುವವರು ಕೇಳುವವರು ಇಲ್ಲದ ಸ್ಥಿತಿಯಲ್ಲಿ ನಾಗರೀಕರು ಮತ್ತು ವಾಹನ ಚಾಲಕರು ತಮ್ಮ ವಾಹನಗಳನ್ನು ದಾಟಿಸುವಲ್ಲಿ ಹರಸಾಹಸ ಪಡುವಂತಾಗಿದ್ದಾರೆ.

ಶಾಂತಿ ಸಮಿತಿ ಸಭೆಯಲ್ಲಿ ಸಹ ಈ ಬಗ್ಗೆ ವರದಿಗಾರರು ಪ್ರಶ್ನಿಸಿದಾಗ ಆದೇಶ ಬಂದಿರುವುದು ಗೊತ್ತಿಲ್ಲ ನೋಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿ ವರ್ಷಗಳಾದರೂ ಇನ್ನೂ ಜಿಲ್ಲಾಧಿಕಾರಿಗಳ ಆದೇಶ ಕೈಗೆ ಸಿಕ್ಕಂತೆ ಕಾಣುತ್ತಿಲ್ಲ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಹಾಗಾದರೆ ಜಿಲ್ಲಾಧಿಕಾರಿಗಳ ಆದೇಶಕ್ಕೆ ಕಿಮ್ಮತ್ತಿಲ್ಲವೇ? ಎಂಬ ಬಗ್ಗೆ ಸಂಶಯ ಮೂಡುವಂತಾಗಿದೆ.

ರಾಜ್ಯದ ಗೃಹ ಸಚಿವರು ವಾರಕ್ಕೆ, ಹದಿನೈದು ದಿನಕ್ಕೆ ಒಮ್ಮೆ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ ಆ ಸಂದರ್ಭದಲ್ಲಿ ಯಾರಾದರೂ ಗಣ್ಯ ವ್ಯಕ್ತಿಗಳು ಹೋಗುವಾಗ ಮಾತ್ರ ಇಲ್ಲಿನ ವಿನಾಯಕ ಸರ್ಕಲ್‌ಗೆ ಸಿಬ್ಬಂದಿಗಳನ್ನು ನಿಯೋಜಿಸುತ್ತಾರೆ ಉಳಿದಂತೆ ಯಾರು ಇರುವುದಿಲ್ಲ. ಸಾಗರ-ತೀರ್ಥಹಳ್ಳಿ ಹೊಸನಗರ-ಶಿವಮೊಗ್ಗ ನಾಲ್ಕು ರಸ್ತೆಗಳ ಸಂಪರ್ಕದ ವಿನಾಯಕ ವೃತ್ತದಲ್ಲಿ ಸಾಕಷ್ಟು ಅಪಘಾತಗಳು ಅವಘಡಗಳು ಸಂಭವಿಸುತ್ತಿರುತ್ತವೆ. ಸಾರ್ವಜನಿಕರು ನಿಂತು ನೋಡುತ್ತಿರುತ್ತಾರೆ. ಕಡೆಗೆ ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ‘ನಮಗ್ಯಾಕೆ ಊರ ಉಸಾಬರಿ’ ಎಂದು ಹೇಳಿಕೊಳ್ಳುತ್ತಾ ಜಾಗ ಖಾಲಿ ಮಾಡುವ ದಿನ ಮಾನ್ಯದಲ್ಲಿ ಜಿಲ್ಲಾಧಿಕಾರಿಗಳ ಆದೇಶವನ್ನು ಅನುಷ್ಠಾನಗೊಳಿಸಿ ಸಾರ್ವಜನಿಕರಿಗೆ, ಶಾಲಾ – ಕಾಲೇಜ್ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ಆಗುತ್ತಿರುವ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಕಾಣಿಸಲು ಮುಂದಾಗುವರೆ ಕಾದು ನೋಡಬೇಕಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here