ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ | ಬೆಳ್ಳೂರು-ಹುಂಚ ವ್ಯಾಪ್ತಿಯಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ, ಕಿರಾಣಿ ಅಂಗಡಿಯಲ್ಲಿ ಅಕ್ರಮ ಮದ್ಯ, ಗಾಂಜಾ ಮಾರಾಟ ತಡೆಯಲು ಡಿಸಿಗೆ ರೈತ ನಾಗರೀಕರ ಮನವಿ

0
505

ರಿಪ್ಪನ್‌ಪೇಟೆ: ಹುಂಚ-ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಬಿಎಸ್‌ಎನ್‌ಎಲ್ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಎದುರಿಸುವಂತಾಗಿದೆ ಎಂದು ಹುಂಚ ಗ್ರಾಮ ಪಂಚಾಯ್ತಿ ಸದಸ್ಯೆ ಯಶಸ್ವತಿ ವೃಷಭರಾಜ್ ಜೈನ್ ಡಿಸಿಯವರಿಗೆ ಮನವಿ ಸಲ್ಲಿಸಿದರೆ ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಪ್ರದೇಶದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಅವ್ಯಾಹಿತವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆಂದು ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿಯವರ ಬಳಿ ಅಹವಾಲು ಸಲ್ಲಿಸಿದರು.

ಸಾರ್ವಜನಿಕರ ಅಹವಾಲು ಸ್ವೀಕರಿಸಿ ತಕ್ಷಣ ಕ್ರಮ ಜರುಗಿಸುವಂತೆ ಅಬಕಾರಿ ಇಲಾಖೆಯವರಿಗೆ ಸೂಚನೆ ನೀಡಲಾಗಿ ಕುಡಿಯುವ ನೀರು ಮತ್ತು ಅಂಗನವಾಡಿ ಸಂಪರ್ಕ ರಸ್ತೆ ಸೇರಿದಂತೆ ಶಾಲಾ ಕಟ್ಟಡ ಹೀಗೆ ಅಗತ್ಯವಿರುವ ಕೃಷಿ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳ ಬಗ್ಗೆ ಕ್ರಮ ಜರುಗಿಸಲಾಗುವುದು ಇಲಾಖೆಯ ಅಧಿಕಾರಿಗಳಿಗೆ ತುರ್ತು ಗಮನಹರಿಸುವಂತೆ ಸೂಚಿಸಿರುವುದಾಗಿ ವಿವರಿಸಿದರು.

ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮಗಳಲ್ಲಿ ಬಗರ್‌ಹುಕುಂ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಸಾಗುವಳಿ ಪತ್ರ ನೀಡುವುದರ ಬಗ್ಗೆ ಸಾಕಷ್ಟು ರೈತರು ಮನವಿ ಸಲ್ಲಿಸಿದ್ದಾರೆ ಈ ಬಗ್ಗೆ ಸರ್ಕಾರದ ನಿಯಮದಂತೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ ಅವರು, ಸಂಧ್ಯಾ ಸುರಕ್ಷಾ, ಅಂಗವಿಕಲ, ವಿಧವಾವೇತನ ಸ್ಥಳದಲ್ಲಿ ಮಂಜೂರಾತಿ ಆದೇಶ ನೀಡಲಾಗುವುದು ಎಂದರು.

ಸಂಪರ್ಕ ರಸ್ತೆ ಹಾಗೂ ವಿವಿಧ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಜಿಲ್ಲಾಧಿಕಾರಿಗಳು ಇಂದು ವಾಸ್ತವ್ಯದ ಸಂದರ್ಭದಲ್ಲಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ವಿವರಿಸಿ ಜನರು ಸರತಿ ಸಾಲಿನಲ್ಲಿ ಬಂದು ತಮ್ಮ ಅಹವಾಲು ಸಲ್ಲಿಸಿ ನಾನು ಗ್ರಾಮದಲ್ಲಿ ಇಂದು ಇರುತ್ತೇನೆಂದು ಹೇಳಿದರು.

ಶರಾವತಿ ಮುಳುಗಡೆ ಸಂತ್ರಸ್ತರೇ ಹೆಚ್ಚು ನೆಲೆಸಿರುವ ಈ ಗ್ರಾಮ ವ್ಯಾಪ್ತಿಯಲ್ಲಿ ಅವರಿಗೆ ಶಾಶ್ವತ ಪರಿಹಾರ ಒದಗಿಸುವುದರ ಬಗ್ಗೆ ವನ್ಯ ಜೀವಿ ಅರಣ್ಯಪ್ರದೇಶ ಅಡ್ಡಿಯಾಗಿದೆ ಈ ಬಗ್ಗೆ ಸರ್ಕಾರದ ಗಮನಸೆಳೆಯಲಾಗುವುದು ಇನ್ನೂ ಭೂ ಮಂಜೂರಾಗಿರುವ ಫಲಾನುಭವಿಗಳಿಗೆ ಆರ್ ಟಿ ಸಿ ನೋಂದಣಿ ವಿಳಂಬವಾಗಿರುವುದರ ಕುರಿತು ತಕ್ಷಣ ಆರ್.ಟಿ.ಸಿ ನೊಂದಣಿ ಮಾಡುವಂತೆ ತಹಶೀಲ್ದಾರ್‌ರಿಗೆ ಸೂಚಿಸಿ, ಗ್ರಾಮೀಣ ಪ್ರದೇಶದಲ್ಲಿನ ಸಮಸ್ಯೆಗಳು ಈ ರೀತಿಯ ಕಾರ್ಯಕ್ರಮಗಳಿಂದ ಖುದ್ದು ಜನರೊಂದಿಗೆ ಚರ್ಚಿಸಲು ಉತ್ತಮ ಯೋಜನೆಯಾಗಿದೆ ಇದರಿಂದ ಹಳ್ಳಿಯ ಜನರು ಸಮಸ್ಯೆ ಅರಿತು ಪರಿಹರಿಸಲು ಒಳ್ಳೆಯ ಅವಕಾಶವಾಗಿದೆ ಎಂದರು.

ಸಾಗರ ಉಪವಿಭಾಗಾಧಿಕಾರಿ ನಾಗರಾಜ್, ತಾಲ್ಲೂಕ್ ತಹಶೀಲ್ದಾರ್ ಎಸ್.ವಿ.ರಾಜೀವ್, ತಾಲ್ಲೂಕ್ ಪಂಚಾಯ್ತಿ ಇಓ ಪ್ರವೀಣ್‌ಕುಮಾರ್, ಬೆಳ್ಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭವಾನಿದಿವಾಕರ್, ಉಪಾಧ್ಯಕ್ಷ ಬುಕ್ಕಿವರೆ ರಾಜೇಶ್ ಇನ್ನಿತರ ಗ್ರಾಮ ಪಂಚಾಯ್ತಿ ಸದಸ್ಯರು, ಕಂದಾಯ, ತೋಟಗಾರಿಕೆ, ಕೃಷಿ, ಜಿಲ್ಲಾ ಪಂಚಾಯ್ತಿ ಇಂಜಿನಿಯರ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಮೆಸ್ಕಾಂ, ಅಬಕಾರಿ, ಅರಣ್ಯ ,ಶಿಶುಕಲ್ಯಾಣಾಭಿವೃದ್ದಿ, ಆರೋಗ್ಯ, ಪಶುಇಲಾಖೆ ಸೇರಿದಂತೆ ಇನ್ನಿತರ ಇಲಾಖೆಯ ಅಧಿಕಾರಿವರ್ಗ ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here