ಜಿಲ್ಲಾಧಿಕಾರಿಗಳ ನಡಿಗೆ ಗ್ರಾಮಗಳ ಕಡೆಗೆ: ವಿನೂತನ ಕಾರ್ಯಕ್ರಮ

0
487

ಚಿಕ್ಕಮಗಳೂರು: ಜನರ ಸಮಸ್ಯೆಗಳನ್ನು ಅರಿತು ಸ್ಥಳದಲ್ಲಿಯೇ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ದೃಷ್ಠಿಯಿಂದ ಸರ್ಕಾರ ಜಿಲ್ಲಾಧಿಕಾರಿಗಳ ನಡಿಗೆ ಗ್ರಾಮದ ಕಡೆಗೆ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್. ಸುರೇಶ್ ತಿಳಿಸಿದರು.

ತರೀಕೆರೆ ತಾಲ್ಲೂಕು ಲಿಂಗದಹಳ್ಳಿ ಹೋಬಳಿಯ ನಂದಿಬಟ್ಟಲು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡಿಗೆ ಗ್ರಾಮದ ಕಡೆಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,‌ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ದೂರದ ಊರುಗಳಿಂದ ಕಛೇರಿಗೆ ಬರುವುದನ್ನು ತಪ್ಪಿಸುವ ದೃಷ್ಠಿಯಿಂದ ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ, ಜನರು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಬಳಿ ನಿವೇದಿಸಿಕೊಳ್ಳುವ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ, ಜಿಲ್ಲಾಧಿಕಾರಿಗಳು ಯಾವ ಇಲಾಖೆಯಲ್ಲಿ ಕೆಲಸವಾಗಬೇಕು ಎಂಬುದರ ಕುರಿತು ಅಧಿಕಾರಿಗಳಿಗೆ ಅರ್ಜಿಯನ್ನು ವರ್ಗಾಹಿಸುವರು. ಅಧಿಕಾರಿಗಳು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವುದಿದ್ದರೆ ಸಮಸ್ಯೆಗಳಿಗೆ ಪರಿಹಾರ ನೀಡುವರು.‌ ಕಾನೂನಾತ್ಮಕವಾಗಿ ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕ್ರಮ ವಹಿಸುವರು ಎಂದರು.

ಗ್ರಾಮದ ಜನರ ಸಮಸ್ಯೆಗಳಾದ ಬಗರ್ ಹುಕ್ಕಂ, ಸಾಗುವಳಿ ಚೀಟಿ, ವೃದ್ಧಾಪ್ಯ ವೇತನ, ವಿಧವಾ ವೇತನ ಮುಂತಾದ ಸಮಸ್ಯೆಗಳಿಂದ 178ಅರ್ಜಿಗಳು ಬಂದಿದ್ದು, ಗ್ರಾಮ ಪಂಚಾಯಿತಿಯಿಂದ ಮೂಲಭೂತ ಸೌಕರ್ಯಗಳಿಗಾಗಿ 101 ಅರ್ಜಿಗಳು ಸ್ವೀಕೃತವಾಗಿದ್ದು, ಅಧಿಕಾರಿಗಳು ಈ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು.

ಲಿಂಗದಹಳ್ಳಿ ಹೋಬಳಿಯ ಕೆರೆಗಳನ್ನು ತುಂಬಿಸುವುದು ಹಲವಾರು ವರ್ಷದ ಕನಸಾಗಿದ್ದು, ಇದಕ್ಕೆ ಭದ್ರಾ ಉಪ ಕಣಿವೆಯಿಂದ ತರೀಕೆರೆ, ಬೀರೂರು, ಕಡೂರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 1281 ಕೋಟಿ ರೂ. ಮಂಜೂರಾಗಿದ್ದು, ಲಿಂಗದಹಳ್ಳಿ ಹೋಬಳಿಯಲ್ಲಿರುವ 23 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 418 ಕೋಟಿ ರೂ. ಮಂಜೂರಾತಿ ದೊರೆತಿದ್ದು, ಶೀಘ್ರದಲ್ಲಿ ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಟೆಂಡರ್ ಕರೆದು ಚಾಲನೆ ನೀಡಲಾಗುವುದು ಎಂದರು.

ಬಳ್ಳಾವರದಿಂದ ನಂದಿಬಟ್ಟಲು ಗ್ರಾಮದ ರಸ್ತೆಯನ್ನು ದುರಸ್ಥಿಗೊಳಿಸಲಾಗಿದೆ ನಂದಿಬಟ್ಟಲು ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಯನ್ನು ಮಾಡಲು ಗ್ರಾಮಸ್ಥರಿಂದ ಬೇಡಿಕೆ ಬಂದಿದ್ದು, ಕ್ರಮ ವಹಿಸಲಾಗುವುದು ಎಂದು ಹೇಳಿದ ಅವರು, ಕೋವಿಡ್-19 ಸಂದರ್ಭದಲ್ಲಿಯೂ ಸಹ ಸರ್ಕಾರವು ಅಭಿವೃದ್ಧಿ ಯೋಜನೆಗಳಿಗೆ ಅನುದಾನವನ್ನು ಕುಂಠಿತಗೊಳಿಸದೇ ಬಿಡುಗಡೆ ಮಾಡುತ್ತಿದೆ, ಕೊರೋನ 2ನೇ ಅಲೆ ಪ್ರಾರಂಭವಾಗಿದ್ದು, ಜನರು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದರು.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ಒಂದು ಅಭಿವೃದ್ಧಿ ಕಾರ್ಯವು ಒಬ್ಬ ವ್ಯಕ್ತಿಯಿಂದ ಸಾಧ್ಯವಾಗುವುದಿಲ್ಲ ಬದಲಾಗಿ ಎಲ್ಲಾ ಇಲಾಖೆಯ ಅಧಿಕಾರಿಗಳ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಾಗಿರುವುದು ಅಗತ್ಯ ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಜನರ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಜನಸಾಮಾನ್ಯರಿಗೆ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಜಿಲ್ಲಾಧಿಕಾರಿಗಳ ಕಛೇರಿಯು ಮುಕ್ತವಾಗಿರುತ್ತದೆ. ಯಾವುದೇ ಸಮಸ್ಯೆಗಳಿದ್ದಲ್ಲಿ ಜನರು ನೇರವಾಗಿ ಭೇಟಿ ಮಾಡಿ ಸಮಸ್ಯೆಗಳನ್ನು ಚರ್ಚಿಸುವ ಮೂಲಕ ಬಗೆಹರಿಸಿಕೊಳ್ಳಬಹುದು ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು ಅಧಿಕಾರಿಗಳ ಉತ್ತಮ ಕಾರ್ಯದಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ಗ್ರಾಮೀಣ ಭಾಗದ ಜನರ ಸಮಸ್ಯೆಗಳು ಒಂದು ಇಲಾಖೆಗೆ ಸೀಮಿತವಾಗಿಲ್ಲ ಬೇರೆ ಬೇರೆ ಇಲಾಖೆಗೆ ಸಂಬಂಧಿಸಿರುವುದರಿಂದ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸವನ್ನು ನಿರ್ವಹಿಸಬೇಕು ಎಂದು ಹೇಳಿದರು.

ಅಬ್ದುಲ್ ಕಲಂ ರವರ ಗ್ರಾಮಗಳ ಅಭಿವೃದ್ಧಿಯ ಕನಸು ಕಟ್ಟ ಕಡೆಯ ಗ್ರಾಮಗಳಲ್ಲಿ ಈಡೇರಲು ಸಾಧ್ಯವಾಗಿಲ್ಲ. ಕಾರಣ ಗ್ರಾಮಗಳಲ್ಲಿನ ಜನರ ಸಂಪನ್ಮೂಲಗಳ ಹಾಗೂ ಕಾನೂನಿನ ಅರಿವಿನ ಕೊರತೆ ಇವುಗಳಿಂದ ಅಭಿವೃದ್ಧಿ ಸಾಧ್ಯವಾಗಿಲ್ಲ ಈ ನಿಟ್ಟಿನಲ್ಲಿ ಅಧಿಕಾರಿಗಳು ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು.

ಜನರಿಂದ ಜನರಿಗಾಗಿ ಎಂಬ ಸಂವಿಧಾನದ ಘೋಷ ವಾಕ್ಯದಂತೆ ಗ್ರಾಮಗಳ ಅಭಿವೃದ್ಧಿ ಮೂಲಕ ಯಶಸ್ವಿಗೊಳಿಸೋಣ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಅವರ ಪ್ರತಿಭೆಗೆ ತಕ್ಕ ವಿದ್ಯಾಭ್ಯಾಸ ನೀಡಿದರೆ ಕುಟುಂಬದ ಅಭಿವೃದ್ಧಿಯ ಜೊತೆಗೆ ಗ್ರಾಮದ ಅಭಿವೃದ್ಧಿಯಾಗುತ್ತದೆ ಎಂದರು.

ವಿದ್ಯಾರ್ಥಿಗಳು ಒಂದು ನಿರ್ಧಿಷ್ಟವಾದ ಗುರಿ ಇಟ್ಟುಕೊಂಡು ಗುರಿಗೆ ತಕ್ಕಂತಹ ಛಲವನ್ನು ಬೆಳೆಸಿಕೊಂಡಲ್ಲಿ ಭವಿಷ್ಯದಲ್ಲಿ ಉತ್ತಮ ಸ್ಥಾನ ಗಳಿಸುವ ಮೂಲಕ ಯಶಸ್ಸು ಕಾಣಬಹುದು, ಈ ಹಿನ್ನಲೆಯಲ್ಲಿ ಪ್ರಥಮ ಬಾರಿಗೆ ಶಾಲಾ ಮಕ್ಕಳಿಗೆ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಿ ಅವರ ಪ್ರತಿಭೆಯನ್ನು ಗುರುತಿಸುವ ಕಾರ್ಯವನ್ನು ಕೈಗೊಳ್ಳಲಾಗುವುದು.

ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಗುವುದು ಜಿಲ್ಲೆಯಲ್ಲಿ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನಕ್ಕೆ ಸಂಬಂಧಿಸಿದಂತೆ ಅರ್ಹ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.

ತರೀಕೆರೆ ತಹಸೀಲ್ದಾರ್ ಗೀತಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಮದ ಸಮಸ್ಯೆಗಳಾದ ಸ್ಮಶಾನ ಭೂಮಿಯನ್ನು ಗುರುತಿಸುವುದು, ಜಮೀನಿನ ಪೋಡಿ, ಅಮೃತ್ ಕಾವಲು ರಾಸುಗಳು ಮೇಯುವ ಸ್ಥಳಗಳಲ್ಲಿ ಅರಣ್ಯ ಇಲಾಖೆಯವರು ಬಿದಿರು ನೆಟ್ಟಿರುವುದರಿಂದ ರಾಸುಗಳು ಮೇಯಲು ತೊಂದರೆಯಾಗುತ್ತಿದೆ. ಬಿದಿರನ್ನು ಬೇರೆ ಸ್ಥಳದಲ್ಲಿ ಬೆಳೆಸುವಂತೆ ಮನವಿ ಸಲ್ಲಿಸಿದರು. ಕುಡಿಯುವ ನೀರಿನ ಶುದ್ಧ ಗಂಗಾ ಘಟಕದ ಸ್ಥಾಪನೆ, ಅಂಗನವಾಡಿ ಕೇಂದ್ರದ ಸ್ಥಾಪನೆ, ಕೆ.ಎಸ್.ಆರ್.ಟಿ.ಸಿ ಬಸ್‌ಗಳ ಸೌಲಭ್ಯ ಒದಗಿಸುವ ಕುರಿತು ಮುಂತಾದ ಮೂಲಭೂತ ಸೌಕರ್ಯಗಳ ಸಮಸ್ಯೆಗಳ ಕುರಿತು ಗ್ರಾಮಸ್ಥರು ಮನವಿ ಸಲ್ಲಿಸಿದರು.

ಕೋವಿಡ್-19 ಸಂಬಂಧಿಸಿದಂತೆ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ತರೀಕೆರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಸಂಜೀವ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾಮಣಿ, ಉಪಾಧ್ಯಕ್ಷ ರಮೇಶ್, ಅಪರ ಜಿಲ್ಲಾಧಿಕಾರಿ ಬಿ.ಆರ್.ರೂಪಾ, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ನಾರಾಯಣ ಮೂರ್ತಿ, ತರೀಕೆರೆ ವಿಭಾಗದ ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here